ಮಡಿಕೇರಿ: ‘ಜಾತಿ ಗಣತಿ ವರದಿಯಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ. ಆದರೆ, ವರದಿ ಜಾರಿ ಕುರಿತು ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ’ ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಇಲ್ಲಿ ಶನಿವಾರ ಪ್ರತಿಪಾದಿಸಿದರು.
‘ಈ ಕುರಿತು ಸರ್ಕಾರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರಬೇಕು. ವೈಯಕ್ತಿಕ ಅಭಿಪ್ರಾಯಗಳು ಏನೇ ಇದ್ದರೂ ಅದು ಮುಂದಿನ ಸಂಪುಟ ಸಭೆಯಲ್ಲಿ ಚರ್ಚೆಯಾಗುತ್ತದೆ. ವರದಿ ಜಾರಿ ಸಂಬಂಧ ಸಂಪುಟ ಉಪಸಮಿತಿ ರಚಿಸಬೇಕೇ ಅಥವಾ ಸದನಕ್ಕೆ ಬಿಡಬೇಕೇ ಎಂಬ ಚರ್ಚೆ ಇದೆ. ಇನ್ನೂ ಯಾವುದೂ ನಿರ್ಧಾರವಾಗಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಮುಖ್ಯಮಂತ್ರಿ ಸ್ಥಾನ 30 ತಿಂಗಳು, 50 ತಿಂಗಳು ಒಪ್ಪಂದವಾಗಿರುವುದು ನನಗೆ ಗೊತ್ತಿಲ್ಲ. ಅದನ್ನು ಹೈಕಮಾಂಡ್ ಬಳಿ ಕೇಳಬೇಕು. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಪೂರ್ಣಾವಧಿ ಪೂರೈಸಲಿದೆ’ ಎಂದರು.
‘ಕೊಡಗಿನಲ್ಲಿ ಹಿಂದೆ ಧರ್ಮವೇ ರಾಜಕೀಯದ ವಿಷಯವಾಗಿತ್ತು. ಬೆಳಗಾವಿಯಲ್ಲಿ ಕನ್ನಡ– ಮರಾಠಿ ಮಾತ್ರವೇ ಚುನಾವಣಾ ವಿಷಯವಾಗಿತ್ತು. ಆದರೆ, ಈಗ ಅಭಿವೃದ್ಧಿ ಮುಖ್ಯ ವಿಷಯವಾಗುತ್ತಿದೆ. ಎರಡೂ ಕಡೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.