ಮಡಿಕೇರಿ:ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ಮಳೆ ನಿಯಂತ್ರಣಕ್ಕೆ ಬಂದಿದೆ. ಆದರೂ, ಹಲವೆಡೆ ಹಾನಿ ಮುಂದುವರಿದಿದೆ. ಗುರುವಾರ ಸುರಿದ ಮಳೆಯಿಂದ ಇನ್ನೂ ಜಿಲ್ಲೆಯ ನದಿ, ತೊರೆಗಳು ತುಂಬಿ ಹರಿಯುತ್ತಿವೆ.
ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ಜೂನ್ 28ರಂದು ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್‌ರಾಜಾ ಅವರು ತಿಳಿಸಿದ್ದಾರೆ.
ಪ್ರವಾಹಪೀಡಿತ ನಾಪೋಕ್ಲು ಹೋಬಳಿಯ ಕೆಲವೆಡೆ ರಸ್ತೆಗಳಲ್ಲಿ ನೀರು ಕಡಿಮೆಯಾಗಿದೆ. ಇನ್ನೂ ಕೆಲವೆಡೆ ನೀರು ಹರಿಯುತ್ತಿದೆ. ಮಳೆ ಇಳಿಮುಖವಾಗಿರುವುದರಿಂದ ಶನಿವಾರ ಸಹಜ ಸ್ಥಿತಿಗೆ ಬರುವ ನಿರೀಕ್ಷೆ ಇದೆ. ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಬಾಚಳ್ಳಿಯ ಕುಂದಳ್ಳಿ - ಪುಷ್ಪಗಿರಿ ಸಂಪರ್ಕಿಸುವ ರಸ್ತೆಯ ಮೇಲೆ ಮಣ್ಣು ಕುಸಿದು, ವಿದ್ಯುತ್ ಕಂಬಗಳು ಮುರಿದಿವೆ.
ಕುಶಾಲನಗರ ತಾಲ್ಲೂಕು ನೆಲ್ಯಹುದಿಕೇರಿ ಗ್ರಾಮದ ಕಾವೇರಿ ನದಿ ತೀರದ ಕುಂಬಾರಗುಂಡಿ ಹೊಳೆಕೆರೆಯಲ್ಲಿನ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಪೊನ್ನಂಪೇಟೆ ತಾಲ್ಲೂಕಿನ ಬಾಳೆಲೆ ಹೋಬಳಿಯ ಕೊಟ್ಟಗೇರಿ ಗ್ರಾಮದ ರಸ್ತೆಯು ಮಳೆಯಿಂದ ಜಲಾವೃತಗೊಂಡಿದ್ದು, ಜನ ಬದಲಿ ಸಂಪರ್ಕ ರಸ್ತೆ ಬಳಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.