ADVERTISEMENT

‘ಪೊಲೀಸ್ ಠಾಣೆ, ಎಸ್‌.ಪಿ ಕಚೇರಿಗೆ ಮುತ್ತಿಗೆ’

ಬಿಜೆಪಿ ಮುಖಂಡ ಎಂ.ಪಿ.ಅಪ್ಪಚ್ಚುರಂಜನ್ ಎಚ್ಚರಿಕೆ, ಪೊಲೀಸರು ಪಕ್ಷಾತೀತವಾಗಿ ಕಾರ್ಯನಿರ್ವಹಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 14 ಮೇ 2025, 7:09 IST
Last Updated 14 ಮೇ 2025, 7:09 IST

ಮಡಿಕೇರಿ: ಕೊಡಗು ಜಿಲ್ಲೆಯ ಪೊಲೀಸರು ಬಿಜೆಪಿ ಕಾರ್ಯಕರ್ತರು, ಮುಖಂಡರನ್ನೇ ಗುರಿಯಾಗಿಸಿ ಪ್ರಕರಣಗಳನ್ನು ದಾಖಲಿಸುತ್ತಿರುವುದು ಹೆಚ್ಚುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪೊಲೀಸ್ ಠಾಣೆ ಇಲ್ಲವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ಮುಖಂಡ ಹಾಗೂ ನಿಕಟಪೂರ್ವ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಎಚ್ಚರಿಕೆ ನೀಡಿದರು.

ವಾಹನ ನಿಲುಗಡೆ ಶುಲ್ಕವನ್ನು ಹೆಚ್ಚು ವಸೂಲು ಮಾಡಲಾಗುತ್ತಿದೆ ಎಂದು ಬಂದ ದೂರಿನ ಅನ್ವಯ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ವಿಚಾರಿಸಲು ಹೋಗಿದ್ದಾರೆ. ಆ ವೇಳೆ ಶುಲ್ಕ ವಸೂಲಾತಿಯ ಯಂತ್ರವನ್ನು ವಸೂಲಿ ಮಾಡುತ್ತಿದ್ದವರಿಂದ ಪಡೆದು, ನಗರಸಭೆ ಅಧಿಕಾರಿಗಳಿಗೆ ನೀಡಿದ್ದಾರೆ. ಇದೆಲ್ಲವೂ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಿದ್ದರೂ, ನಗರಸಭೆ ಸದಸ್ಯರು ಹಾಗೂ ಬಿಜೆಪಿ ಮುಖಂಡರ ವಿರುದ್ಧ ದರೋಡೆ ಪ್ರಕರಣ ದಾಖಲಿಸಿದ್ದು ಎಷ್ಟು ಸರಿ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಈ ಹಿಂದೆಯೂ ಪ್ರತಿಕೃತಿ ದಹಿಸಿದರು ಎಂಬ ಕಾರಣಕ್ಕೆ ವಿರಾಜಪೇಟೆಯಲ್ಲಿ 30ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇವೆಲ್ಲವೂ ಕಾಂಗ್ರೆಸ್‌ನವರ ಕುಮ್ಮಕ್ಕಿನಿಂದಲೇ ಪೊಲೀಸರು ಈ ಕ್ರಮ ಕೈಗೊಳ್ಳುತ್ತಿದ್ದಾರೆ ಎಂಬುದಕ್ಕೆ ದ್ಯೋತಕ. ರಾಜಕೀಯ ದುರುದ್ದೇಶದಿಂದಲೆ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹರಿಹಾಯ್ದರು.

ADVERTISEMENT

ಇತ್ತೀಚೆಗೆ ಜಿಲ್ಲೆಯಲ್ಲಿ ಕೊಲೆಗಳು ಹೆಚ್ಚುತ್ತಿವೆ. ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ ಎಂದೂ ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ‘ಪೊಲೀಸರು ಕಾಂಗ್ರೆಸ್‌ನ ಏಜೆಂಟರಂತೆ ಕಾರ್ಯನಿರ್ವಹಿಸುವುದನ್ನು ಬಿಡಬೇಕು’ ಎಂದು ಒತ್ತಾಯಿಸಿದರು.

