ಸುಂಟಿಕೊಪ್ಪ: ಇಲ್ಲಿನ ರಾಜ್ಯ ಹೆದ್ದಾರಿಯಿಂದ ಮಾದಾಪುರಕ್ಕೆ ತೆರಳುವ ಗುಂಡುಗುಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದಲ್ಲಿರುವ ನಾಕೂರು- ಕಾನ್‌ಬೈಲ್‌ಗೆ ತೆರಳುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಪಾದಾಚಾರಿಗಳು ಪ್ರಾಯಾಸಪಡಬೇಕಾಗಿದೆ.
ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಗುಂಡುಗುಟ್ಟಿಯಿಂದ ಮುತ್ತಿನ ತೋಟ- ಜೈನ ಬಸದಿ-ನಾಕೂರು- ಕಾನ್‌ಬೈಲ್ ರಸ್ತೆಯು ಕಳೆದ 4-5 ವರ್ಷಗಳಿಂದ ಡಾಂಬರೀಕರಣಗೊಂಡಿಲ್ಲ. ಈ ಮಾರ್ಗದಲ್ಲಿ ವಿವಿಧ ಕಾರಣಗಳಿಗಾಗಿ ಭಾರಿ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಯ ಸ್ವರೂಪವೇ ಹಾಳಾಗಿದೆ. ಎಲ್ಲೆಂದರಲ್ಲಿ ಗುಂಡಿ ಬಿದ್ದಿದ್ದು, ಸಂಚರಿಸಲು ಕಷ್ಟಕರವಾಗಿ ಪರಿಣಮಿಸಿದೆ.
ಭಾರಿ ವಾಹನಗಳ ಓಡಾಟ ಕುರಿತು ಗ್ರಾಮ ಪಂಚಾಯಿತಿ ಸಮರ್ಪಕವಾದ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಸ್ಥಳೀಯ ಹಿರಿಯರು, ಕೃಷಿಕರು, ಸಾರ್ವಜನಿಕರು ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ಮಾರ್ಗದಲ್ಲಿ ಪ್ರತಿನಿತ್ಯ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸರ್ಕಾರಿ ಮತ್ತು ಖಾಸಗಿ ಉದ್ಯೋಗಿಗಳು ಸೇರಿದಂತೆ ನೂರಾರು ಮಂದಿ ಸಂಚರಿಸುತ್ತಾರೆ. ಈ ಮಾರ್ಗದ ಮೂಲಕವೇ ವಾಹನಗಳು ಸುಂಟಿಕೊಪ್ಪ ಮತ್ತು ಮಾದಾಪುರ- ಸೋಮವಾರಪೇಟೆಗೆ ತೆರಳಬೇಕಾಗಿದೆ.
ಕಳೆದ 5 ವರ್ಷಗಳ ಹಿಂದೆ ಈ ರಸ್ತೆ ಕಾಮಗಾರಿ ಮಾಡುವ ವೇಳೆ ರಸ್ತೆ ವಿಸ್ತರಣೆ ಮಾಡುವುದಕ್ಕೆ ರಸ್ತೆಯನ್ನು ಅಗೆದು ಬೇಕಾಬಿಟ್ಟಿ ಡಾಂಬರೀಕರಣ ಮಾಡಿದ್ದರಿಂದ ಚಾಲಕರು, ಸಾರ್ವಜನಿಕರು ಸಂಚರಿಸಲು ಹರಸಾಹಸಪಡಬೇಕಾಗಿದೆ.
ಈ ಭಾಗದ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನ ಕಂಡು ಬರುತ್ತಿಲ್ಲ. ಹಾಗೆಯೇ ಜನಪ್ರತಿನಿಧಿಗಳು ಕೂಡ ಈ ಬಗ್ಗೆ ಗಮನಹರಿಸಿಲ್ಲ.
