ADVERTISEMENT

ಮಳೆ-ಮೋಡ ಆತಂಕ: ಕಾಫಿ, ಭತ್ತದ ಕೊಯ್ಲಿಗೆ ಮಳೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 14:14 IST
Last Updated 11 ಡಿಸೆಂಬರ್ 2023, 14:14 IST
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ತೋಟವೊಂದರಲ್ಲಿ ರೊಬಸ್ಟಾ ಕಾಫಿ ಹಣ್ಣಾಗಿರುವುದು.
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ತೋಟವೊಂದರಲ್ಲಿ ರೊಬಸ್ಟಾ ಕಾಫಿ ಹಣ್ಣಾಗಿರುವುದು.   

ನಾಪೋಕ್ಲು: ಹೋಬಳಿ ವ್ಯಾಪ್ತಿಯ ವಿವಿಧಡೆ ಮಳೆಯಾಗುತ್ತಿರುವುದು ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.

  ಹಲವೆಡೆ ಭಾನುವಾರ ರಾತ್ರಿ ತುಂತುರು ಮಳೆಯಾಗಿದೆ. ಸಮೀಪದ ಕಕ್ಕಬ್ಬೆ, ಕಡಂಗ ವ್ಯಾಪ್ತಿಯಲ್ಲಿ ಗುಡುಗು ಸಹಿತ ಮಳೆಯಾಗಿದೆ. ಇದರಿಂದ ಕಾಫಿ ಹಾಗೂ ಭತ್ತದ ಬೆಳೆಗಾರರು ಆತಂಕಗೊಂಡಿದ್ದಾರೆ.

ಗ್ರಾಮೀಣ ಪ್ರದೇಶದ ಹಲವೆಡೆ ಕಾಫಿ ಕೊಯ್ಲು ಆರಂಭವಾಗಿದ್ದು ಮಳೆಯಿಂದಾಗಿ ಕಾಫಿಗೆ ತೊಂದರೆಯಾಗುವ ಸಾಧ್ಯತೆ ಇದೆ.  ವಿವಿಧಡೆ ಕಾಫಿ ಬೆಳೆ ಕೊಯ್ಲು ಮಾಡಿ ಕಣದಲ್ಲಿ ಹರಡಲಾಗಿತ್ತು. ಇದೀಗ ಕಾಣಿಸಿಕೊಂಡಿರುವ ಮಳೆ ಹಾಗೂ ಮೋಡದ ವಾತಾವರಣ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ವಾರಗಟ್ಟಲೆ ಬಿಸಿಲಿನ ತಾಪವೂ ಇಲ್ಲದೆ ಕಾಫಿ ಒಣಗಿಸುವುದು ಕಷ್ಟಕರ.

ADVERTISEMENT

ಭತ್ತದ ಕೊಯ್ಲಿನ ಅವಧಿ ಇದಾಗಿದ್ದು ಮಳೆ- ಮೋಡದ ವಾತಾವರಣದಿಂದ ಭತ್ತದ ಬೆಳೆಗಾರರು ಚಿಂತಿತರಾಗಿದ್ದಾರೆ. ಕೆಲವೆಡೆ ಭತ್ತ ಕೊಯ್ಲು ಮಾಡಲಾಗಿದೆ. ಮಳೆಯಿಂದಾಗಿ ಭತ್ತದ ಪೈರುಗಳು ನೆನೆದಿವೆ.

