ADVERTISEMENT

ಕೊಡಗು | ಮುಂಗಾರು ಪ್ರವೇಶ ಲಕ್ಷಣ,ಗಾಳಿ ಸಹಿತ ಧಾರಾಕಾರ ಮಳೆ, ಅಲ್ಲಲ್ಲಿ ಉರುಳಿದ ಮರ

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 14:27 IST
Last Updated 12 ಜೂನ್ 2019, 14:27 IST
ಮಡಿಕೇರಿಯಲ್ಲಿ ಬುಧವಾರ ಸುರಿದ ಮಳೆಗೆ ರಸ್ತೆಯಲ್ಲಿ ನಿಂತಿದ್ದ ನೀರನ್ನು ಚಿಮ್ಮಿಸುತ್ತಾ ಆಟೊ ಸಾಗಿದ್ದು ಹೀಗೆ 
ಮಡಿಕೇರಿಯಲ್ಲಿ ಬುಧವಾರ ಸುರಿದ ಮಳೆಗೆ ರಸ್ತೆಯಲ್ಲಿ ನಿಂತಿದ್ದ ನೀರನ್ನು ಚಿಮ್ಮಿಸುತ್ತಾ ಆಟೊ ಸಾಗಿದ್ದು ಹೀಗೆ    

ವಿರಾಜಪೇಟೆ: ಕೊಡಗಿನ ವಿವಿಧೆಡೆ ಬುಧವಾರ ಬಿಡುವು ಕೊಟ್ಟು ಧಾರಾಕಾರ ಮಳೆ ಸುರಿಯಿತು. ದಟ್ಟವಾದ ಮೋಡ ಕವಿದ ವಾತಾವರಣವಿದ್ದು ಜಿಲ್ಲೆಗೆ ಮುಂಗಾರು ಪ್ರವೇಶಿಸಿದ ಲಕ್ಷಣ ಕಂಡುಬಂದಿದೆ.

ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಗೆ ಅಲ್ಲಲ್ಲಿ ಮರಗಳು ಉರುಳಿ ಬಿದ್ದು ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್‌ ಪೂರೈಕೆ ಸ್ಥಗಿತವಾಗಿದೆ. ಮಡಿಕೇರಿ, ಗೋಣಿಕೊಪ್ಪಲು, ಬಿರುನಾಣಿ, ಪೊನ್ನಂಪೇಟೆ, ಭಾಗಮಂಡಲ, ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿದೆ.

ಗಾಳಿಗೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲದ ಅಂಗನವಾಡಿ ಕೇಂದ್ರದ ಮೇಲೆ ಬೃಹತ್‌ ಮರ ಬಿದ್ದು ಚಾವಣಿ ಕುಸಿದಿದೆ. ಮುಂಜಾನೆ ಮರಬಿದ್ದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ. ತಿತಿಮತಿ ನಿವಾಸಿ ಸುಕುಮಾರ್‌ ಅವರ ಮನೆಯ ಮೇಲೂ ಗಾಳಿಗೆ ಮರ ಬಿದ್ದು ಜಖಂಗೊಂಡಿದೆ. ಈ ಮನೆಯಲ್ಲೂ ಯಾರೂ ಇರಲಿಲ್ಲ.

ADVERTISEMENT

ಪೊನ್ನಪ್ಪಸಂತೆ – ಕೋಣನಕಟ್ಟೆ ಮಾರ್ಗದಲ್ಲಿ ಮರ ಬಿದ್ದು ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮರ ತೆರೆವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಲಾಯಿತು.

ಕಳೆದ 24 ಗಂಟೆಯ ಅವಧಿಯಲ್ಲಿ ವಿರಾಜಪೇಟೆಯಲ್ಲಿ 55 ಮಿ.ಮೀ, ಅಮ್ಮತ್ತಿ 72, ಭಾಗಮಂಡಲ 33, ಹುದಿಕೇರಿ 24 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.