ADVERTISEMENT

ಮಹಿಳಾ ವಿರೋಧಿಗಳಿಂದ ಗ್ಯಾರಂಟಿ ವಿರೋಧಿ ಹೇಳಿಕೆ: ಪುಷ್ಪಾ ಅಮರ್ ನಾಥ್

​ಪ್ರಜಾವಾಣಿ ವಾರ್ತೆ
Published 19 ಜನವರಿ 2025, 4:35 IST
Last Updated 19 ಜನವರಿ 2025, 4:35 IST
ಸೋಮವಾರಪೇಟೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರ್ನಾಥ್ ಶನಿವಾರ ಶಕ್ತಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಸೋಮವಾರಪೇಟೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ. ಪುಷ್ಪಾ ಅಮರ್ನಾಥ್ ಶನಿವಾರ ಶಕ್ತಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.   

ಸೋಮವಾರಪೇಟೆ: ‘ಸರ್ಕಾರದ ಐದು ಯೋಜನೆ ನೀಡುವ ಮೂಲಕ ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಮುಂದಾಗಿದ್ದು, ಮಹಿಳಾ ವಿರೋಧಿಗಳು ಅದರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಡಾ.ಪುಷ್ಪಾ ಅಮರ್ ನಾಥ್ ದೂರಿದರು.

ಶನಿವಾರ ಪಟ್ಟಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಯೋಜನೆ ಸಾಧಕ ಬಾಧಕಗಳ ಕುರಿತು ಜನರ ಅಭಿಪ್ರಾಯಪಡೆದುಕೊಂಡರು. ಎಂಟು ಜಿಲ್ಲೆಗಳಲ್ಲಿ ಈಗಾಗಲೇ ಭೇಟಿ ನೀಡಿರುವುದಾಗಿ ಅವರು ತಿಳಿಸಿದರು.

‘ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ಜೀವನ ನಡೆಸುತ್ತಿದ್ದ ಮಹಿಳೆಯರು ಇಂದು ಸಮಾಜದ ಮುಖ್ಯವಾಹಿನಿಗೆ ಬರಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರಮುಖ ಕಾರಣ. ಯೋಜನೆಗಳ ಬಗ್ಗೆ ರಾಜ್ಯದಲ್ಲಿ ವ್ಯಂಗ್ಯವಾಡುತ್ತಿದ್ದವರೇ ಇಂದು ನಡೆಯುತ್ತಿರುವ ಚುನಾವಣೆಗಳಲ್ಲಿ ನಮ್ಮ ಯೋಜನೆಗಳನ್ನು ಕಾಪಿ ಮಾಡಿ ಘೊಷಣೆ ಮಾಡಿರುವುದು, ಯೋಜನೆಯ ಎಷ್ಟು ಯಶಸ್ಸುಗಳಿಸಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ’ ಎಂದರು.

ADVERTISEMENT

 ‘ಸರ್ಕಾರದ ಸಮರ್ಪಕ ಆಡಳಿತದಿಂದಾಗಿ ಇಂದು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಭಾಗ್ಯಲಕ್ಷ್ಮೀ ಯೋಜನೆ ಹಣವನ್ನು ತಮ್ಮ ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಕೆಲವಡೆ ಔಷಧಿಗೆ, ಅಂಗಡಿ ತೆರೆಯಲು, ಹಸು ಕೊಳ್ಳಲು ಸೇರಿದಂತೆ ಹಲವು ಮೂಲಗಳಲ್ಲಿ ಹಣ ತೊಡಗಿಸಿಕೊಳ್ಳುವ ಮೂಲಕ ಯೋಜನೆ ಸಾರ್ಥಕಪಡಿಸಿದ್ದಾರೆ. ಇಂದು ರಾಜ್ಯದ ಪ್ರತಿಯೊಂದು ಮನೆ ಮನೆ ಅಭಿವೃದ್ದಿ ಆಗುತ್ತಿದೆ’ಎಂದರು.

  ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ, ವಿಶ್ರಾಂತಿ ಕೊಠಡಿ, ಶೌಚಾಲಯ ಪರಿಶೀಲಿಸಿದ ಅವರು ಶುಚಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ನಂತರ ಬಸ್ ನಿಲ್ದಾಣ ಹಾಗೂ ಬಸ್‌‌‌ಗಳಲ್ಲಿ ಮಹಿಳೆಯರೊಂದಿಗೆ ಮಾತನಾಡಿ ಅವರ ಅಭಿಪ್ರಾಯ ಪಡೆದುಕೊಂಡರು.

ಈ ಸಂದರ್ಭ ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಂತರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಸಮಿತಿ ಸದಸ್ಯರು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಜಿಲ್ಲಾ ಘಟಕದ ವ್ಯವಸ್ಥಾಪಕ ಮೆಹಬೂಬ್ ಆಲಿ, ಸಂಚಾರಿ ನಿಯಂತ್ರಕ ಜಾನ್ ದಾಸ್, ಸಿಬ್ಬಂದಿ, ಗ್ಯಾರಂಟಿ ಯೋಜನೆಯ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.