ADVERTISEMENT

ವನ್ಯಜೀವಿಗಳಿಗೆ ಕುತ್ತು ತರುತ್ತಿರುವ ಪ್ಲಾಸ್ಟಿಕ್

ಕೊಡಗು ರಕ್ಷಿತಾರಣ್ಯ ಪ್ರದೇಶದ ಮಾರ್ಗದಲ್ಲಿ ಪ್ಲಾಸ್ಟಿಕ್‌ ಹಾವಳಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 15:36 IST
Last Updated 27 ನವೆಂಬರ್ 2019, 15:36 IST
ಆಹಾರವೆಂದು ಭಾವಿಸಿ ಪ್ಲಾಸ್ಟಿಕ್‌ ತಿನ್ನುತ್ತಿರುವ ಜಿಂಕೆ
ಆಹಾರವೆಂದು ಭಾವಿಸಿ ಪ್ಲಾಸ್ಟಿಕ್‌ ತಿನ್ನುತ್ತಿರುವ ಜಿಂಕೆ   

ಮಡಿಕೇರಿ: ಕೊಡಗು ಜಿಲ್ಲೆಗೆ ಬರುವ ಪ್ರವಾಸಿಗರು ಬಿಸಾಡುತ್ತಿರುವ ಪ್ಲಾಸ್ಟಿಕ್‌ ವನ್ಯಜೀವಿಗಳಿಗೆ ಕುತ್ತು ತರುತ್ತಿದೆ. ಪ್ರವಾಸಿಗರು, ಬಿಸಾಡುವ ಪ್ಲಾಸ್ಟಿಕ್‌ ಅನ್ನೇ ಆಹಾರವೆಂದು ಭಾವಿಸಿ, ಜಿಂಕೆ ಹಾಗೂ ಮಂಗಗಳು ತಿಂದು ಪರಿತಪಿಸುವ ದೃಶ್ಯವನ್ನು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಅಪ್ಪನೆರವಂಡ ಕುಞ್ಞಪ್ಪ ಅವರು ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ವನ್ಯಜೀವಿಗಳು ಹಸಿದು ಪ್ಲಾಸ್ಟಿಕ್ ಪೊಟ್ಟಣ ತಿಂದು ಪರಿತಪಿಸುತ್ತವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾಡಿನ ಬದಿಯಲ್ಲಿ ಎಸೆದ ಪ್ಲಾಸ್ಟಿಕ್‌ ಪಕ್ಷಿಗಳಿಗೂ ವಿಷವಾಗಿ ಪರಿಣಮಿಸುತ್ತಿದೆ ಎಂದು ಪ್ರಾಣಿ ಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.

ರಕ್ಷಿತಾರಣ್ಯವನ್ನು ಸೀಳಿಕೊಂಡು, ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದು ಈ ಮಾರ್ಗದಲ್ಲಿ ನೂರಾರು ವಾಹನಗಳು ನಿತ್ಯ ಸಂಚರಿಸುತ್ತವೆ. ವಾಹನದ ಒಳಗೆ ತಿಂದ ಆಹಾರದ ಪೊಟ್ಟಣಗಳನ್ನು ಪ್ರವಾಸಿಗರು ಅಲ್ಲಲ್ಲಿ ಬೇಕಾಬಿಟ್ಟಿ ಎಸೆದು ಹೋಗುತ್ತಿದ್ದಾರೆ. ಆಹಾರ ಹುಡುಕಿಕೊಂಡು ಬರುವ ವನ್ಯಪ್ರಾಣಿಗಳು ಬಿಸಾಡಿದ ಪ್ಲಾಸ್ಟಿಕ್‌ ಅನ್ನೇ ಆಹಾರವೆಂದು ಭಾವಿಸಿ ತಿಂದು ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿವೆ.

ADVERTISEMENT

‘ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಬೇಕೆಂಬ ಸೂಚನೆಯಿದ್ದರೂ ಪಾಲನೆ ಆಗುತ್ತಿಲ್ಲ. ಜತೆಗೆ, ಅದೆಷ್ಟೋ ಪ್ರಾಣಿ, ಪಕ್ಷಿಗಳ ಪ್ರಾಣಕ್ಕೂ ಕುತ್ತು ತರುತ್ತಿದೆ. ಅರಣ್ಯ ಇಲಾಖೆ, ಮೀಸಲು ಅರಣ್ಯದಲ್ಲಿ ಪ್ಲಾಸ್ಟಿಕ್ ವಸ್ತುಗಳ ನಿಷೇಧಕ್ಕೆ ಹಲವು ಯೋಜನೆ ರೂಪಿಸಿದೆ. ಮೀಸಲು ಅರಣ್ಯದ ಒಳಗೆ ಹಲವೆಡೆ ಸೂಚನಾ ಫಲಕ ಅಳವಡಿಸಲಾಗಿದೆ. ಆದರೂ, ಪ್ರಯೋಜನಕ್ಕೆ ಬರುತ್ತಿಲ್ಲ’ ಎಂದು ಪ್ರಾಣಿಪ್ರಿಯ ಕರುಣ ಕಾಳಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.