ಸಮೀಪದ ನೆಲಜಿ, ಬಲ್ಲಮಾವಟಿ, ಪುಲಿಕೋಟು ಗ್ರಾಮಗಳಲ್ಲಿ ಕೊಯ್ಲು ಮಾಡಲಾಗಿದ್ದು ಈ ಭಾಗಗಳನ್ನು ಮಳೆ ಸುರಿದರೆ ಬೆಳೆ ನಷ್ಟವಾಗುವ ಆತಂಕ ಎದುರಾಗಿದೆ. ಭತ್ತದ ಪೈರುಗಳು ಹಣ್ಣಾಗಿದ್ದು ಇದೀಗ ಕೊಯ್ಲು ಮಾಡಬೇಕಾಗಿತ್ತು. ಸೋಮವಾರ ಕಾರ್ಮಿಕರನ್ನು ಜೊತೆಗೂಡಿಸಿ ಆಗಿತ್ತು, ಭಾನುವಾರ ರಾತ್ರಿ ಸುರಿದ ಮಳೆ ಕೊಯ್ಲನ್ನು ಮುಂದೂಡುವಂತೆ ಮಾಡಿದೆ ಎಂದು ಭೇತು ಗ್ರಾಮದ ಮಕ್ಕಿ ದಿವಾಕರ ಹೇಳಿದರು.

ಭತ್ತ, ಕಾಫಿ ಕೊಯ್ಲಿನ ಅವಧಿಯಲ್ಲಿ ಮಳೆ ಸಮಸ್ಯೆ ತಂದೊಡ್ಡುತ್ತಿದೆ. ಒಂದು ಬಿರುಸಿನ ಮಳೆ ಸುರಿದರೆ ಕಾಫಿ ತೋಟಗಳಿಗೆ ಅನುಕೂಲ. ಆದರೆ, ಇದೀಗ ನಿರಂತರವಾಗಿ ಮಳೆ ಆಗುತ್ತಿದೆ. ಮೋಡದ ವಾತಾವರಣವೂ ಕೃಷಿ ಕೆಲಸಕ್ಕೆ ಅಡ್ಡಿಯಾಗಿದೆ ಎಂದು ನೆಲಜಿ ಗ್ರಾಮದ ಕಾಫಿ ಬೆಳೆಗಾರ ಕಾಳಪ್ಪ ಹೇಳಿದರು.

ರೋಬಸ್ಟಾ ಕಾಫಿ ಹಲವೆಡೆ ಹಣ್ಣಾಗಿದೆ. ಮಳೆಯಿಂದಾಗಿ ಹಣ್ಣಾದ ಕಾಫಿಗಳು ಉದುರುತ್ತಿವೆ. ಕಾಫಿನ ಕೊಯ್ಲಿನ ಜೊತೆಗೆ ಉದುರಿದ ಕಾಫಿ ಬೀಜಗಳನ್ನು ಹೆಕ್ಕುವುದು ಕಷ್ಟಕರವಾದ ಕೆಲಸ ಎಂದರು.

ಹಲವರ ಕಣಗಳಲ್ಲಿ ಕೊಯ್ಲು ಮಾಡಿದ ಕಾಫಿಯನ್ನು ಒಣಗಲು ಹಾಕಿದ್ದು ಮಳೆ ಮೋಡದಿಂದಾಗಿ ಒಣಗದೆ ಹಾಗೆ ಉಳಿದಿದೆ. ಬಿಸಿಲಿನ ಕೊರತೆಯಿಂದ ಕಾಫಿ ಕೊಯ್ಲು ಮಾಡುವುದು ಸಮಸ್ಯೆಯಾಗಿ ಕಾಡುತ್ತಿದೆ. ಒಟ್ಟಿನಲ್ಲಿ ಅಕಾಲಿಕ ಮಳೆ ಬೆಳೆಗಾರರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.

ಮಳೆಯಿಂದಾಗಿ ಕಾಫಿ ಹಣ್ಣುಗಳು ಉದುರುತ್ತಿವೆ.
ನಾಪೋಕ್ಲು ಸಮೀಪದ ಬಲ್ಲಮಾವಟಿ  ಗ್ರಾಮದಲ್ಲಿ ರೈತರೊಬ್ಬರು ಭತ್ತದ ಬೆಳೆ ಕೊಯ್ಲು ಮಾಡಿ ರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.