ಕವನ್ ಕಾರ್ಯಪ್ಪ ಸ್ಥಳದಲ್ಲೇ ಇರಲಿಲ್ಲ. ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ನ್ಯಾಯವಾಗಿ ಹೆಚ್ಚು ದರ ವಸೂಲು ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಆಗಬೇಕಿತ್ತು. ಅದನ್ನು ಬಿಟ್ಟು ಅನ್ಯಾಯವನ್ನು ಪ್ರಶ್ನಿಸಲು ಹೋದವರ ವಿರುದ್ಧವೇ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹರಿಹಾಯ್ದರು.

ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ, ‘ಬಿಜೆಪಿಯ ನಗರಸಭೆ ಸದಸ್ಯರನ್ನು ಅವಾಚ್ಯವಾಗಿ ನಿಂದಿಸುವ ಮೂಲಕ ಕಾಂಗ್ರೆಸ್‌ನವರು ಮತದಾರರಿಗೆ ಅವಮಾನ ಮಾಡಿದ್ದಾರೆ. ಘಟನೆ ನಡೆದಿರುವುದು ರಾಜಾಸೀಟ್ ವಾಹನ ನಿಲುಗಡೆ ಜಾಗದಲ್ಲಿ ಅಲ್ಲ. ವಾಹನ ನಿಲುಗಡೆಯನ್ನೇ ನಿಷೇಧಿಸಿರುವ ಗಾಂಧಿ ಮೈದಾನದಲ್ಲಿ. ಗುತ್ತಿಗೆಗೆ ನೀಡುವಾಗ ಹಾಕಿರುವ ನಿಯಮದಂತೆ ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ. ಆದರೂ, ಅಲ್ಲಿ ವಾಹನ ನಿಲುಗಡೆ ಮಾಡಿ ಶುಲ್ಕ ಪಡೆಯುತ್ತಿದ್ದನ್ನು ಪ್ರಶ್ನಿಸಲಾಗಿದೆ’ ಎಂದು ಅವರು ಹೇಳಿದರು.

ನಗರಸಭೆ ಅಧ್ಯಕ್ಷೆ ಕಲಾವತಿ ಮಾತನಾಡಿ, ‘ನಾನು ಸಹ ಕಳೆದ 5 ದಿನಗಳ ಹಿಂದೆಯೇ ನಿಯಮ ಉಲ್ಲಂಘಿಸಿ ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ಮಾಡಬಾರದು ಎಂದು ಹೇಳಿದ್ದೆ. ಆದರೆ, ಮತ್ತೆ ಮತ್ತೆ ನಮಗೆ ದೂರುಗಳು ಬಂದಿದ್ದರಿಂದ ನಾನೂ ಸೇರಿದಂತೆ ನಗರಸಭೆ ಸದಸ್ಯರು ಹಾಗೂ ಸಿಬ್ಬಂದಿ ತಂಡ ಸ್ಥಳಕ್ಕೆ ವಿಚಾರಣೆಗಾಗಿ ಹೋಗಿದ್ದು. ಆದರೆ, ಪೊಲೀಸರು ಇದನ್ನು ಪರಿಗಣನೆಗೆ ತೆಗೆದಕೊಳ್ಳದೇ ಹುಸಿ ಪ್ರಕರಣ ದಾಖಲಿಸಿದ್ದಾರೆ’ ಎಂದು ಕಿಡಿಕಾರಿದರು.

ಪಕ್ಷದ ಮುಖಂಡರಾದ ತಳೂರು ಕಿಶೋರ್‌ಕುಮಾರ, ಬಿ.ಕೆ.ಜಗದೀಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.