ಮಡಿಕೇರಿ: ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸ್ಥಾಪನೆಯಾದ 9 ವರ್ಷಗಳ ಬಳಿಕ ಎಂಬಿಬಿಎಸ್ ಸೀಟು ಹೆಚ್ಚಳಕ್ಕೆ ಸಿದ್ಧತೆಗಳನ್ನು ಆರಂಭಿಸಿದೆ. ಸದ್ಯ, ಇರುವ 150 ಸೀಟುಗಳನ್ನು 200ಕ್ಕೆ ಏರಿಕೆ ಮಾಡುವ ಉತ್ಸಾಹದಲ್ಲಿರುವ ಸಂಸ್ಥೆಯು 50 ಸೀಟು ಹೆಚ್ಚಳಕ್ಕಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಪ್ರಸ್ತಾವ ಸಲ್ಲಿಸಿದೆ.
ಸಂಸ್ಥೆಯು ಸಲ್ಲಿಸಿದ ಪ್ರಸ್ತಾವವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯವು ಮೂವರು ಪರಿವೀಕ್ಷಕರನ್ನು ಸಂಸ್ಥೆಗೆ ಕಳುಹಿಸಿಕೊಟ್ಟಿದೆ. ಕಳೆದ ವಾರವಷ್ಟೇ ಮೂವರು ಪರಿವೀಕ್ಷಕರು ಸಂಸ್ಥೆಗೆ ಭೇಟಿ ನೀಡಿ, ಸೀಟು ಹೆಚ್ಚಳ ಸಂಬಂಧ ಪರಿಶೀಲನೆ ನಡೆಸಿದ್ದಾರೆ.
ಮಡಿಕೇರಿಯ ಹೊರವಲಯದಲ್ಲಿ 2016ರಲ್ಲಿ ಆರಂಭವಾದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೂಲಸೌಕರ್ಯ ಹಾಗೂ ತಜ್ಞ ವೈದ್ಯರ ಕೊರತೆಯ ನಡುವೆಯೂ ಸಂಸ್ಥೆಯ ಅಧೀನದಲ್ಲಿರುವ ಬೋಧನಾ ಆಸ್ಪತ್ರೆಯಲ್ಲಿ ಉತ್ತಮ ಸೇವಾ ಸೌಲಭ್ಯ ಸಿಗುತ್ತಿದೆ ಎಂಬ ಕಾರಣಕ್ಕೆ ಹೊರ ಜಿಲ್ಲೆಗಳಿಂದಲೂ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸಂಸ್ಥೆ ತನ್ನ ಎಂಬಿಬಿಎಸ್ ಸೀಟು ಹೆಚ್ಚಳಕ್ಕೆ ಮುಂದಾಗಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಅವರೂ ಈಚೆಗೆ ಸಂಸ್ಥೆಗೆ ಭೇಟಿ ನೀಡಿದ್ದಾಗ ಸೀಟು ಹೆಚ್ಚಳಕ್ಕೆ ಕ್ರಮ ವಹಿಸಲು ಸೂಚಿಸಿದ್ದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಪರಿವೀಕ್ಷಕರು ವರದಿ ನೀಡಿದರೆ ಮಾತ್ರವೇ ಸೀಟು ಹೆಚ್ಚಳವಾಗದು. ಇದು ಸೀಟು ಹೆಚ್ಚಳದಲ್ಲಿ ಕೇವಲ ಆರಂಭಿಕ ಹೆಜ್ಜೆ ಮಾತ್ರ. ನಂತರ, ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಆ ನಂತರ ರಾಷ್ಟ್ರೀಯ ವೈದ್ಯಕೀಯ ಪರಿಷತ್ತಿಗೆ ಪ್ರಸ್ತಾವ ಸಲ್ಲಿಸಬೇಕು. ಇದಕ್ಕೆ ಪೂರಕವಾದ ಮೂಲಸೌಕರ್ಯವನ್ನು ಕಲ್ಪಿಸಬೇಕು. ಆ ಬಳಿಕವಷ್ಟೇ ಸೀಟು ಹೆಚ್ಚಳ ಸಾಧ್ಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸ್ನಾತಕೋತ್ತರ ಪದವಿ 6 ವಿಭಾಗದಲ್ಲಿ ಆರಂಭ
ಪ್ರಸಕ್ತ ಸಾಲಿನಲ್ಲಿ ಸಂಸ್ಥೆಗೆ 6 ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಆರಂಭಕ್ಕೆ ಅನುಮತಿ ದೊರೆತಿದ್ದು, ಒಟ್ಟು 15 ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ನಡೆಯುತ್ತಿದೆ. ಒಟ್ಟು 60 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಕಲಿಯುತ್ತಿದ್ದಾರೆ.
ಈಗ ಸಂಸ್ಥೆಯಲ್ಲಿ ನ್ಯಾಯ ವೈದ್ಯಶಾಸ್ತ್ರ, ಕಿವಿ, ಮೂಗು, ಗಂಟಲು ವಿಭಾಗ, ಕಣ್ಣು, ಶಸ್ತ್ರಚಿಕಿತ್ಸೆ, ಮೂಳೆ ಚಿಕಿತ್ಸಾ ವಿಭಾಗ ಹಾಗೂ ಸಮುದಾಯ ಆರೋಗ್ಯ ಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಗೆ ಅನುಮತಿ ಸಿಕ್ಕಿದೆ. ಒಟ್ಟು 15 ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‌ಗಳು ನಡೆಯುತ್ತಿವೆ. ಇನ್ನು ರೇಡಿಯೊಲಜಿ, ಚರ್ಮ ಆರೋಗ್ಯ, ಮಾನಸಿಕ ಆರೋಗ್ಯ, ಹಾಗೂ ವೈದ್ಯಕೀಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅನುಮತಿ ಸಿಗಬೇಕಿದೆ.
ಸ್ನಾತಕೋತ್ತರ ಪದವಿ ಹೊಸದಾಗಿ 6 ವಿಭಾಗದಲ್ಲಿ ಆರಂಭ ಒಟ್ಟು 15 ವಿಭಾಗದಲ್ಲಿದೆ ಸ್ನಾತಕೋತ್ತರ ಪದವಿ 60 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ
ಸಂಸ್ಥೆಯಲ್ಲಿ ಹಾಲಿ ಇರುವ 150 ಎಂಬಿಬಿಎಸ್ ಸೀಟುಗಳ ಸಂಖ್ಯೆಯನ್ನು 200ಕ್ಕೆ ಏರಿಕೆ ಮಾಡಲು ಪ್ರಸ್ತಾವ ಸಲ್ಲಿಸಿದ್ದ ಕುರಿತು ರಾಜೀವ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪರಿವೀಕ್ಷಕರು ಸಂಸ್ಥೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆಡಾ.ಎ.ಜೆ. ಲೋಕೇಶ್ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ನಿರ್ದೇಶಕ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.