ನಾಪೋಕ್ಲು: ಸಮೀಪದ ನರಿಯಂದಡ ಗ್ರಾಮದಲ್ಲಿ ಭತ್ತದ ನಾಟಿಗೆ ರೈತರು ಸಜ್ಜಾಗಿದ್ದಾರೆ. ಈಗಾಗಲೇ ಗದ್ದೆಗಳನ್ನು ಉಳುಮೆ ಮಾಡಿದ್ದು, ಸಸಿಮಡಿಗಳನ್ನು ಸಿದ್ಧಗೊಳಿಸಲಾಗಿದೆ. ಅಂತೆಯೇ ರೈತರು ಗದ್ದೆಯಲ್ಲಿ ನಾಟಿ ಕಾರ್ಯಕ್ಕೆ ಮುಂದಾಗಿದ್ದಾರೆ.
ಕಾರ್ಮಿಕರ ಕೊರತೆಯ ನಡುವೆಯೂ ಕೂಡು ನಾಟಿ ಪದ್ಧತಿಯನ್ನು ಮಾಡುತ್ತಾ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ನರಿಯಂದಡ ಗ್ರಾಮದ ರೈತ ಪೊಕ್ಕೋಳಂಡ್ರ ಧನೋಜ್ ಅವರು ತಮಗೆ ಸೇರಿದ ಒಟ್ಟು ನಾಲ್ಕು ಎಕರೆಯ ಗದ್ದೆಯಲ್ಲಿ ಕುಟುಂಬಸ್ಥರನ್ನು ಒಟ್ಟುಗೂಡಿಸಿ ಕೂಡು ನಾಟಿ ಮಾಡಿದ್ದಾರೆ. ಈ ವ್ಯಾಪ್ತಿಯಲ್ಲಿ ಆನೆಗಳ ಉಪಟಳವಿದ್ದರೂ ಗದ್ದೆಗಳಲ್ಲಿ ನಾಟಿಮಾಡಲು ರೈತರು ಉತ್ಸುಕರಾಗಿದ್ದಾರೆ.
ನರಿಯಂದಡ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ತೀವ್ರವಾಗಿದೆ. ಕಾಫಿ ತೋಟಗಳಲ್ಲಿ ಗಿಡಗಳನ್ನು ಮುರಿದು ಧ್ವಂಸ ಮಾಡುತ್ತಿವೆ. ಭತ್ತದ ಗದ್ದೆಗಳಿಗೂ ದಾಳಿ ನಡೆಸುವ ಸಾಧ್ಯತೆ ಇದ್ದರೂ ಕುಟುಂಬಸ್ಥರನ್ನು ಒಗ್ಗೂಡಿಸಿ ನಾಟಿ ಮಾಡಿದ್ದಾರೆ.
ಕೊಡಗಿನಲ್ಲಿ ಭತ್ತದ ಕೃಷಿ ದಿನದ ದಿನಕ್ಕೆ ಇಳಿಮುಖವಾಗುತ್ತಿದೆ ಪ್ರತಿಕೂಲ ಹವಾಮಾನದಿಂದಾಗಿ, ವನ್ಯಜೀವಿಗಳ ಹಾವಳಿಯಿಂದಾಗಿ ಬಹುತೇಕ ಕೃಷಿಕರು ಭತ್ತದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.
ಗ್ರಾಮೀಣ ಭಾಗದ ರೈತರು ಭತ್ತದ ಕೃಷಿಯಲ್ಲಿ ಉತ್ಸುಕರಾಗಿದ್ದಾರೆ. ಆದರೆ ರೈತರಿಗೆ ಪ್ರೋತ್ಸಾಹದಾಯಕ ಯೋಜನೆಗಳಿಲ್ಲ. ಮುಖ್ಯವಾಗಿ ಕಾಡಾನೆಗಳ ಉಪಟಳದಿಂದ ಭತ್ತದ ಕೃಷಿಯಿಂದ ರೈತರು ದೂರ ಉಳಿಯುತ್ತಿದ್ದಾರೆ. ಅರಣ್ಯ ಇಲಾಖೆ ಕಾಡಾನೆ ಹಾವಳಿಗೆ ನಿಯಂತ್ರಣ ಹಾಕಬೇಕು. ಆ ನಿಟ್ಟಿನಲ್ಲಿ ಶಾಶ್ವತ ಕಾರ್ಯ ಯೋಜನೆ ರೂಪಿಸಬೇಕು ಎಂದು ಧನೋಜ್ ಆಗ್ರಹಿಸಿದರು.
ಮರಂದೋಡ ಗ್ರಾಮದ ರೈತ ಚೋಯಮಾಡಂಡ ಹರೀಶ್ ಮೊಣ್ಣಪ್ಪ ಅವರ ಪುತ್ರಿ ವರ್ಣ ಬಿಡುವಿನ ಅವಧಿಯಲ್ಲಿ ಟಿಲ್ಲರ್ ಮೂಲಕ ಗದ್ದೆ ಉಳುಮೆ ಮಾಡಿ ಗಮನ ಸೆಳೆದಳು. ಮಹಿಳೆಯರೂ ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಹೊಂದಬೇಕು ಎನ್ನುವ ಉದ್ದೇಶದಿಂದ ಮಗಳ ಉಳುಮೆ ಕೆಲಸಕ್ಕೆ ಪ್ರೋತ್ಸಾಹಿಸುತ್ತಿದ್ದೇವೆ ಎಂದು ರೈತ ಚೋಯಮಾಡಂಡ ಹರೀಶ್ ಮೊಣ್ಣಪ್ಪಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.