ADVERTISEMENT

72ನೇ ಸಹಕಾರ ಸಪ್ತಾಹ; ಐವರಿಗೆ ಪ್ರಶಸ್ತಿ

ನಾಳೆಯಿಂದ ವಿವಿಧೆಡೆ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 2:51 IST
Last Updated 13 ನವೆಂಬರ್ 2025, 2:51 IST

ಮಡಿಕೇರಿ: ಕಳೆದ 63 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲಾ ಸಹಕಾರ ಯೂನಿಯನ್ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಕ್ಷೇತ್ರದಲ್ಲಿ ದುಡಿದ ಸಾಧಕರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ.

ಕೊಡಗು ಸಹಕಾರ ರತ್ನ ಪ್ರಶಸ್ತಿಗೆ ಚಿರಿಯಪಂಡ ಕೆ. ಉತ್ತಪ್ಪ, ಶ್ರೇಷ್ಠ ಸಹಕಾರಿ ಪ್ರಶಸ್ತಿಗೆ ಎಚ್.ಎಸ್.ಮುದ್ದಪ್ಪ, ತಳೂರು ಎ.ಕಿಶೋರ್ ಕುಮಾರ್, ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿಗೆ ದೇವಾಂಬಿಕ ಮಹೇಶ್, ಉತ್ತಮ ಸಹಕಾರಿ ಸಿಬ್ಬಂದಿ ಪ್ರಶಸ್ತಿಗೆ ಆಲೆಮಾಡ ಕಾವೇರಮ್ಮ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು.ರಾಬಿನ್ ದೇವಯ್ಯ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನ. 20ರಂದು ಬೆಳಿಗ್ಗೆ 10.30ಕ್ಕೆ ಮಡಿಕೇರಿಯ ಪಂದ್ಯಂಡ ಐ ಬೆಳ್ಯಪ್ಪ ಸಭಾಂಗಣದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ ಗಣಪತಿ ಉದ್ಘಾಟಿಸಲಿದ್ದಾರೆ. ಶಾಸಕರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್‌ಗೌಡ, ಸುಜಾ ಕುಶಾಲಪ್ಪ, ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿಯಾಗಲಿದ್ದು, ನಾನು ಅಧ್ಯಕ್ಷತೆ ವಹಿಸಲಿದ್ದೇನೆ ಎಂದರು.

ADVERTISEMENT

ದಿನದ ಮಹತ್ವ ಕುರಿತು ನಿವೃತ್ತ ಪ್ರಾಂಶುಪಾಲರಾದ ಎಂ.ಎಂ.ಶ್ಯಾಮಲಾ ಭಾಷಣ ಮಾಡಲಿದ್ದಾರೆ ಎಂದರು.

ಅಖಿಲ ಭಾರತ ಸಹಕಾರ ಸಪ್ತಾಹದ ಧ್ಯೇಯ ಮತ್ತು ಆಚರಣೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ‘ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು’ ಎಂಬ ಧ್ಯೇಯದೊಂದಿಗೆ ನ. 14ರಿಂದಲೇ ಜಿಲ್ಲೆಯ ವಿವಿಧೆಡೆ ಕಾರ್ಯಕ್ರಮಗಳು ನಡೆಯಲಿವೆ. 14ರಂದು ಪೆರಾಜೆ ಪ್ಯಾಕ್ಸ್, 15ರಂದು ಪಾಲಿಬೆಟ್ಟ ಪ್ಯಾಕ್ಸ್, 16ರಂದು ಸುಂಟಿಕೊಪ್ಪ ಪ್ಯಾಕ್ಸ್, 17ರಂದು ಸೋಮವಾರಪೇಟೆ ಪ್ಯಾಕ್ಸ್, 18ರಂದು ಕಾನೂರು ಪ್ಯಾಕ್ಸ್, 19ರಂದು ದೇವಣಗೇರಿ ಪ್ಯಾಕ್ಸ್, 20ರಂದು ಮಡಿಕೇರಿಯ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಸಭಾಂಗಣದಲ್ಲಿ ಕಾರ್ಯಕ್ರಮಗಳು ನಿಗದಿಯಾಗಿವೆ ಎಂದರು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್, ನಿರ್ದೇಶಕರಾದ ಬಲ್ಲಾರಂಡ ಮಣಿ ಉತ್ತಪ್ಪ, ವಿ.ಸಿ.ಅಮೃತ್, ಎಂ.ಟಿ.ಸುಬ್ಬಯ್ಯ, ಎಂ.ಎಂ.ಶ್ಯಾಮಲಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.