ADVERTISEMENT

ಮಡಿಕೇರಿ: ಅತ್ಯಾಡಿ ಗ್ರಾಮಕ್ಕೆ ದಕ್ಕಿತು ‘ಪ್ರಣವ ಸೇತು’

ಇನ್ನು ಮಳೆಗಾಲದಲ್ಲಿ ಸಂಚಾರ ಸಾಧ್ಯ, ದ್ವೀಪವಾಗುವ ಸ್ಥಿತಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 5:08 IST
Last Updated 25 ಆಗಸ್ಟ್ 2024, 5:08 IST
ಸೇತುವೆ ನಿರ್ಮಾಣಕ್ಕೂ ಮುಂಚೆ ಇದ್ದ ಅತ್ಯಾಡಿ ಗ್ರಾಮಕ್ಕೆ ಹೋಗುವ ಉಂಬಾಳೆ ಹೊಳೆ ಪರಿಸ್ಥಿತಿ
ಸೇತುವೆ ನಿರ್ಮಾಣಕ್ಕೂ ಮುಂಚೆ ಇದ್ದ ಅತ್ಯಾಡಿ ಗ್ರಾಮಕ್ಕೆ ಹೋಗುವ ಉಂಬಾಳೆ ಹೊಳೆ ಪರಿಸ್ಥಿತಿ   

ಮಡಿಕೇರಿ: ಭಾರಿ ಮಳೆ ಬಂದಾಗ ದ್ವೀಪವಾಗುತ್ತಿದ್ದ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ‍್ತಿಯ ಅತ್ಯಾಡಿ ಗ್ರಾಮಕ್ಕೆ ಸಹಾಯ ಹಸ್ತ ಚಾಚಿರುವ ಬೆಂಗಳೂರಿನ ಪ್ರಣವ್ ಫೌಡೇಷನ್‌ ಉಕ್ಕಿನ ಸೇತುವೆಯನ್ನು ನಿರ್ಮಿಸಿಕೊಟ್ಟಿದೆ. ಇದರಿಂದ ಮಳೆಗಾಲದಲ್ಲಿ ತುಂಬಿ ಹರಿಯುವ ಉಂಬಾಳೆ ಹೊಳೆಯನ್ನು ದಾಟಲಾರದೇ ಪರದಾಡುತ್ತಿದ್ದ ಗ್ರಾಮಸ್ಥರು ನಿರಾಳರಾಗುವಂತಾಗಿದೆ.

ಅತ್ಯಾಡಿ ಗ್ರಾಮ ತಲುಪಬೇಕಾದರೆ ಉಂಬಾಳೆ ಹೊಳೆಯನ್ನು ದಾಟಬೇಕು. ಬೇಸಿಗೆ ಸೇರಿದಂತೆ ಮಳೆ ಕಡಿಮೆ ಇರುವ ದಿನಗಳಲ್ಲಿ ಈ ಹೊಳೆಯನ್ನು ಸುಲಭವಾಗಿ ದಾಟಬಹುದು. ಆದರೆ, ಭಾರಿ ಮಳೆ ಬಿದ್ದ ಸಂದರ್ಭದಲ್ಲಿ ಹೊಳೆಯು ಉಕ್ಕಿ ಹರಿಯುತ್ತಿರುತ್ತದೆ. ಈ ವೇಳೆ ಹೊಳೆ ದಾಟಲಾಗದೇ ಜನರು ದ್ವೀಪದ ರೀತಿಯಲ್ಲಿ ಬದುಕು ನಡೆಸಬೇಕಾದ ಸ್ಥಿತಿ ಇತ್ತು. ತುಂಬಿ ಹರಿಯುವ ಹೊಳೆಯ ನೀರಿನ ಮಟ್ಟ ಕಡಿಮೆಯಾಗುವವರೆಗೂ ಜನರು ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇತ್ತು.

