ADVERTISEMENT

ಶಾಂತವಾದ ಕೀರೆಹೊಳೆ: ಮುಂದುವರಿದ ಲಕ್ಷ್ಮಣತೀರ್ಥ ಪ್ರವಾಹ

ಗೋಣಿಕೊಪ್ಪಲು ಭಾಗದಲ್ಲಿ ತುಸು ನಿಯಂತ್ರಣಕ್ಕೆ ಬಂದ ಮಳೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:16 IST
Last Updated 19 ಜುಲೈ 2024, 16:16 IST
ಗೋಣಿಕೊಪ್ಪಲಿನ ಕೀರೆಹೊಳೆ ಶಾಂತವಾಗಿ ಹರಿಯುತ್ತಿರುವುದು.
ಗೋಣಿಕೊಪ್ಪಲಿನ ಕೀರೆಹೊಳೆ ಶಾಂತವಾಗಿ ಹರಿಯುತ್ತಿರುವುದು.   

ಗೋಣಿಕೊಪ್ಪಲು: ಮಳೆಯ ರಭಸಕ್ಕೆ ಗುರುವಾರ ತೀವ್ರ ಸ್ವರೂಪ ತಾಳಿದ್ದ ಗೋಣಿಕೊಪ್ಪಲಿನ ಕೀರೆಹೊಳೆ ಶುಕ್ರವಾರ ಶಾಂತವಾಗಿ ಹರಿಯಿತು.

ಪಟ್ಟಣದ ಸುತ್ತಮುತ್ತ ಬೆಳಗಿನಂದಲೂ ಸಾಧಾರಣ ಮಳೆ ಸುರಿದರೂ, ಕೀರೆಹೊಳೆ ತನ್ನ ಮೂಲ ಸ್ಥಾನಕ್ಕೆ ಮರಳಿ ನದಿ ದಡದ ಜನತೆಗೆ ತುಸು ನೆಮ್ಮದಿ ಮೂಡಿಸಿತು.

ನದಿ ಪ್ರವಾಹದಿಂದ ಪಟ್ಟಣದ ವಿವಿಧ ಬಡಾವಣೆಗೆ ನುಗ್ಗಿದ್ದ ನೀರು ಇಂದು ಕಡಿಮೆಯಾಗಿತ್ತು. ಕೆಲವು ಬಡಾವಣೆಗಳ ರಸ್ತೆಯ ಹಳ್ಳಗಳಲ್ಲಿ ನೀರು ನಿಂತಿದ್ದನ್ನು ಬಿಟ್ಟರೆ ಪ್ರವಾಹವದ ನೀರು ಕಾಣಿಸಲಿಲ್ಲ. ಗುರುವಾರ ಉಕ್ಕಿ ಹರಿದ ನದಿ ಪ್ರವಾಹದ ನೀರಿನ ಕೆಸರು ಮಾತ್ರ ಅಲ್ಲಲ್ಲೆ ಕಾಣಿಸಿಕೊಂಡಿತು.

ADVERTISEMENT

ಮತ್ತೊಂದು ಕಡೆ ಲಕ್ಷ್ಮಣತೀರ್ಥ ನದಿ ಪ್ರವಾಹ ಗುರುವಾದಂತೆಯೇ ಮುಂದುವರಿಯಿತು. ನದಿ ಉಗಮಸ್ಥಾನ ಬ್ರಹ್ಮಗಿರಿ ತಪ್ಪಲಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ನದಿ ನೀರಿನ ಮಟ್ಟದಲ್ಲಿ ವ್ಯತ್ಯಾಸವೇನೂ ಕಂಡು ಬರುತ್ತಿಲ್ಲ. ಆದರೆ, ಶ್ರೀಮಂಗಲ ಬಳಿಯ ನಾಲಕ್ಕೇರಿ ಸೇತುವೆ ಮೇಲೆ ಹರಿಯುತ್ತಿದ್ದ ನದಿ ಪ್ರವಾಹದ ನೀರಿನ ಪ್ರಮಾಣ ತುಸು ಕಡಿಮೆಯಾಗಿದೆ.

ಬಲ್ಯಮಂಡೂರು, ಹರಿಹರ, ಕಾನೂರು, ಕೊಟ್ಟಗೇರಿ, ಬಾಳೆಲೆ, ನಿಟ್ಟೂರು, ಜಾಗಲೆ ಮಲ್ಲೂರು ನಡುವಿನ ಗದ್ದೆಗಳಲ್ಲಿ ನದಿ ನೀರಿನ ಪ್ರವಾಹ ಹಾಗೇಯೆ ಮುಂದುವರಿದಿದೆ. ಕೊಟ್ಟಗೇರಿ ಬಾಳೆಲೆ ಭಾಗದ ಗದ್ದೆಗಳು ಸಾಗರದಂತೆ ಕಂಡು ಬರುತ್ತಿವೆ.

ಕುಂದ, ಬಿ.ಶೆಟ್ಟಿಗೇರಿ, ಬಿರುನಾಣಿ, ಬೀರುಗ, ಭಾಗದಲ್ಲಿ ರಭಸದ ಮಳೆ ಮುಂದುವರಿದಿದ್ದು, ಈ ಭಾಗದ ಕಕ್ಕಟ್ಟುಹೊಳೆ, ಕೆಕೆಆರ್, ಬರಪೊಳೆಗಳು ಉಕ್ಕಿ ಹರಿಯುತ್ತಿವೆ. ಹಳ್ಳಕೊಳ್ಳಗಳು ಮೈದುಂಬಿವೆ. ಕೃಷಿ ಗದ್ದೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಕೃಷಿ ಭತ್ತದ ನಾಟಿ ಕೆಲಸಕ್ಕೆ ವಿರಾಮ ದೊರಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.