
ನಾಪೋಕ್ಲು: ಕಕ್ಕಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಪತ್ತಾಲೋದಿ ಆರಾಧನೆ ಕಾರ್ಯಕ್ರಮ ಸೋಮವಾರ ನಡೆಯಲಿದ್ದು, ಸಿದ್ಧತೆ ಪೂರ್ಣಗೊಂಡಿದೆ.
ಕಾವೇರಿ ಜಾತ್ರೆಯು ಕಳೆದು ಮುಂದೆ ನಾಲ್ಕು ವಾರಗಳಲ್ಲಿ ಕೂಡಿಬರುವ ವೃಶ್ಚಿಕ ಸಂಕ್ರಮಣದಂದು ಕಿರು ಜಾತ್ರೆಯು ನಡೆಯುತ್ತದೆ. ಕಿರು ಸಂಕ್ರಮಣ ಎಂದು ಕರೆಯಲ್ಪಡುವ ಕಿರು ಜಾತ್ರೆಯ ಸಂದರ್ಭವೂ ಕಾವೇರಿ ಜಾತ್ರೆಯು ಔಪಚಾರಿಕವಾಗಿ ಮುಕ್ತಾಯವಾಗುವ ಹಾಗೂ ಕಾವೇರಿ ತೀರ್ಥ ಸ್ಥಾನಕ್ಕೆ ಪ್ರಶಸ್ತವಾದ ತುಲಾ ಮಾಸವು ಮುಕ್ತಾಯಗೊಳ್ಳುವ ಪವಿತ್ರ ದಿನ. ಆ ದಿನ ಅನೇಕ ಭಕ್ತರು ಶ್ರೀ ಕಾವೇರಿ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ವೃಶ್ಚಿಕ ಸಂಕ್ರಮಣದಂದು ಕೂಡ ಭಾಗಮಂಡಲದಲ್ಲಿ ಭಕ್ತರು ಪಿತೃಪ್ರಿಯ, ದೇವ ಕ್ರಿಯೆಗಳನ್ನು ಯಥೋಚಿತವಾಗಿ ನಡೆಸುತ್ತಾರೆ. ತಲಕಾವೇರಿಯಲ್ಲಿ ಶ್ರೀ ಕಾವೇರಮ್ಮನ ಪುಣ್ಯ ತೀರ್ಥ ಸ್ನಾನ ಮಾಡಿ ಮಹಾತಾಯಿಗೆ ಪೂಜಾದಿ ಸೇವೆಗಳನ್ನು ಸಲ್ಲಿಸುತ್ತಾರೆ.
ಕೊಡಗಿನ ಮೂರು ಇಗ್ಗುತಪ್ಪ ದೇವಾಲಯಗಳು ಒಂದಾದ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪತ್ತಾಲೋದಿ ಉತ್ಸವ ನಡೆಯುತ್ತದೆ. ಪಾಡಿ ಇಗ್ಗುತ್ತಪ್ಪ,ನೆಲಜಿ ಇಗ್ಗುತ್ತಪ್ಪ ಹಾಗೂ ಪೇರೂರು ಇಗ್ಗುತ್ತಪ್ಪ ದೇವಾಲಯಗಳಲ್ಲಿ ವರ್ಷಾವಧಿ ಐದು ಪ್ರಮುಖ ಕಾರ್ಯಕ್ರಮಗಳು ಜರುಗುತ್ತವೆ. ಹೊಸಕ್ಕಿ ನೈವೇದ್ಯ ಕುಂಬ್ಯಾರು ಕಲ್ಲಾಡ್ಚ, ಕಟ್ಟು ಬೀಳುವುದು ಪುತ್ತರಿ ಹಬ್ಬದ ಕಟ್ಟು ಸಡಿಲಿಸುವುದು, ಕೈಲ್ ಮುಹೂರ್ತ ಆಚರಣೆ ಇವು ಪ್ರಮುಖ ಆಚರಣೆಗಳು. ಪತ್ತಲೋದಿ ಉತ್ಸವ ವಿಶೇಷವಾಗಿ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪರದಂಡ ಕುಟುಂಬಸ್ಥರು ಕೈಗೊಳ್ಳುವ ಆಚರಣೆ ಎನ್ನುತ್ತಾರೆ ಸಂಘದ ನೆಲಜಿ ಭಕ್ತಜನ ಸಂಘದ ಅಧ್ಯಕ್ಷ ಮುಕ್ಕಾಟಿರ ವಿನಯ್.
ಆದಿಮಾತೆ ಶ್ರೀ ಕಾವೇರಿಯ ತೀರ್ಥೋದ್ಭವ ಕಳೆದು ಸಂಪ್ರದಾಯಸ್ಥರ ಮನೆಗಳಲ್ಲಿ ಜರುಗುವ ಕಣಿಪೂಜೆಯ ದಿನದ ಸೂರ್ಯೋದಯದಿಂದ ಸರಿಯಾಗಿ ಹತ್ತನೇ ಸೂರ್ಯೋದಯದ ದಿನದಂದು ಕೊಡಗಿನಾದ್ಯಂತ ಪತ್ತಾಲೋದಿ (ಹತ್ತನೇ ಪವಿತ್ರ ದಿನ) ‘ತೊಲೆಯಾರ್ ಪತ್ತ್’ ಎಂಬ ಪ್ರತೀತಿ ಪಡೆದಿದೆ. ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾದ ಈ ದಿನ ಕೊಡವ ಸಂಪ್ರದಾಯದಂತೆ ಕೈಗೊಳ್ಳುವ ಯಾವುದೇ ಕಾರ್ಯವು ಕಾರ್ಯಗತವಾಗುವುದಲ್ಲದೇ, ದೇವಾ ನುಗ್ರಹದೊಂದಿಗೆ ಅಕ್ಷಯವಾಗುವುದೆಂಬ ನಂಬಿಕೆ. ಪಾಡಿಯಲ್ಲಿ ಪರದಂಡ ಕುಟುಂಬಸ್ಥರ ವತಿಯಿಂದ ಸಂಪ್ರದಾಯದಂತೆ ಸೋಮವಾರ ತೊಲೆಯಾರ್ ಪತ್ತ್ ಆರಾಧನೆ ನಡೆಯಲಿದೆ.
ಅಂದು ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದ್ದು ತುಲಾಭಾರ ಸೇವೆಗಳು ಮಹಾಪೂಜೆಗಳು ನಡೆಯಲಿದೆ. ಮಧ್ಯಾಹ್ನ ಮಹಾಮಂಗಳಾರತಿ ದೇವರ ನೃತ್ಯ ಬಲಿ ನಡೆದು ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಗುತ್ತದೆ. ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪಾರುಪತ್ಯೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.