ಮಡಿಕೇರಿಯಲ್ಲಿ ಭಾನುವಾರ ದಿನವಿಡೀ ಸುರಿದ ಮಳೆ ಸಂಜೆ ನಿಂತ ನಂತರ ಪ್ರವಾಸಿಗರು ರಾಜಾಸೀಟ್‌ನತ್ತ ಬಂದು ನಿಸರ್ಗದ ಸೊಬಗಿನ ಜೊತೆ ಫೋಟೊ ತೆಗೆಸಿಕೊಂಡು ಖುಷಿಪಟ್ಟರು
ಪ್ರಜಾವಾಣಿ ಚಿತ್ರ: ರಂಗಸ್ವಾಮಿ
ಮಡಿಕೇರಿ: ಇಲ್ಲಿನ ಐತಿಹಾಸಿಕ ರಾಜಾಸೀಟ್ ಉದ್ಯಾನದಲ್ಲಿ ಗಾಜಿನ ಸೇತುವೆ ನಿರ್ಮಿಸಲು ತೋಟಗಾರಿಕೆ ಇಲಾಖೆ ಟೆಂಡರ್ ಕರೆದಿರುವುದಕ್ಕೆ ಪರಿಸರವಾದಿಗಳು, ಬಿಜೆಪಿ ನಾಯಕರು ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೂಡ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ‘ಪಿಪಿಪಿ’ ಮಾದರಿಯಲ್ಲಿ ₹ 5 ಕೋಟಿ ವೆಚ್ಚದಲ್ಲಿ ಇಲಾಖೆಯು ಗಾಜಿನ ಸೇತುವೆ ಮತ್ತು ಫುಡ್ ಕೋರ್ಟ್ ನಿರ್ಮಾಣಕ್ಕೆ ಟೆಂಡರ್ ಕರೆದಿದೆ. ‘ನಿಸರ್ಗದ ಸೊಬಗನ್ನು ಕಣ್ತುಂಬಿಕೊಳ್ಳಲೆಂದೇ ಇರುವ ಉದ್ಯಾನದಲ್ಲಿ ಈ ಬಗೆಯ ಪ್ರವಾಸೋದ್ಯಮ ಚಟುವಟಿಕೆಗಳು ಬೇಡ’ ಎಂಬ ಅಭಿಪ್ರಾಯ ಪರಿಸರವಾದಿಗಳದ್ದು.
‘ಉದ್ಯಾನದ ಕೂಗಳತೆ ದೂರದಲ್ಲಿರುವ ಇಂದಿರಾ ನಗರ, ಚಾಮುಂಡೇಶ್ವರಿ ನಗರಗಳ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಭೂಕುಸಿತಗಳಾಗಿವೆ. ಇಲ್ಲಿನ ಹಲವು ನಿವಾಸಿಗಳಿಗೆ ಮನೆ ತೆರವುಗೊಳಿಸಲು ನೋಟಿಸ್ ನೀಡಲಾಗಿದೆ. ಇಂತಹ ಪ್ರದೇಶಕ್ಕೆ ಸಮೀಪದಲ್ಲೇ ಸೇತುವೆ ನಿರ್ಮಿಸಲು ಮುಂದಾಗಿರುವುದು ಎಷ್ಟು ಸರಿ’ ಎಂಬ ಪ್ರಶ್ನೆಯೂ ಮೂಡಿದೆ.
‘ರಾಜಾಸೀಟ್ ಅನ್ನು ಸಂಪರ್ಕಿಸುವ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಸೂಕ್ತ ವಾಹನ ನಿಲುಗಡೆ ತಾಣವನ್ನೂ ನಿರ್ಮಿಸಿಲ್ಲ. ಈಗ ವಾರಾಂತ್ಯದಲ್ಲಿ ಪ್ರವಾಸಿಗರ ದಟ್ಟಣೆ ಅಧಿಕವಿದ್ದು, ವಾಹನ ಚಾಲನೆ ಮಾಡಲು ಪರದಾಡಬೇಕಾಗುತ್ತದೆ. ಸೂಕ್ತ ವಾಹನ ನಿಲುಗಡೆ ತಾಣ ನಿರ್ಮಿಸದೇ, ರಸ್ತೆಯನ್ನು ಅಭಿವೃದ್ಧಿಪಡಿಸದೇ ಗಾಜಿನ ಸೇತುವೆ ನಿರ್ಮಿಸಲು ಟೆಂಡರ್ ಕರೆಯಲಾಗಿದೆ’ ಎಂಬ ದೂರೂ ಇದೆ.
ಬಿಜೆಪಿಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಈ ಕುರಿತು ಸುದ್ದಿಗೋಷ್ಠಿ ನಡೆಸಿ, ‘ಯಾವುದೇ ಕಾರಣಕ್ಕೂ ರಾಜಾಸೀಟ್‌ನಂತಹ ನಿಸರ್ಗ ರಮಣೀಯ ತಾಣದಲ್ಲಿ ಗಾಜಿನ ಸೇತುವೆ ನಿರ್ಮಿಸಲು ಬಿಡುವುದಿಲ್ಲ. ಇಂತಹ ಯೋಜನೆಗಳು ಭೂಕುಸಿತದಂತಹ ಘಟನೆಗೆ ಕಾರಣವಾಗಬಲ್ಲುದು. ಈ ಕುರಿತು ಪ್ರತಿಭಟನೆಯೊಂದಿಗೆ ಕಾನೂನು ಹೋರಾಟವನ್ನೂ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್‌ನ ಹಿರಿಯ ಮುಖಂಡ ಮತ್ತು ಮಾಜಿ ಕಾನೂನು ಸಚಿವ ಎಂ.ಸಿ.ನಾಣಯ್ಯ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ರಾಜಾಸೀಟ್ ಉದ್ಯಾನದಲ್ಲಿ ಯಾವುದೇ ಕಾರಣಕ್ಕೂ ಗಾಜಿನ ಸೇತುವೆ (ಗ್ಲಾಸ್ ಬ್ರಿಡ್ಜ್) ಮಾಡುವುದು ಬೇಡ. ಇದು ವಾಣಿಜ್ಯೋದ್ಯಮಕ್ಕೆ ಇರುವ ಜಾಗವಲ್ಲ. ಇದನ್ನು ನಿಲ್ಲಿಸಲು ಮಡಿಕೇರಿ ನಗರದ ಎಲ್ಲ ನಾಗರಿಕರೂ ಒಂದಾಗಬೇಕು’ ಎಂದು ಹೇಳಿದರು.
ಸೂರ್ಯೋದಯಕ್ಕೂ ಹತ್ತಿಯ ಉಂಡೆಗಳಂತೆ ಆವರಿಸಿದ್ದ ಮೋಡ ಮಂಜುಗಳು ಮಡಿಕೇರಿಯ ರಾಜಾಸೀಟ್ ಉದ್ಯಾನದಲ್ಲಿ ಸೆರೆಯಾಯಿತು
ಏನಿದು ರಾಜಾಸೀಟ್ ?:
ಕೊಡಗನ್ನು ಆಳಿದ ಹಾಲೇರಿ ರಾಜವಂಶದ ಅರಸರು ಮಡಿಕೇರಿಯ ಗುಡ್ಡದ ಮೇಲೆ ಕುಳಿತು ಪ್ರಕೃತಿ ವೀಕ್ಷಿಸುತ್ತಿದ್ದ ಕಾರಣಕ್ಕೆ ಈ ಪ್ರದೇಶಕ್ಕೆ ರಾಜಾಸೀಟ್ ಎಂಬ ಹೆಸರು ಬಂದಿತು. ಅರಸರನ್ನು ಪದಚ್ಯುತಗೊಳಿಸಿದ ಬ್ರಿಟಿಷರು ಈ ಪ್ರದೇಶವನ್ನು ಸೈನಿಕರ ಸಮಾಧಿ ಸ್ಥಳವನ್ನಾಗಿಸಿದರು. ಸ್ವಾತಂತ್ರ್ಯ ಹೋರಾಟದ ನಂತರ ಇಲ್ಲಿದ್ದ ಸಮಾಧಿಗಳನ್ನು ಸ್ಥಳಾಂತರಿಸಿ ಉದ್ಯಾನವನ್ನಾಗಿ ರೂಪಿಸಲಾಯಿತು. ಇಲ್ಲಿಂದ ಕಾಣಸಿಗುವ ನಿಸರ್ಗದ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.
