ಮಡಿಕೇರಿ: ಇಲ್ಲಿನ ಐತಿಹಾಸಿಕ ಓಂಕಾರೇಶ್ವರ ದೇವಾಲಯವನ್ನು ಅಭಿವೃದ್ಧಿಪಡಿಸುವ ಕನಸುಗಳನ್ನು ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಅಧ್ಯಕ್ಷರು ಇಲ್ಲಿನ ಪತ್ರಿಕಾಭವನದಲ್ಲಿ ಬಿಚ್ಚಿಟ್ಟಿರು.
‘₹ 5 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲು ಚಿಂತಿಸಲಾಗಿದೆ’ ಎಂದು ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ಜಿ.ರಾಜೇಂದ್ರ ತಿಳಿಸಿದರು.
‘ಆಂಜನೇಯ ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ನವಗ್ರಹ ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿದ್ದು, ಈ ಕೆಲಸಕ್ಕೆ ಸಾರ್ವಜನಿಕರ ಸಹಕಾರದೊಂದಿಗೆ ಅತಿ ಶೀಘ್ರದಲ್ಲಿ ವ್ಯವಸ್ಥಾಪನಾ ಸಮಿತಿಯು ಸದ್ಯದಲ್ಲೇ ಕಾರ್ಯೊನ್ಮುಖವಾಗಲಿದೆ’ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಉಳಿದಂತೆ, ಓಂಕಾರೇಶ್ವರ ದೇವಾಲಯ ಹಾಗೂ ಆಂಜನೇಯ ದೇವಾಲಯದ ಮುಖ್ಯ ಪ್ರವೇಶ ದ್ವಾರ, ಪ್ರಾರ್ಥನಾ ಕೇಂದ್ರ, ನವಗ್ರಹ ವೃಕ್ಷೋದ್ಯಾನ, ಕೆರೆ ಅಂಗಳದ ಜೀರ್ಣೋದ್ಧಾರ ಕಾರ್ಯಗಳನ್ನು ಸಹ ನಡೆಸಬೇಕಿದೆ ಎಂದರು.
ಓಂಕಾರೇಶ್ವರ ಹಾಗೂ ಆಂಜನೇಯ ದೇವಾಲಯಕ್ಕೆ ಹೊಂದಿಕೊಂಡಿರುವ ಪ್ರವೇಶದ್ವಾರದ ಕಮಾನಿನಲ್ಲಿ ಎಡಬದಿಗೆ ಶಿವಲಿಂಗ ಹಾಗೂ ನಂದಿಯ ಮೂರ್ತಿ ಮಧ್ಯ ಭಾಗದಲ್ಲಿ ಪಟ್ಟಾಭಿರಾಮ– ಲಕ್ಷ್ಮಣ, ಸೀತೆಯ ವಿಗ್ರಹ ಇರಲಿದೆ. ಬಲಭಾಗದಲ್ಲಿ ಕೈಮುಗಿದು ಕುಳಿತಿರುವ ಭಂಗಿಯಲ್ಲಿರುವ ಆಂಜನೇಯಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲು ಸಹ ಚಿಂತಿಸಲಾಗಿದೆ ಎಂದರು.
ಉಚ್ಚಿಲ ಪದ್ಮನಾಭ ತಂತ್ರಿಗಳ ನೇತೃತೃದಲ್ಲಿ ನವನೀತ ಪ್ರಿಯ ಜ್ಯೋತಿಷರ ಮಾರ್ಗದರ್ಶನದಲ್ಲಿ ಹಾಗೂ ವಾಸ್ತುತಜ್ಞ ರಮೇಶ್ ಕಾರಂತ್ ಅವರಿಂದ ದೇಗುಲದ ಅಭಿವೃದ್ಧಿ ವಿಚಾರವಾಗಿ ಪ್ರಶ್ನೆ ಇಟ್ಟಾಗ ಈ ಸಲಹೆಗಳು ವ್ಯಕ್ತವಾದವು ಎಂದು ಹೇಳಿದರು.
ಹುಂಡಿಗೆ ಹಣ ಹಾಕಿದರೆ ಸರ್ಕಾರಕ್ಕೆ ಹೋಗುತ್ತದೆ ಎಂಬ ತಪ್ಪು ನಂಬಿಕೆ ಇದೆ. ಇದು ಸರಿಯಲ್ಲ. ಹುಂಡಿಗೆ ಹಣ ಹಾಕಿದರೆ ಅದು ಸಂಪೂರ್ಣ ದೇಗುಲದ ಅಭಿವೃದ್ಧಿಗೆ ಬಳಕೆಯಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಮಾತನಾಡಿ, ‘ಪಾರದರ್ಶಕತೆ ಇರಲಿ ಎಂಬ ಕಾರಣಕ್ಕೆ ಹೊಸದಾಗಿ ನೇಮಕವಾದ ವ್ಯವಸ್ಥಾಪನಾ ಮಂಡಳಿಯು ದೇಗುಲದಲ್ಲಿರುವ ಪರಿಕರಗಳ ಮೌಲ್ಯಮಾಪನ ಮಾಡಲು ನಿರ್ಧರಿಸಿತು’ ಎಂದರು.
ಸಮಿತಿ ಸದಸ್ಯ ನಿರಂಜನ್ ಮಾತನಾಡಿ, ‘ದೇಗುಲಕ್ಕೆ ದಾನ ನೀಡಿರುವ ಹಲವು ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆದುಕೊಳ್ಳಲು ಕಾನೂನು ಹೋರಾಟ ರೂಪಿಸಲಾಗುವುದು’ ಎಂದು ತಿಳಿಸಿದರು.
ಸಮಿತಿ ಸದಸ್ಯೆ ಮೀನಾಕ್ಷಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.