ಎಫ್‌ಐಆರ್
ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯುತ್ತಿದ್ದ ದಸರಾ ದಶಮಂಟಪಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮದಲ್ಲಿ ಏಕಾಏಕಿ ವೇದಿಕೆಯನ್ನೇರಿ ಅಲ್ಲಿದ್ದ ವಸ್ತುಗಳನ್ನು ತೆಗೆದೆಸೆದವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಎಲ್ಲರ ಶೋಧ ಕಾರ್ಯಕ್ಕೆ ಮುಂದಾಗಿದ್ದಾರೆ.
‘ಒಟ್ಟು 30ರಿಂದ 40 ಜನರಿದ್ದ ಗುಂಪಿನಿಂದ ಈ ಕೃತ್ಯ ನಡೆದಿದ್ದು, ಅವರೆಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ. ಎಲ್ಲರನ್ನೂ ಹುಡುಕಾಟ ನಡೆಸಲಾಗುತ್ತಿದ್ದು, ಪತ್ತೆಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಸದ್ಯ, ಮೂವರ ಹೆಸರನ್ನು ಮಾತ್ರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಉಳಿದಂತೆ, ಇನ್ನುಳಿದ 30ರಿಂದ 40 ಮಂದಿಯನ್ನೂ ಎಫ್‌ಐಆರ್‌ನಲ್ಲಿ ಸೇರಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ದಶಮಂಟಪಗಳಿಗೆ ತೀರ್ಪು ಪ್ರಕಟಿಸುತ್ತಿದ್ದಂತೆ ಸುಮಾರು 30ರಿಂದ 40 ಜನರು ಗುಂಪು ಕಟ್ಟಿಕೊಂಡು ತೀರ್ಪುಗಾರಿಕೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಆರೋಪಿಸುತ್ತಾ ‘ಮೋಸ, ಮೋಸ’ ಎಂದು ದಿಕ್ಕಾರ ಕೂಗುತ್ತಾ ಕಲಾಸಂಭ್ರಮ ವೇದಿಕೆಯನ್ನೇರಿ ಬಹುಮಾನಗಳನ್ನು ಕೆಳಗೆ ಬಿಸಾಡಿ, ಮೈಕ್, ಪೋಡಿಯಂ ಹಾಗೂ ಇತರೆ ಪರಿಕರಗಳಿಗೆ ಹಾನಿ ಮಾಡಿದ್ದಾರೆ. ಸುಮಾರು ₹ 2 ಲಕ್ಷದಷ್ಟು ನಷ್ಟ ಮಾಡಿದ್ದಾರೆ ಎಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದ ಆರೋಪಿ ಯಕ್ಷಿತ್ ಎಂಬುವವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.