ಮುಖ್ಯಮಂತ್ರಿಗೆ ಪತ್ರ ಬರೆಯುವೆ: ರಾಜಾಸೀಟ್‌ಗೆ ಬರುವವರು ಅದರ ನಿಸರ್ಗದ ಸೌಂದರ್ಯ ವೀಕ್ಷಣೆಗಾಗಿ ಮಾತ್ರ. ಇಲ್ಲಿ ಹಣ ಸಂಪಾದನೆಗಾಗಿ ಮಾತ್ರ ಗಾಜಿನ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿನ ನಿಸರ್ಗದ ಸೌಂದರ್ಯ ರಕ್ಷಣೆ ಮಾಡಬೇಕು. ಕೂಡಲೇ ಈ ಗಾಜಿನ ಸೇತುವೆ ನಿರ್ಮಾಣ ಪ್ರಸ್ತಾವವನ್ನು ಕೈಬಿಡಬೇಕು. ಈ ಸಂಬಂಧ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯುವೆಎಂ.ಸಿ.ನಾಣಯ್ಯ ಕಾಂಗ್ರೆಸ್‌ನ ಹಿರಿಯ ಮುಖಂಡ ಮತ್ತು ಮಾಜಿ ಕಾನೂನು ಸಚಿವ.
ಪ್ರತಿಭಟನೆಗೂ ಸಿದ್ಧ; ಸಂಸದ ರಾಜಾಸೀಟ್‌ನಲ್ಲಿ ಗಾಜಿನ ಸೇತುವೆಯಂತಹ ನಿರ್ಮಾಣ ಕಾಮಗಾರಿಗಳು ಖಂಡಿತವಾಗಿಯೂ ಬೇಡ. ಇದಕ್ಕೆ ಸ್ಥಳೀಯರ ವಿರೋಧ ಇದೆ. ಸ್ಥಳೀಯರ ಅಭಿಪ್ರಾಯವನ್ನು ಗೌರವಿಸಬೇಕು. ಗಾಜಿನ ಸೇತುವೆ ವಿರುದ್ಧ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವೆ. ಮಾತ್ರವಲ್ಲ ಪ್ರತಿಭಟನೆಗೂ ಸಿದ್ಧವಿದ್ದೇನೆಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಸದ
ಗಾಜಿನ ಸೇತುವೆ ಬೇಡ: ಕೊಡಗಿನಲ್ಲಿ ಗಾಜಿನ ಸೇತುವೆಯಂತಹ ಪ್ರವಾಸೋದ್ಯಮ ಚಟುವಟಿಕೆಗಳು ಬೇಡ. ಇಲ್ಲಿನ ಪರಿಸರವನ್ನು ಎಲ್ಲರೂ ರಕ್ಷಿಸಬೇಕುಕರ್ನಲ್ ಸಿ.ಪಿ.ಮುತ್ತಣ್ಣ ಪರಿಸರ ಆರೋಗ್ಯ ಫೌಂಡೇಷನ್‌ನ ಸಂಸ್ಥಾಪಕ.