ಈ ವಿಷಯ ತಿಳಿದ ಪ್ರಣವ್‌ ಫೌಂಡೇಶನ್‌ನ ಸದಸ್ಯರು ಮೇ ತಿಂಗಳ ಕೊನೆ ಭಾಗದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ‘ತೂಗುಸೇತುವೆಗಳ ಸರದಾರ’ ಎಂದೇ ಖ್ಯಾತರಾದ ಗಿರೀಶ್‌ ಭಾರದ್ವಾಜ್‌ ಅವರ ತಂಡವನ್ನು ಸದಸ್ಯರು ಸಂಪರ್ಕಿಸಿದರು. ಜೂನ್ ತಿಂಗಳಿನಲ್ಲಿ ತಂಡವು ಭೇಟಿ ನೀಡಿ, ಕಾಲು ಸೇತುವೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಯವರಿಂದ ಒಪ್ಪಿಗೆಯನ್ನೂ ಪಡೆದುಕೊಂಡಿತು.

ADVERTISEMENT

ಆಗಸ್ಟ್‌ 10ರಂದು ಆರಂಭವಾದ ಕಾಲುಸೇತುವೆಯ ಕಾಮಗಾರಿ, ಆಗಸ್ಟ್‌ 22ಕ್ಕೆ ಪೂರ್ಣಗೊಂಡಿತು ಮಾತ್ರವಲ್ಲ ಅಳವಡಿಕೆ ಕಾರ್ಯವೂ ನಡೆಯಿತು.

ಸೇತುವೆಯ ವೈಶಿಷ್ಟ್ಯತೆ

ಈ ಸೇತುವೆ ಸಂಪೂರ್ಣ ಉಕ್ಕಿನಿಂದ ಮಾಡಲಾಗಿದ್ದು, ಏಕಕಾಲಕ್ಕೆ 10 ಮಂದಿ ನಿಲ್ಲಬಹುದಾಗಿದೆ. 24 ಮೀಟರ್‌ ಉದ್ದ ಹಾಗೂ 0.75 ಮೀಟರ್‌ ಅಗಲ ಇರುವ ಈ ಸೇತುವೆ ಕನಿಷ್ಠ ಎಂದರೂ 5 ವರ್ಷ ಬಾಳಿಕೆ ಬರುತ್ತದೆ. ಇದಕ್ಕೆ ₹ 2.5 ಲಕ್ಷ ವೆಚ್ಚವಾಗಿದೆ.

2020ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಪ್ರಣವ್‌ ಫೌಂಡೇಶನ್‌, ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ ಕ್ಷೇತ್ರಗಳಲ್ಲಿ ಸುಧಾರಣೆ ತರುವ ಕೆಲಸಗಳನ್ನು ಮಾಡುತ್ತಿದೆ.

ಕೋವಿಡ್‌ ಸಮಯಲ್ಲಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ 50 ಹಾಸಿಗೆಗಳ ಕೋವಿಡ್‌ ಕೇರ್‌ ಸೆಂಟರ್‌ ನಿರ್ಮಾಣ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಹಳ್ಳಿಗಳಲ್ಲಿ ಎಲೆಕ್ಟ್ರಿಕ್‌ ವಾಹನದ ಮೂಲಕ ಕಸ ವಿಲೇವಾರಿ, ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ 120 ರೋಗಿಗಳಿಗೆ ನೆರವಾಗುವ ಡಯಾಲಿಸಿಸ್‌ ಕೇಂದ್ರ ನಿರ್ಮಾಣ, ಗ್ರಾಮೀಣ ಶಾಲೆಗಳಲ್ಲಿ ಕುಡಿಯುವ ನೀರಿನ ಘಟಕ ಅಳವಡಿಕೆ, ಕೊಡಗು, ದಕ್ಷಿಣ ಕನ್ನಡ, ಬೆಂಗಳೂರು ನಗರ ಮೊದಲಾದ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ‘ಸ್ಮಾರ್ಟ್‌’ ಶಾಲಾ ಕಾರ್ಯಕ್ರಮದಡಿ ಟಿವಿ ಅಳವಡಿಕೆ, ಪ್ರತಿ ವರ್ಷ ‘ಗುರುವಂದನ’ ಕಾರ್ಯಕ್ರಮದ ಮೂಲಕ ಸಾಧಕ ಶಿಕ್ಷಕರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳನ್ನು ಪ್ರಣವ್‌ ಫೌಂಡೇಶನ್‌ ಮಾಡುತ್ತಿದೆ.

