ADVERTISEMENT

ಹಾಕಬೇಕಿದೆ 42,477 ಮಕ್ಕಳಿಗೆ ಪೋಲಿಯೊ ಲಸಿಕೆ

ಜಿಲ್ಲೆಯಾದ್ಯಂತ ಡಿ.21 ರಂದು ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 2:28 IST
Last Updated 12 ಡಿಸೆಂಬರ್ 2025, 2:28 IST
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ
ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಲಸಿಕೆಯನ್ನು 42,477 ಮಕ್ಕಳಿಗೆ ಹಾಕಬೇಕಿದ್ದು, ಡಿ. 21ರಂದು ಎಲ್ಲ ಕಡೆ ಹಾಕಲು ಸಿದ್ಧತೆಗಳು ಭರದಿಂದ ನಡೆದಿವೆ. ಇವರಲ್ಲಿ 4,608 ವಲಸೆ ಮಕ್ಕಳಿದ್ದಾರೆ.

ಡಿ. 21ರಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಬೂತ್ ಮಟ್ಟದಲ್ಲಿ ಪೋಲಿಯೊ ಹನಿ ನೀಡಲಾಗುತ್ತದೆ. 22ರಿಂದ 24ರವರೆಗೆ ಮನೆ ಮನೆಗೆ ಭೇಟಿ ನೀಡಿ ಪೋಲಿಯೊ ಹನಿ ನೀಡಲಾಗುತ್ತದೆ. 

ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ವರೆನ್ಸ್ ನಡೆಸಿ, ಸೂಚನೆಗಳನ್ನು ನೀಡಿದರು.

ADVERTISEMENT

21ರಂದು ಅಗತ್ಯ ಸಿಬ್ಬಂದಿಗಳ ನಿಯೋಜನೆ, ವಾಹನ ನಿಯೋಜನೆ, ವಿದ್ಯುತ್ ಸಂಪರ್ಕ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪೋಲಿಯೊ ಹನಿ ನೀಡುವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು, ಎಲ್ಲ ಇಲಾಖೆಗಳ ಅಧಿಕಾರಿಗಳೂ ಕೈಜೋಡಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ‘ಜಿಲ್ಲೆಯಲ್ಲಿ ಒಟ್ಟು 5,80,720 ಜನಸಂಖ್ಯೆ ಇದ್ದು, ನಗರ ವ್ಯಾಪ್ತಿಯಲ್ಲಿ 57,727, ಗ್ರಾಮೀಣ ಭಾಗದಲ್ಲಿ 5,24,993 ಜನ ಸಂಖ್ಯೆ ಇದ್ದು, ಇವರಲ್ಲಿ ವಲಸೆ ಜನ ಸಂಖ್ಯೆ 19,164 ಮತ್ತು ಸ್ಥಿರವಾಸಿತ ವಲಸೆ ಜನಸಂಖ್ಯೆಯು 2,05,861 ಇರುತ್ತದೆ. ಇದರಲ್ಲಿ 3 ತಿಂಗಳಿನಿಂದ 5 ವರ್ಷದ ಒಳಗಿನ ವಲಸೆ ಮಕ್ಕಳ ಸಂಖ್ಯೆ 4,608 ಮಕ್ಕಳು ಇದ್ದಾರೆ ಎಂದು ಮಾಹಿತಿ ನೀಡಿದರು.

ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲು ಜಿಲ್ಲೆಯಲ್ಲಿ ಒಟ್ಟು 464 ಬೂತ್‍ಗಳನ್ನು ಗುರುತಿಸಲಾಗಿದೆ. ಜನನಿಬಿಡ ಪ್ರದೇಶಗಳಲ್ಲಿ 30 ಸಂಚಾರಿ ತಂಡ, 6 ಮೊಬೈಲ್ ಸಂಚಾರಿ ತಂಡ ರಚಿಸಲಾಗಿದೆ. ಒಟ್ಟು 1,928 ಲಸಿಕೆದಾರರನ್ನು ಗುರುತಿಸಲಾಗಿದ್ದು, ಮನೆ ಮನೆ ಭೇಟಿ ನೀಡಲು ಒಟ್ಟು 924 ತಂಡಗಳನ್ನು ರಚಿಸಲಾಗಿದೆ. ಒಟ್ಟು 86 ಮೇಲ್ವಿಚಾರಕರನ್ನು ಗುರುತಿಸಲಾಗಿದೆ. ಇವರುಗಳಿಗೆ ಈಗಾಗಲೇ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಿಂದ ತರಬೇತಿ ನೀಡಲಾಗಿದೆ ಎಂದು ಅವರು ವಿವರಿಸಿದರು.

