ADVERTISEMENT

ಕಳಪೆ ಕಾಮಗಾರಿ: ಮರು ಡಾಂಬರೀಕರಣಕ್ಕೆ ಗುತ್ತಿಗೆದಾರನಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 12:58 IST
Last Updated 22 ಮೇ 2025, 12:58 IST
<div class="paragraphs"><p>&nbsp;ಸೋಮವಾರಪೇಟೆ&nbsp;ತಾಲ್ಲೂಕಿನ&nbsp;ಹೊಸತೋಟದಿಂದ ಗರಗಂದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮರು ಡಾಂಬರೀಕರಣ ಕಳಪೆಯಾಗಿದೆ ಎಂಬ ದೂರಿನ ಅನ್ವಯ ಶಾಸಕ ಡಾ. ಮಂತರ್ ಗೌಡ ಗುರುವಾರ ಪರಿಶೀಲನೆ ನಡೆಸಿದರು.&nbsp;</p></div>

 ಸೋಮವಾರಪೇಟೆ ತಾಲ್ಲೂಕಿನ ಹೊಸತೋಟದಿಂದ ಗರಗಂದೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮರು ಡಾಂಬರೀಕರಣ ಕಳಪೆಯಾಗಿದೆ ಎಂಬ ದೂರಿನ ಅನ್ವಯ ಶಾಸಕ ಡಾ. ಮಂತರ್ ಗೌಡ ಗುರುವಾರ ಪರಿಶೀಲನೆ ನಡೆಸಿದರು. 

   

ಸೋಮವಾರಪೇಟೆ: ತಾಲ್ಲೂಕಿನ ಹೊಸತೋಟದಿಂದ ಗರಗಂದೂರಿಗೆ ಸಂಪರ್ಕ ಕಲ್ಪಿಸುವ ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’ಯ ಮೂಲಕ 2017ರಲ್ಲಿ ಆರಂಭಗೊಂಡು 2020ಕ್ಕೆ ಪೂರ್ಣಗೊಂಡಿರುವ ರಸ್ತೆಯ ಮರು ಡಾಂಬರೀಕರಣ  ಕಾಮಗಾರಿ ಕಳಪೆಯಾಗಿದೆ. ಡಾಂಬರ್‌ ಕಿತ್ತು ಬರುತ್ತಿರುವುದಾಗಿ ಸಾರ್ವಜನಿಕರು ದೂರಿದ್ದು, ಗುರುವಾರ ಶಾಸಕ ಡಾ. ಮಂತರ್ ಗೌಡ ಸ್ಥಳ ಪರಿಶೀಲನೆ ನಡೆಸಿದರು.

ಶಾಸಕ ಮಾತನಾಡಿ , ‘5 ವರ್ಷಗಳ ನಂತರ ಮರು ಡಾಂಬರೀಕರಣ ಮಾಡಬೇಕಿದೆ. ಮಳೆಯ ಸಮಯದಲ್ಲಿ ಗುತ್ತಿಗೆದಾರ ತರಾತುರಿಯಲ್ಲಿ, ಡಾಂಬರ್‌ ಹಾಕಿರುವುದರಿಂದ ರಸ್ತೆ ಕಿತ್ತು ಬರುತ್ತಿದೆ.  ಮರು ಡಾಂಬರೀಕರಣಕ್ಕೆ ನಿರ್ದೇಶನ ನೀಡಲಾಗಿದೆ. ಸುಮಾರು 600 ಮೀಟರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎರಡು ವರ್ಷಗಳಲ್ಲಿ ₹50 ಕೋಟಿಗೂ ಅಧಿಕ ಅನುದಾನದಡಿ ಕ್ಷೇತ್ರದ ವಿವಿಧ ಭಾಗಗಳಲ್ಲಿ ರಸ್ತೆ ಕಾಮಗಾರಿ ನಡೆಸಲಾಗಿದೆ. ಯಾವುದೇ ಕಾಮಗಾರಿ ಕಳಪೆಯಾಗಿಲ್ಲ. ಇದೇ ಮೊದಲ ಬಾರಿಗೆ ಕಳಪೆ ಕಾಮಗಾರಿ ನಡೆಸಲಾಗಿದೆ. ಸಂಬಂಧಿಸಿದ ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಬೇಕು. ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆಯೂ ಗಮನ ಹರಿಸಬೇಕು’ ಎಂದು  ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಯೋಜನಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಭು ಅವರಿಗೆ ಶಾಸಕರು ಸೂಚಿಸಿದರು.

ADVERTISEMENT

‘ಹಳೆಯ ರಸ್ತೆಯ ಮೇಲೆ ತೇಪೆ ಹಚ್ಚುವ ಕೆಲಸ ಮಾಡಲಾಗಿದೆ. ಸರಿಯಾದ ಪ್ರಮಾಣದಲ್ಲಿ ಡಾಂಬರ್‌ ಹಾಗೂ ಗಮ್ ಬಳಸದೇ ಇರುವುದು ಕಂಡುಬಂದಿದೆ. ಇದೀಗ ಹಾಕಿರುವ ಡಾಂಬ್‌ ಅನ್ನು ಸಂಪೂರ್ಣವಾಗಿ ಕಿತ್ತು ತೆಗೆದು, ಮಳೆಗಾಲ ಮುಗಿದ ನಂತರ ಮರು ಡಾಂಬರೀಕರಣ ಮಾಡಬೇಕು ಎಂದು  ಪ್ರಭು ಅವರಿಗೆ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಮಾತನಾಡಿ, ಈ ರಸ್ತೆಯು ಇನ್ನೂ ಜಿಲ್ಲಾ ಪಂಚಾಯಿತಿ ಅಧೀನಕ್ಕೆ ಬಂದಿಲ್ಲ.  ಗುತ್ತಿಗೆದಾರರು 5 ವರ್ಷ ರಸ್ತೆ ನಿರ್ವಹಣೆ ಮಾಡಿ, ನಂತರ ಮರು ಡಾಂಬರೀಕರಣ ಕೈಗೊಂಡು ಜಿಲ್ಲಾ ಪಂಚಾಯತಿಗೆ ಹಸ್ತಾಂತರಿಸಬೇಕಿದೆ’ ಎಂದರು.

‘ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯು ಪ್ರತ್ಯೇಕ ವಿಭಾಗವಾಗಿದ್ದು, ಜಿಲ್ಲಾ ಪಂಚಾಯತಿಗೂ, ಆ ಸಂಸ್ಥೆಗೂ ನೇರ ಸಂಬಂಧವಿಲ್ಲ. ಇದೀಗ ರಸ್ತೆ ಕಾಮಗಾರಿ ಕಳಪೆಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗುತ್ತಿಗೆದಾರರಿಗೆ ನೋಟಿಸ್ ನೀಡಿ, ಮರು ಡಾಂಬರೀಕರಣ ಮಾಡುವಂತೆ ಸಂಬಂಧಿಸಿದ ಎಂಜಿನಿಯರ್‌ಗೆ ಜಿಲ್ಲಾಪಂಚಾಯಿತಿಯಿಂದ ಸೂಚನೆ ನೀಡಲಾಗಿದೆ’ ಎಂದು ತಿಳಿಸಿದರು.

 ಹರದೂರು ಪಂಚಾಯಿತಿ ಉಪಾಧ್ಯಕ್ಷ ಸಲೀಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಸ್ಥಳೀಯರಾದ ಲಕ್ಷ್ಮಣ್, ರೋಹಿತ್, ಲಿಖಿತ್ ದಾಮೋಧರ್, ಚನ್ನಕೇಶವ ಮತ್ತು ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.