ವಿರಾಜಪೇಟೆ: ಇಲ್ಲಿಗೆ ಸಮೀಪದ ವಿ.ಬಾಡಗದ ಹೈ ಫ್ಲೈಯರ್ಸ್ ತಂಡದ ವತಿಯಿಂದ 3ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಟೂರ್ನಿ ‘ಹೈಫ್ಲೈಯರ್ಸ್ ಕಪ್-2024’ ಅನ್ನು ಡಿ.4ರಿಂದ 8ರವರೆಗೆ ನಡೆಯಲಿದೆ.
‘ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಐನ್ ಮನೆ ಹೊಂದಿರುವ ಕೊಡವ ಕುಟುಂಬಗಳ ತಂಡಗಳಿಗಾಗಿ ಈ ಟೂರ್ನಿ ಆಯೋಜಿಸಲಾಗಿದೆ’ ಎಂದು ತಂಡದ ಹೈಫ್ಲೈಯರ್ಸ್ ಅಧ್ಯಕ್ಷ ಅಮ್ಮಣಿಚಂಡ ರಂಜು ಪೂಣಚ್ಚ ಅವರು ಇಲ್ಲಿ ಬುಧವಾರ ವಿ.ಬಾಡಗದ ಹೈ ಫ್ಲೈಯರ್ಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈ ಕೌಟುಂಬಿಕ ಹಾಕಿ ಟೂರ್ನಿಯು ವಿ.ಬಾಡಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಒಟ್ಟು 5 ದಿನಗಳ ಕಾಲ ನಡೆಯಲಿದ್ದು, ಸಿದ್ಧತೆಗಳು ಆರಂಭಗೊಂಡಿವೆ. ತಂಡಗಳಲ್ಲಿ ಗರಿಷ್ಠ 4 ಅತಿಥಿ ಆಟಗಾರರು ಭಾಗವಹಿಸಬಹುದು. ಆದರೆ, ಅತಿಥಿ ಆಟಗಾರರು ಕಡ್ಡಾಯವಾಗಿ ಕೊಡವ ಸಮುದಾಯದ ಆಟಗಾರರಾಗಿರಬೇಕು. ವಿಜೇತ ತಂಡಗಳಿಗೆ ಆಕರ್ಷಕ ಸಾಂಪ್ರದಾಯಿಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಟೂರ್ನಿಯನ್ನು ಸಂಪೂರ್ಣವಾಗಿ ದಾನಿಗಳ ನೆರವಿನಿಂದಲೇ ಆಯೋಜಿಸುತ್ತಿದ್ದು, ಗ್ರಾಮಸ್ಥರು ಮತ್ತು ಪ್ರಾಯೋಜಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ’ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಹಾಕಿ ಕ್ರೀಡೆಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಹೈ ಫ್ಲೈಯರ್ಸ್ ಎಂಬ ಕ್ರೀಡಾ ಸಂಸ್ಥೆಯನ್ನು 2 ವರ್ಷಗಳ ಹಿಂದೆ ಹುಟ್ಟು ಹಾಕಲಾಗಿದೆ. ಹಾಕಿ ಕೂರ್ಗ್ ಸಂಸ್ಥೆಯ ಅಧೀನದಲ್ಲಿ ಹಾಕಿ ಕರ್ನಾಟಕ ಸಂಸ್ಥೆಯ ನಿಯಮಾವಳಿಗೆ ಬದ್ಧವಾಗಿ ‘ನಾಕ್ ಔಟ್’ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಆಸಕ್ತ ಕುಟುಂಬಗಳ ತಂಡಗಳು ಹೆಸರು ನೋಂದಾಯಿಸಲು ನ. 20 ಕೊನೆಯ ದಿನ. ನೋಂದಣಿ ಸೇರಿದಂತೆ ಮಾಹಿತಿಗಾಗಿ ಮೊ: 9481883738 ಅಥವಾ 9448306340 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಹೈ ಫ್ಲೈಯರ್ಸ್ ಸಂಸ್ಥೆಯ ಕ್ರೀಡಾ ಕಾರ್ಯದರ್ಶಿ ಕುಪ್ಪಂಡ ದಿಲನ್ ಬೋಪಣ್ಣ ಮಾತನಾಡಿ, ‘ಗ್ರಾಮಾಂತರ ಪ್ರದೇಶದಲ್ಲಿ ಹಾಕಿ ಪಂದ್ಯಾವಳಿಯನ್ನು ನಿರಂತರವಾಗಿ ಆಯೋಜಿಸುವುದರಿಂದ ಹಾಕಿ ಕ್ರೀಡೆಗೆ ಮತ್ತಷ್ಟು ಉತ್ತೇಜನ ದೊರೆತಂತಾಗುತ್ತದೆ. ಕಳೆದ ಬಾರಿ ಆಯೋಜಿಸಿದ್ದ ಈ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ಒಟ್ಟು 19 ಕುಟುಂಬಗಳ ತಂಡಗಳು ಭಾಗವಹಿಸಿದ್ದವು. ಈ ಬಾರಿ 25 ತಂಡಗಳನ್ನು ನಿರೀಕ್ಷಿಸಲಾಗಿದೆ’ ಎಂದು ತಿಳಿಸಿದರು.
ಸಂಸ್ಥೆಯ ಸಲಹಾ ಸಮಿತಿ ನಿರ್ದೇಶಕರಾದ ಕೊಂಗಂಡ ಕಾಶಿ ಕಾರ್ಯಪ್ಪ, ಉಪಾಧ್ಯಕ್ಷ ಕಂಜಿತಂಡ ವಿಕ್ರಾಂತ್ ಮತ್ತು ಸ್ವಾಗತ ಸಮಿತಿ ಸಂಚಾಲಕ ಚೇಮಿರ ಪ್ರಭು ಪೂವಯ್ಯ ಭಾಗವಹಿಸಿದ್ದರು.
ಕಳೆದ ಬಾರಿ ಭಾಗವಹಿಸಿದ್ದು 19 ಕುಟುಂಬಗಳ ತಂಡಗಳು ಈ ಬಾರಿ 25 ತಂಡಗಳು ಭಾಗಿಯಾಗುವ ನಿರೀಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.