ಒಟ್ಟು 40 ಶೀತಲ ಸರಪಳಿ ಕೇಂದ್ರಗಳಿದ್ದು, ಈ ಕಾರ್ಯಕ್ರಮಕ್ಕಾಗಿ ಸನ್ನದ್ಧ ಮಾಡಲಾಗಿದೆ. ಇತರೆ ಯಾವುದೇ ಲಸಿಕೆಗಳು ಮಿಶ್ರವಾಗದಂತೆ ಬೇರೆ ಬೇರೆಯಾಗಿ ಇಟ್ಟು ಶೀತಲ ಸರಪಳಿ ನಿರ್ವಹಣೆ ಮಾಡಲು ಎಲ್ಲಾ ಶೀತಲ ಸರಪಳಿ ನಿರ್ವಾಹಕರಿಗೆ ತರಬೇತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ವೈದ್ಯಕೀಯ ಶಿಕ್ಷಣ ಇಲಾಖೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜೊತೆ ಕೈಜೋಡಿಸುವುದು, ರೋಟರಿ ಕ್ಲಬ್, ರೋಟರಿ ಮಿಸ್ಟಿ ಹಿಲ್, ಲಯನ್ಸ್ ಕ್ಲಬ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆಗಳು ಪಲ್ಸ್ ಪೋಲಿಯೋ ಯಶಸ್ಸಿಗೆ ಕೈಜೋಡಿಸುವುದು, ಹಾಗೆಯೇ ವಿವಿಧ ಧಾರ್ಮಿಕ ಮುಖಂಡರು ಸಹ ಪಲ್ಸ್ ಪೋಲಿಯೋ ಲಸಿಕೆ ಮಹತ್ವ ಬಗ್ಗೆ ಜಾಗೃತಿ ಮೂಡಿಸುವುದು. ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸಂಚಾರಿ ಘಟಕಕ್ಕೆ ಸ್ಥಳಾವಕಾಶ ನೀಡಿ ಲಸಿಕೆ ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂದನ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಲೋಕೇಶ್, ಆರ್‌ಟಿಒ ಅಧಿಕಾರಿ ಸತೀಶ, ಕೆಎಸ್‍ಆರ್‌ಟಿಸಿ ಡಿಪೊ ವ್ಯವಸ್ಥಾಪಕ ಈರಸಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಪ್ರಸನ್ನ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಬಸವರಾಜು, ಡಿಯುಡಿಸಿ ಬಿ.ಬಸಪ್ಪ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಿದಾನಂದ ಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೇಖರ್, ಐಟಿಡಿಪಿ ಇಲಾಖಾ ಅಧಿಕಾರಿ ಎಸ್.ಹೊನ್ನೇಗೌಡ, ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಡಾ.ಕೃಷ್ಣಮೂರ್ತಿ, ಕಾರ್ಮಿಕ ಅಧಿಕಾರಿ ಕಾವೇರಿ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದೀಪಕ್ ಭಾಗವಹಿಸಿದ್ದರು.

ಏನೇನು ಮಾಡಬೇಕು?

* ಶಾಲಾ ಶಿಕ್ಷಣ ಇಲಾಖೆ ಜಾಗೃತಿ ಜಾಥಾ ಏರ್ಪಡಿಸಬೇಕು

* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮೂಲಕ ಗ್ರಾಮಮಟ್ಟದಲ್ಲಿ ಅರಿವು ಮೂಡಿಸಬೇಕು

* ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ಪಡೆಯುವಂತೆ ಮಾಹಿತಿ ನೀಡಬೇಕು

* ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ಮೂಲಕ ಸ್ಥಳೀಯ ನಗರ ಪಟ್ಟಣ ವ್ಯಾಪ್ತಿಯಲ್ಲಿ ಪಲ್ಸ್ ಪೋಲಿಯೊ ಲಸಿಕೆ ಪಡೆಯುವಂತಾಗಲು ಜನ ಜಾಗೃತಿ ಮೂಡಿಸಬೇಕು

* ಪ್ರಾದೇಶಿಕ ಸಾರಿಗೆ ಇಲಾಖೆ ಮೂಲಕ ಅಗತ್ಯ ವಾಹನಗಳ ನಿಯೋಜನೆ ಮಾಡಬೇಕು

* ಬಸ್ ನಿಲ್ದಾಣಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಪಲ್ಸ್ ಪೋಲಿಯೊ ಲಸಿಕೆ ಪಡೆಯಲು ಅರಿವು ಮೂಡಿಸಬೇಕು

* ಕಾರ್ಮಿಕ ಇಲಾಖೆ ಮೂಲಕ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.