ಕೊಡಗು ಜಿಲ್ಲೆಯ ಬಹುತೇಕ ಕುಗ್ರಾಮಗಳಲ್ಲಿ ರಸ್ತೆ ಕಾಮಗಾರಿ ನಡೆದಿದ್ದರೂ, ಈ ಭಾಗದಲ್ಲಿ ಮಾತ್ರ ರಸ್ತೆ ಕಾಯಕಲ್ಪ ಆಗದೇ ಇರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
5 ವರ್ಷದ ಹಿಂದೆ ಡಾಂಬರು ಕಂಡಿದ್ದ ರಸ್ತೆ ಭಾರಿ ವಾಹನಗಳು ಸಂಚರಿಸುತ್ತಿದ್ದಾಗ ಮೌನವಾಗಿದ್ದ ಪಂಚಾಯಿತಿ ರಸ್ತೆ ಸರಿಪಡಿಸಲು ಮುಂದಾಗದ ಜನಪ್ರತಿನಿಧಿಗಳು
ಪ್ರತಿಕ್ರಿಯೆಗಳು
ಜಾರಿ ಬೀಳುವ ಮಕ್ಕಳು ಸಮವಸ್ತ್ರ ಕೆಸರುಮಯ ಈ ಮಳೆಗಾಲದಲ್ಲಂತೂ ನಮ್ಮ ಪರಿಸ್ಥಿತಿ ಹೇಳತೀರದಾಗಿದೆ. ನಾವು ಬಹುದೂರ ನಡೆದುಕೊಂಡು ಹೋಗುತ್ತಿರುವುದರಿಂದ ಕೆಲವೊಮ್ಮೆ ಶಾಲಾ ಸಮವಸ್ತ್ರಗಳು ಕೆಸರುಮಯವಾಗುತ್ತಿದೆ. ವಾಹನಗಳು ಬಂದಾಗ ರಸ್ತೆ ಬದಿಗೆ ಹೋದಾಗ ಪುಟ್ಟ ಮಕ್ಕಳು ಜಾರಿ ಬಿದ್ದ ಉದಾಹರಣೆಗಳೂ ಇವೆ. ಕೂಡಲೇ ರಸ್ತೆ ಸರಿಪಡಿಸಿ.ವರುಣ್ ನವೀನ್ ಹಾಗೂ ಇತರ ವಿದ್ಯಾರ್ಥಿಗಳು ಗುಂಡುಗುಟ್ಟಿ ಗ್ರಾಮ.
ದಯವಿಟ್ಟು ಸರಿಪಡಿಸಿರಿ ಈ ರಸ್ತೆಯು ಸಂಪೂರ್ಣ ಗುಂಡಿಮಯವಾಗಿದೆ. ನಡೆದಾಡಲು ಸಾದ್ಯವಾಗುತ್ತಿಲ್ಲ. ವಾಹನಗಳು ಬಂದರಂತೂ ನಮ್ಮ ಅವಸ್ಥೆ ಹೇಳಲು ಸಾಧ್ಯವಿಲ್ಲ. ದಯವಿಟ್ಟು ಈ ರಸ್ತೆ ಸರಿಪಡಿಸಿ ಜನರ ಸಮಸ್ಯೆ ಹೋಗಲಾಡಿಸಿ.ಪೂರ್ಣಿಮಾ ಶಿಕ್ಷಕಿ ಗುಂಡುಗುಟ್ಟಿ
ಹಿಂದೇಟು ಹಾಕುವ ಆಟೊ ಚಾಲಕರು
ಮಳೆಗಾಲದಲ್ಲಿ ಗುಂಡುಗುಟ್ಟಿ- ಜೈನ ಬಸದಿ ಬಳಿ- ಆ ಭಾಗದ ಲೈನ್‌ಮನೆ- ನಾಕೂರು ಭಾಗದಿಂದ ಬರುವ ವಯೋವೃದ್ದರೂ ರೋಗಿಗಳು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಈ ಭಾಗದ ಗ್ರಾಮಸ್ಥರು ಅನಾರೋಗ್ಯ ಪೀಡಿತರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆಟೊ ಅವಲಂಬಿಸಬೇಕಾಗಿದೆ. ಆದರೆ ರಸ್ತೆ ತುಂಬೆಲ್ಲ ಗುಂಡಿಗಳಿರುವುದರಿಂದ ಆಟೊ ಚಾಲಕರು ಮತ್ತು ಇತರೆ ವಾಹನಗಳು ಇತ್ತ ಕಡೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.