ADVERTISEMENT

ಭತ್ತ ಖರೀದಿ: 11 ಮಂದಿ ನೋಂದಣಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:08 IST
Last Updated 18 ಡಿಸೆಂಬರ್ 2018, 12:08 IST

ಮಡಿಕೇರಿ: ಭತ್ತ ಖರೀದಿಯ ನೋಂದಣಿ ಪ್ರಕ್ರಿಯೆ ಶುರುವಾಗಿದ್ದು, ರೈತರು ಮತ್ತು ಗಿರಣಿ ಮಾಲೀಕರು ಆಯಾ ವ್ಯಾಪ್ತಿಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಕೋರಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಟಾಸ್ಕ್‌ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಭತ್ತ ಖರೀದಿಗೆ ಸಾಕಷ್ಟು ಬೇಡಿಕೆಯಿದೆ. ಈ ಬಗ್ಗೆ ರೈತರು ಮತ್ತು ಅಕ್ಕಿ ಗಿರಣಿ ಮಾಲೀಕರು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಕೋರಿದರು.

ADVERTISEMENT

ಮಡಿಕೇರಿ, ಗೋಣಿಕೊಪ್ಪಲು, ಕುಶಾಲನಗರ ಎಪಿಎಂಸಿಗಳಲ್ಲಿರೈತರು ಮತ್ತು ಗಿರಣಿ ಮಾಲೀಕರು ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ವಿವರಿಸಿದರು.

ಆಹಾರ ಇಲಾಖೆ ಉಪ ನಿರ್ದೇಶಕ ಎಸ್. ಸದಾಶಿವಯ್ಯ ಮಾತನಾಡಿ, ಜಿಲ್ಲೆಯಲ್ಲಿ 33 ಅಕ್ಕಿ ಗಿರಣಿಗಳಿದ್ದು, ಈವರೆಗೆ ಇಬ್ಬರು ಗಿರಣಿ ಮಾಲೀಕರು ಮಾತ್ರ ಹೆಸರು ನೋಂದಾಯಿಸಿದ್ದಾರೆ. 11 ಮಂದಿ ರೈತರು ಮಾತ್ರ ಹೆಸರು ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಕನಿಷ್ಠ ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್ ಭತ್ತಕ್ಕೆ ₹ 1750, ನಿಗದಿ ಪಡಿಸಲಾಗಿದೆ. ಸರ್ಕಾರದ ನಿರ್ದೇಶನದಂತೆ ಅಕ್ಕಿ ಗಿರಣಿ ಮಾಲೀಕರು ಒಂದು ಕ್ವಿಂಟಲ್ ಭತ್ತಕ್ಕೆ 67 ಕೆ.ಜಿ. ಅಕ್ಕಿ ನೀಡಬೇಕಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.