ಕೌನ್ಸಿಲ್ ಸಭೆಯಲ್ಲಿ ಚರ್ಚೆ: ಗಾಜಿನ ಸೇತುವೆ ನಿರ್ಮಾಣದ ವಿಷಯವನ್ನು ಮಡಿಕೇರಿ ನಗರಸಭೆಯ ಗಮನಕ್ಕೆ ತಂದಿಲ್ಲ. ಇಲ್ಲಿ ಗಾಜಿನ ಸೇತುವೆ ಖಂಡಿತ ಬೇಡ. ಕೂಡಲೇ ಈ ನಿರ್ಮಾಣ ಪ್ರಸ್ತಾವವನ್ನು ಕೈಬಿಡಬೇಕು. ಈ ಕುರಿತು ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗುವುದು ಮಹೇಶ್ ಜೈನಿ ಮಡಿಕೇರಿ ನಗರಸಭೆಯ ಉಪಾಧ್ಯಕ್ಷ.
ಸರ್ಕಾರದ ನಿರ್ಧಾರವನ್ನು ಜಾರಿಗೊಳಿಸುತ್ತಿದ್ದೇವೆ ರಾಜಾಸೀಟ್ ಉದ್ಯಾನದಲ್ಲಿ ಗಾಜಿನ ಸೇತುವೆ ನಿರ್ಮಾಣ ಮಾಡಬೇಕೆನ್ನುವುದು ಸರ್ಕಾರದ ನಿರ್ಧಾರ. ಅದನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೇವೆ.ಫಣೀಂದ್ರ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ.
ಗಾಜಿನ ಸೇತುವೆ ಏಕೆ ಬೇಕು?:
* ತೋಟಗಾರಿಕಾ ಇಲಾಖೆಯ ಆದಾಯ ಗಣನೀಯವಾಗಿ ಏರಿಕೆಯಾಗುತ್ತದೆ
* ಅತ್ಯಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ
* ಫುಡ್ ಕೋರ್ಟ್‌ನಿಂದ ಅನೇಕ ಮಂದಿಗೆ ಕೆಲಸ ಸಿಗುತ್ತದೆ
* ಹೆಚ್ಚಿನ ಪ್ರವಾಸಿಗರಿಂದ ಇಲ್ಲಿ ಸ್ಥಳೀಯವಾಗಿ ವ್ಯಾಪಾರ ವಹಿವಾಟು ಚುರುಕುಗೊಳ್ಳುತ್ತದೆ
ಗಾಜಿನ ಸೇತುವೆ ಏಕೆ ಬೇಡ?:
* ರಾಜಾಸೀಟ್‌ಗೆ ಸಮೀಪದಲ್ಲೆ ಭೂಕುಸಿತವಾಗಿದೆ. ಹಾಗಾಗಿ ಇಲ್ಲಿ ಗಾಜಿನ ಸೇತುವೆ ನಿರ್ಮಿಸುವುದು ಸುರಕ್ಷತೆಯ ದೃಷ್ಟಿಯಿಂದ ಬೇಡ
* ರಾಜಾಸೀಟ್‌ಗೆ ಈಗಾಗಲೇ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂತಹ ಜಾಗದಲ್ಲಿ ಪ್ರವಾಸಿಗರನ್ನು ಸೆಳೆಯುವಂತಹ ಕಾಮಗಾರಿ ಬೇಡ
* ರಾಜಾಸೀಟ್‌ಗೆ ಪ್ರವಾಸಿಗರು ಬರುವುದು ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯಲು. ನಿಸರ್ಗದ ಸೌಂದರ್ಯ ಸವಿಯುವಂತಹ ಈ ಜಾಗದಲ್ಲಿ ಗಾಜಿನ ಸೇತುವೆಯ ಅಗತ್ಯ ಇಲ್ಲ
* ಈಗಲೇ ಇಲ್ಲಿ ವಾಹನ ನಿಲುಗಡೆ ಸಮಸ್ಯೆ ಹೆಚ್ಚಿದೆ. ರಸ್ತೆಯೂ ಗುಣಮಟ್ಟದಿಂದ ಕೂಡಿಲ್ಲ. ಗಾಜಿನಸೇತುವೆಯಿಂದ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಿ ಸಂಚಾರವೇ ಇಲ್ಲಿ ಅಸಹನೀಯವಾಗುತ್ತದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.