ADVERTISEMENT

‘ವ್ಯವಸ್ಥಿತವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ’: ಶಾಸಕ ಕೆ.ಜಿ.ಬೋಪಯ್ಯ

ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 13:08 IST
Last Updated 23 ಜೂನ್ 2020, 13:08 IST
ಕೆ.ಜಿ. ಬೋಪಯ್ಯ
ಕೆ.ಜಿ. ಬೋಪಯ್ಯ   

ಮಡಿಕೇರಿ: ಜೂನ್ 25ರಿಂದ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ನಡೆಸಬೇಕು. ರಾಜ್ಯ ಸರ್ಕಾರದ ಮಾರ್ಗದರ್ಶನವನ್ನು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ಸೂಚಿನೆ ನೀಡಿದರು.

ನಗರದ ಸಂತ ಮೈಕಲರ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ, ಪರೀಕ್ಷಾ ಕೇಂದ್ರಗಳಲ್ಲಿನ ವ್ಯವಸ್ಥೆಯ ಕುರಿತಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವ್ಯವಸ್ಥಿತ ರೀತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕು. ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಿಂದಲೂ ಸಹ ತೊಂದರೆ ಆಗಬಾರದು ಎಂದು ಶಾಸಕರು ತಿಳಿಸಿದರು.

ADVERTISEMENT

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಶೌಚಾಲಯ ವ್ಯವಸ್ಥೆ ಮಾಡಿ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಿ ಶುಚಿಗೊಳಿಸಿಕೊಳ್ಳಬೇಕು. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಒಮ್ಮೆ ವಿದ್ಯಾರ್ಥಿಯು ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ಪಡೆದ ನಂತರ ಅನಗತ್ಯವಾಗಿ ವಿದ್ಯಾರ್ಥಿಯನ್ನು ಹೊರ ಕಳುಹಿಸಬೇಡಿ ಎಂದು ಸಲಹೆ ನೀಡಿದರು.

ಜೊತೆಗೆ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ. ಪರೀಕ್ಷೆಗೆ ಯಾವುದೇ ವಿದ್ಯಾರ್ಥಿಯೂ ಸಹ ಗೈರು ಹಾಜರಾಗದೇ ಪರೀಕ್ಷೆ ಬರೆಯುವಂತಾಗಬೇಕು. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು. ಸೂಕ್ತ ರೀತಿಯಲ್ಲಿ ಮಾಸ್ಕ್ ಧರಿಸುವಂತೆ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಪ್ರತಿ ವಿದ್ಯಾರ್ಥಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಿ, ಥರ್ಮಲ್ ಸ್ಕ್ಯಾನಿಂಗ್ ನಂತರ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಿ ಎಂದು ಶಾಸಕರು ತಿಳಿಸಿದರು.

ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಅವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯು ಜೂನ್ 25ರಿಂದ ಜುಲೈ 3ರ ವರೆಗೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪರೀಕ್ಷೆಯು ಮಡಿಕೇರಿ ಮತ್ತು ವಿರಾಜಪೇಟೆ ತಲಾ 8 ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 11 ಒಟ್ಟು 27 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. 7,149 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 3,562 ಬಾಲಕರು ಮತ್ತು 3,587 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಜೊತೆಗೆ ಯಾವ ವಿದ್ಯಾರ್ಥಿ ಬಸ್ ವ್ಯವಸ್ಥೆ ಇಲ್ಲದೇ ಬಹು ದೂರದ ಊರಿನಿಂದ ಆಗಮಿಸುತ್ತಾರೆಯೋ ಅವರಿಗೆ ಇಲಾಖೆ ವತಿಯಿಂದ ವಾಹನ ವ್ಯವಸ್ಥೆ ಮಾಡಲಾಗುವುದು. ಇದರೊಂದಿಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಮಾಜ ಕಲ್ಯಾಣ ಇಲಾಖೆ, ಐಟಿಡಿಪಿ ಮತ್ತು ಬಿಸಿಎಂ ಇಲಾಖೆಗಳ ಹಾಸ್ಟೆಲ್‍ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಇಲಾಖೆಯಿಂದ 2 ಮತ್ತು ಆರೋಗ್ಯ ಇಲಾಖೆಯಿಂದ 2 ಥರ್ಮಲ್ ಸ್ಕ್ಯಾನರ್ ನೀಡಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಪ್ರತಿ ಪರೀಕ್ಷಾ ಕೇಂದ್ರದಲ್ಲಿಯೂ ಮೈಕ್ ವ್ಯವಸ್ಥೆ ಮಾಡಲಾಗಿದೆ ಎಂದು ಪಿ.ಎಸ್.ಮಚ್ಚಾಡೋ ಮಾಹಿತಿ ನೀಡಿದರು.

ಒಂದು ಕೊಠಡಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತಲಾ 2 ಮಾಸ್ಕ್ ಅನ್ನು ಒದಗಿಸಲಾಗುತ್ತದೆ. ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಮಡಿಕೇರಿ ಡಿವೈಎಸ್‍ಪಿ ದಿನೇಶ್ ಕುಮಾರ್ ಮಾತನಾಡಿ, ಪ್ರತಿ ಪರೀಕ್ಷಾ ಕೇಂದ್ರಕ್ಕೂ ಸಹ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು. ಪರೀಕ್ಷಾ ಕೇಂದ್ರದ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಯಾರಿಗೂ ಸಹ ಪ್ರವೇಶ ನೀಡುವುದಿಲ್ಲ. ಪೊಲೀಸ್ ಇಲಾಖೆ ವತಿಯಿಂದ ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ತಾ.ಪಂ ಇಒ ಲಕ್ಷ್ಮೀ ಅವರು ಮಾತನಾಡಿ, ಪರೀಕ್ಷಾ ಕೇಂದ್ರದ ಸಿಬ್ಬಂದಿಗೆ ತಾಲ್ಲೂಕು ಪಂಚಾಯಿತಿ ವತಿಯಿಂದ ಕೈಗವಸು (ಗ್ಲೌಸ್) ವ್ಯವಸ್ಥೆ ಮಾಡಲಾಗುವುದು. ತಾ.ಪಂ ವತಿಯಿಂದ ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾತನಾಡಿ, ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 8 ಪರೀಕ್ಷಾ ಕೇಂದ್ರಗಳಿದ್ದು, 7 ಪರೀಕ್ಷಾ ಕೇಂದ್ರಗಳಲ್ಲಿ ರೆಗ್ಯುಲರ್ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲ್ಲಿದ್ದು, 1 ಕೇಂದ್ರದಲ್ಲಿ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯಲ್ಲಿದ್ದಾರೆ ಅವರು ತಿಳಿಸಿದ್ದಾರೆ.

ಮಡಿಕೇರಿ ಕೆಎಸ್‍ಆರ್‌ಟಿಸಿ ಘಟಕ ವ್ಯವಸ್ಥಾಪಕಿ ಗೀತಾ ಮಾತನಾಡಿ, ಪರೀಕ್ಷೆಯ ಸಂದರ್ಭ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಮಂಜುನಾಥ್ ಶಿರಾಲಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಖರ್, ಪ್ರಭಾರ ಶಿಕ್ಷಣಾಧಿಕಾರಿ ಗಂಗಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್, ವಿವಿಧ ಶಾಲೆಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.