ಸರ್ಕಾರಿ ಶಾಲೆಯ ಮಕ್ಕಳಿಗೆ ಕಳೆದ ವರ್ಷ ‘ಪುಸ್ತಕ’ ಯೋಜನೆಯಡಿ 2,500 ಪುಸ್ತಕ ಕಿಟ್‌ಗಳನ್ನು ವಿತರಿಸಿದ್ದು, ಈ ವರ್ಷ 5 ಸಾವಿರ ಕಿಟ್‌ಗಳನ್ನು ವಿತರಿಸಲಾಗುತ್ತಿದೆ. ಕೊಡಗು ಜಿಲ್ಲೆಯ ಕೆಲವು ಸರ್ಕಾರಿ ಶಾಲೆಗಳಲ್ಲೂ ಇತ್ತೀಚೆಗೆ ಪುಸ್ತಕದ ಕಿಟ್‌ ವಿತರಣೆಯಾಗಿದೆ ಎಂದು ಫೌಂಡೇಷನ್‌ನ ಮಾಧ್ಯಮ ಸಂಚಾಲಕ ಕಾರ್ತಿಕ್ ಭಟ್ ಹೇಳುತ್ತಾರೆ.

ಹೊಸದಾಗಿ ನಿರ್ಮಾಣವಾಗಿರುವ ಉಕ್ಕಿನ ಕಾಲು ಸೇತುವೆ
ನಿರ್ಮಾಣವಾಗಿರುವ ಉಕ್ಕಿನ ಸೇತುವೆ
ಏಕಕಾಲಕ್ಕೆ 10 ಮಂದಿ ನಿಲ್ಲಬಹುದಾದ ಉಕ್ಕಿನ ಸೇತುವೆ 24 ಮೀಟರ್‌ ಉದ್ದ ಹಾಗೂ 0.75 ಮೀಟರ್‌ ಅಗಲ 5 ವರ್ಷ ಬಾಳಿಕೆ ಬರುವ ಸೇತುವೆ
ಇಂದು ಹಸ್ತಾಂತರ‌
‘ಪ್ರಣವ ಸೇತು’ ಕಾಲು ಸೇತುವೆಯನ್ನು ಗ್ರಾಮಸ್ಥರಿಗೆ ಹಸ್ತಾಂತರ ಮಾಡುವ ಕಾರ್ಯಕ್ರಮ ಆ. 25ರಂದು ಬೆಳಿಗ್ಗೆ 11.30ಕ್ಕೆ ಅತ್ಯಾಡಿ ಗ್ರಾಮದಲ್ಲಿ ನಡೆಯಲಿದೆ ಎಂದು ಫೌಂಡೇಷನ್‌ನ ಮಾಧ್ಯಮ ಸಂಚಾಲಕ ಕಾರ್ತಿಕ್ ಭಟ್ ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸೇತುವೆ ನಿರ್ಮಾಣಕ್ಕೂ ಮುನ್ನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್‌. ಪೊನ್ನಣ್ಣ ಹಿರಿಯ ಪತ್ರಿಕೋದ್ಯಮಿ ಎಚ್‌.ಆರ್‌.ರಂಗನಾಥ್‌ ಹಾಗೂ ಅತ್ಯಾಡಿ ಗ್ರಾಮಸ್ಥರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಅವರೆಲ್ಲರಿಗೂ ಪ್ರಣವ್‌ ಫೌಂಡೇಶನ್‌ ಧನ್ಯವಾದ ಸಲ್ಲಿಸುತ್ತದೆ ಎಂದು ಅವರು ಹೇಳಿದರು. ಕೊಡಗು ಜಿಲ್ಲೆಯ ಯಂಗ್‌ ಇಂಡಿಯನ್‌ ಫಾರ್ಮರ್ಸ್‌ ಅಸೋಸಿಯೇಶನ್‌ ಟೀಮ್‌ 12 ಆಫ್‌ ರೋಡರ್ಸ್‌ ಮತ್ತು ಮಲ್ನಾಡ್‌ ಯೂತ್‌ ಅಸೋಸಿಯೇಶನ್‌ನವರೂ ಸಹ ಕಾಲು ಸೇತುವೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು. ಪೌಂಡೇಷನ್‌ನ ಮಹೇಶ್‌ಕುಮಾರ್ ದೇವಿಪ್ರಸಾದ್ ಕಿರಣ್ ಅಟ್ಲೂರು ನೇತ್ರಾ ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.