ಕುಶಾಲನಗರ: ಧರ್ಮಸ್ಥಳ ಹಾಗೂ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅಪಪ್ರಚಾರ ಹಾಗೂ ಅವಹೇಳನ ಖಂಡಿಸಿ ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಬೈಚನಹಳ್ಳಿ ಮಾರಮ್ಮ ದೇವಸ್ಥಾನ ಬಳಿಯಿಂದ ಆರಂಭಗೊಂಡ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಕ್ತರು ಕೈಯಲ್ಲಿ ಬ್ಯಾನರ್, ವಿವಿಧ ನಾಮಫಲಕ ಹಿಡಿದು ಘೋಷಣೆ ಕೂಗುತ್ತಾ ಸಾಗಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿದರು. ಕಿಡಿಗೇಡಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಪ್ರತಿಭಟನೆ ವೇಳೆ ವೇದಿಕೆಯಲ್ಲಿ ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೆಹಳ್ಳಿ ದಿಢೀರ್ ಪ್ರವೇಶ ಮಾಡಿ ಜೈಶ್ರೀರಾಮ ಎಂಬ ಘೋಷಣೆ ಕೂಗಿತ್ತಿದ್ದಂತೆ ನೆರೆದಿದ್ದ ಪ್ರತಿಭಟನಾಕಾರರು ಜೈಶ್ರೀರಾಮ್ ಘೋಷಣೆ ಮೊಳಗಿಸಿದರು. ಇದರಿಂದ ಕಸಿವಿಸಿಗೊಂಡ ಪೊಲೀಸರು ಪುನೀತ್ ಅವರನ್ನು ವೇದಿಕೆಯಿಂದ ಕೆಳಗಿಸಲು ಮುನ್ನುಗ್ಗಿದರು. ಈ ವೇಳೆ ಗೊಂದಲಮಯ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಗಣಪತಿ ದೇವಾಲಯ ವೇದಿಕೆ ಸುತ್ತುವರಿದರು. ಪುನೀತ್ ಅವರನ್ನು ವಶಕ್ಕೆ ಪಡೆದು ಕರೆದೊಯ್ಯಲು ಪೊಲೀಸರು ಹರಸಾಹಸ ಪಟ್ಟರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕು ನುಗ್ಗಲು ಉಂಟಾಯಿತು.
ಪ್ರತಿಭಟನಾಕಾರರ ವಿರೋಧವನ್ನು ಹತ್ತಿಕ್ಕಿ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಕೆರೆಹಳ್ಳಿ ಬಂಧನ ಖಂಡಿಸಿ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ಮಾತಿನ ಚಕಮುಕಿ ನಡೆಯಿತು. ಅನುಮತಿ ಪಡೆಯದೆ ಪುನೀತ್ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡುವುದನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿ ಪೊಲೀಸರು ಬಲವಂತವಾಗಿ ಕೆರೆಹಳ್ಳಿಯನ್ನು ಕರೆದೊಯ್ದರು. ಕೊಡಗಿನ ಗಡಿಯಾಚೆ ಬೈಲುಕೊಪ್ಪ ಪೊಲೀಸ್ ಠಾಣೆಗೆ ಕೆರೆಹಳ್ಳಿಯನ್ನು ಹಸ್ತಾಂತರಿಸಿದ ಪೊಲೀಸ್ ಮುಂದಿನ ಕ್ರಮ ಕೈಗೊಂಡರು.
ಕೊಡಗು ಜನಜಾಗೃತಿ ವೇದಿಕೆ ಸದಸ್ಯ ನಿಸರ್ಗ ಸ್ವಾಮಿ, ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪುಂಡರೀಕಾಕ್ಷ ಮಾತನಾಡಿದರು. ಕಾರ್ಯಪ್ಪ ವೃತ್ತದಿಂದ ರಥಬೀದಿ ಮೂಲಕ ಮೆರವಣಿಗೆ ಹೋಗಿ ತಹಶೀಲ್ದಾರ್ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎ.ಟಿ.ರಂಗಸ್ವಾಮಿ, ವೇದಿಕೆ ಸದಸ್ಯರಾದ ಎ.ಎಸ್.ಚಂದ್ರಶೇಖರ್ ಆವರ್ತಿ,ಎಚ್.ಎಂ. ಚಂದ್ರು, ಎಸ್.ಕೆ.ಸತೀಶ್, ಕೆ.ಎಸ್.ರಾಜಶೇಖರ್, ಎಂ.ಎನ್.ಚಂದ್ರಮೋಹನ್, ಬೈಲುಕುಪ್ಪೆ ಸ್ವಾಮಿ ವಿವಿಧ ಸಂಘಟನೆಗಳ ಮುಖಂಡರಾದ ಬಿ.ಆರ್.ನಾಗೇಂದ್ರ ಪ್ರಸಾದ್, ಆವೃತ್ತಿ ಮಹಾದೇವಪ್ಪ,ಮನುನಂಜುಂಡ,ಬೋಸ್ ಮೊಣ್ಣಪ್ಪ,ಎಂ.ಎಂ.ಚರಣ್,ಎಚ್.ಎಂ.ಮಧುಸೂದನ್, ಎಂ.ಎಸ್.ಶಿವಾನಂದ,ಅಮೃತ್ ರಾಜ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.