ಗೋಣಿಕೊಪ್ಪಲು: ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ 14 ದಿನಗಳಿಂದ ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಗುರುವಾರ ಸಂಸದ ಪ್ರತಾಪಸಿಂಹ ಹಾಗೂ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ಕಾಲೇಜಿನ ಮುಂಭಾಗದಲ್ಲಿ ಸೇರಿದ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಸುಡು ಬಿಸಿಲಿನಲ್ಲಿಯೂ ಧರಣಿ ನಡೆಸುತ್ತಿದ್ದರು. ಈ ವೇಳೆಯಲ್ಲಿ ಕಾಲೇಜಿಗೆ ಬಂದ ಸಂಸದರು ವಿದ್ಯಾರ್ಥಿಗಳು ಬೇಡಿಕೆ ಆಲಿಸಿದರು.
ಬಳಿಕ ಮಾತನಾಡಿದ ಅವರು, ‘ಅರಣ್ಯ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಮಾತನಾಡಿ ಬೇಡಿಕೆ ಈಡೇರಿಸುವಂತೆ ಮನವಿ ಮಾಡಲಾಗುವುದು. ಜತೆಗೆ ಅರಣ್ಯ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಬಗ್ಗೆ ಕೂಡಲೇ ಗಮನಹರಿಸಲಾಗುವುದು’ ಎಂದು ತಿಳಿಸಿದರು.
ಕೆ.ಜಿ.ಬೋಪಯ್ಯ ಮಾತನಾಡಿ, ‘ವಿದ್ಯಾರ್ಥಿಗಳ ಬೇಡಿಕೆ ನ್ಯಾಯೋಚಿತವಾಗಿದೆ. ಸರ್ಕಾರ ಕೂಡಲೇ ಇತ್ತ ಗಮನಹರಿಸಿ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬೇಕು. ಅವರ ತರಗತಿ ಹಾಗೂ ಅಧ್ಯಯನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಮಾಚಿಮಾಡ ರವೀಂದ್ರ ಹಾಜರಿದ್ದರು.
‘ಬೇಡಿಕೆ ಈಡೇರುವವರೆಗೂ ಧರಣಿ ಮುಂದುವರಿಸಲಾಗುವುದು’ ಎಂದು ವಿದ್ಯಾರ್ಥಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.