ಗೋಣಿಕೊಪ್ಪಲು: ವಿಭಿನ್ನವಾದ ಬಣ್ಣ, ಕೂದಲು, ತಲೆ ಹಾಗೂ ಮೈಮಾಟಗಳ ಮೂಲಕ 90ಕ್ಕೂ ಹೆಚ್ಚು ಶ್ವಾನಗಳು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಂಗಳವಾರ ನಡೆದ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡು ನೋಡುಗರ ಮನ ಸೆಳೆದವು.
ಕೊಡಗು ಕೆನೆಲ್ ಕ್ಲಬ್, ಜಿಲ್ಲಾ ಪಶು ವೈದ್ಯಕೀಯ ಇಲಾಖೆ, ಐಸಿಎಆರ್, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ನಡೆದ ಶ್ವಾನ ಪ್ರದರ್ಶನದಲ್ಲಿ ಜರ್ಮನ್ ಶೆಫರ್ಡ್, ಮುದೋಳು, ಪೊಮೋರಿಯನ್, ಬೆಲ್ಜಿಯಂ ಮಲೋನಿಯಸ್ ಪುಟ್ಟ, ಗೋಲ್ಡನ್ ರಿಟ್ರಿವೆರ್, ಲ್ಯಾಸ್ ಅಪ್ಸೊ, ಅಮೆರಿಕನ್ ಬ್ರುಲಿ ಮೊದಲಾದ 50ಕ್ಕೂ ಹೆಚ್ಚು ತಳಿಯ ಶ್ವಾನಗಳು ಪಾಲ್ಗೊಂಡಿದ್ದವು.
ಈ ಅಪರೂಪದ ತಳಿಯ ನಾಯಿಗಳನ್ನು ಕಂಡ ಜನತೆ ಫೋಟೊ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಶ್ವಾನ ಪ್ರಿಯರು ತಮ್ಮ ಶ್ವಾನಗಳೊಂದಿಗೆ ತಮಗಾಗಿ ನಿಗದಿಪಡಿಸಿದ್ದ ಶ್ವಾಮಿಯಾನದ ನೆರಳಲ್ಲಿ ಕುಳಿತು ತಮ್ಮ ಮುದ್ದಾದ ಶ್ವಾನದೊಂದಿಗೆ ಕುಳಿತು ನೋಡುಗರೊಂದಿಗೆ ಸಂತಸ ಹಂಚಿಕೊಂಡರು.
ಮೊದಲ ಬಾರಿಗೆ ಬೆಲ್ಜಿಯನ್ ಮಲಾನಿಯಸ್ ತಳಿಯ 6 ಶ್ವಾನಗಳು ಭಾಗವಹಿಸಿ ವಿಶೇಷತೆ ಮೂಡಿಸಿದವು. ಪಾಲಿಬೆಟ್ಟ ಲಯನ್ಸ್ ಕ್ಲಬ್ ವತಿಯಿಂದ ಶ್ವಾನಗಳಿಗೆ ಹುಚ್ಚು ನಾಯಿ ರೋಗದ ಉಚಿತ ಲಸಿಕೆ ನೀಡಲಾಯಿತು. ನಾಯಿ ಮರಿಗಳ ಮಾರಾಟವೂ ನಡೆಯಿತು.
ಶಾಸಕ ಎ.ಎಸ್.ಪೊನ್ನಣ್ಣ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ‘ಮನುಷ್ಯನೊಂದಿಗೆ ನಿಜವಾದ ಪ್ರೀತಿ ಮತ್ತು ನಿಷ್ಠೆ ಹೊಂದಿರುವ ಶ್ವಾನಗಳನ್ನು ಪ್ರೀತಿಸಬೇಕು. ಚಿಕ್ಕ ವಯಸ್ಸಿನಲ್ಲಿ ಹೆಚ್ಚಾಗಿ ಶ್ವಾನದೊಂದಿಗೆ ಬದುಕು ನಡೆಸಿದ್ದೇವೆ. ನಾನು ಕೂಡ ಶ್ವಾನ ಪ್ರಿಯ’ ಎಂದು ಹೇಳಿದರು.
ಕೊಡಗು ಕೆನೆಲ್ ಕ್ಲಬ್ ಅಧ್ಯಕ್ಷ ಕೆ.ಎಂ.ಅಪ್ಪಯ್ಯ, ಉದ್ಯಮಿ ಕುಪ್ಪಂಡ ಅಶೋಕ್ ಅಪ್ಪಣ್ಣ, ಡಾ.ಕೆ.ಎನ್.ಬಸವರಾಜ್, ಜಿಲ್ಲಾ ವೆಟರ್ನರಿ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆ.ಪಿ.ಅಯ್ಯಪ್ಪ, ಎಚ್‌ವಿಎಸ್ ಉಪ ನಿರ್ದೇಶಕ ಡಾ.ಲಿಂಗರಾಜು ದೊಡ್ಡಮನಿ, ಕರುಣಾ ಅನಿಮಲ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ.ಜಯರಾಮಯ್ಯ, ಕೆವಿಕೆ ಮುಖ್ಯಸ್ಥ ಡಾ.ಬಿ.ಪ್ರಭಾಕರ್, ಬೆಂಗಳೂರು ಪ್ರಾಣಿದಯಾ ಸಂಘದ ಅಧ್ಯಕ್ಷ ಡಾ.ಜಯರಾಮಯ್ಯ, ಮೈಸೂರು ಕೆನೈನ್ ಕ್ಲಬ್ ಕಾರ್ಯಕಾರಿಣಿ ಸದಸ್ಯ ಡಾ.ಅರುಣ್, ನಿವೃತ್ತ ಅಧಿಕಾರಿ ಡಾ.ಷಡಕ್ಷರಮೂರ್ತಿ ಭಾಗವಹಿಸಿದ್ದರು.
ಪ್ರದರ್ಶನ ಉದ್ಘಾಟಿಸಿದ ಶಾಸಕ ಎ.ಎಸ್.ಪೊನ್ನಣ್ಣ ಹತ್ತಾರು ತಳಿಯ ಶ್ವಾನಗಳು ಭಾಗಿ ಮುದ್ದಾದ ಶ್ವಾನದೊಂದಿಗೆ ಕುಳಿತ ಜನತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.