
ಮಡಿಕೇರಿ: ಆನ್‌ಲೈನ್ ವಂಚನೆ, ಸೈಬರ್ ಅಪರಾಧಗಳ ಕುರಿತು ಜಾಗರೂಕವಾಗಿರಬೇಕು. ಯಾವುದೇ ಬಗೆಯ ಗೊತ್ತಿರದ, ಶಂಕಾಸ್ಪದ ಆನ್‌ಲೈನ್ ಲಿಂಕ್‌ಗಳನ್ನು ತೆರೆಯಬಾರದು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮನವಿ ಮಾಡಿದರು.
ಇಲ್ಲಿನ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿ ವೇಳೆ ಅವರು ಈಚೆಗೆ ಜಿಲ್ಲೆಯಲ್ಲಿ ನಡೆದ ಅಪರಾಧ ಪ್ರಕರಣಗಳ ಕುರಿತು ಮಾಹಿತಿ ನೀಡುವಾಗ ಈ ವಿಷಯ ಪ್ರಸ್ತಾಪಿಸಿದರು.
ಕೊಡಗಿನ ಯುವತಿಯರ ಕುರಿತು ಕೀಳು ಮಟ್ಟದ ಮಾತುಗಳಿರುವ ಲಿಂಕ್‌ವೊಂದು ಸಾಕಷ್ಟು ಹರಿದಾಡುತ್ತಿರುವ ಕುರಿತು ದೂರುಗಳು ಬಂದ್ದಿದ್ದು, ಈ ಕುರಿತು ತನಿಖೆ ನಡೆದಿದೆ. ಸಾರ್ವಜನಿಕರಿಗೂ ಈ ಬಗೆಯ ಲಿಂಕ್‌ಗಳು ಬಂದಿದ್ದರೆ ಅದನ್ನು ತೆರೆಯಬಾರದು. ಮತ್ತು ಕೂಡಲೇ ಇದರ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು ಎಂದರು.
ಆನ್‌ಲೈನ್ ವಂಚನೆಗಳು ಆದ ಸಂದರ್ಭದಲ್ಲಿ 1930 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು. ಇದರಿಂದ ಕಳೆದುಕೊಂಡ ಹಣವನ್ನು ವಾಪಸ್ ಪಡೆಯಲು ಹಾಗೂ ಹೆಚ್ಚು ಹಣ ಕಳೆದು ಹೋಗದಂತೆ ತಡೆಯಬಹುದು ಎಂದು ಹೇಳಿದರು.
ತೋಟಗಳಲ್ಲಿರುವ ಹೊರರಾಜ್ಯದ ಕಾರ್ಮಿಕರ ಕುರಿತು ನಿಗಾ ವಹಿಸಲಾಗಿದೆ. ಈಗ ದತ್ತಾಂಶ ಕಾರ್ಯ ನಡೆದಿದ್ದು, ಬಳಿಕ ಪರಿಶೀಲನೆ ನಡೆಯಲಿದೆ. ತೋಟಗಳ ಮಾಲೀಕರು ಈ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಅಪ್ಪನನ್ನೇ ಕೊಂದ ಪ್ರಕರಣ; ಎಲ್ಲ ಆರೋಪಿಗಳ ಬಂಧನ
ಮಡಿಕೇರಿ ತಾಲ್ಲೂಕಿನ ಹೊಸ್ಕೇರಿ ಗ್ರಾಮದಲ್ಲಿ ಪ್ರಶಾಂತ್ ಮುದಿ ಎಂಬಾತ ತನ್ನ ಅಪ್ಪನನ್ನೆ ಕೊಂದು ಸುಟ್ಟು ಹಾಕಿದ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಹಾಗೆಯೇ ‘ಹನಿಟ್ರ್ಯಪ್’ ಎಂದು ಹೇಳಲಾದ ವ್ಯಕ್ತಿಯೊಬ್ಬರನ್ನು ಬ್ಲಾಕ್‌ಮೇಲ್ ವಂಚಿಸಿದ ಪ್ರಕರಣದಲ್ಲಿ ಎಲ್ಲ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.