ADVERTISEMENT

ಕೊಡಗು | ನಿಲ್ಲದ ಮಳೆ; ಸಿದ್ದಾಪುರ ವ್ಯಾಪ್ತಿಯಲ್ಲಿ ಪ್ರವಾಹದ ಭೀತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2023, 14:20 IST
Last Updated 26 ಜುಲೈ 2023, 14:20 IST
ಮುಳುಗಡೆಯಾಗಿರುವ ಕೊಂಡಂಗೇರಿ ರಸ್ತೆ
ಮುಳುಗಡೆಯಾಗಿರುವ ಕೊಂಡಂಗೇರಿ ರಸ್ತೆ   

ಸಿದ್ದಾಪುರ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಸಿದ್ದಾಪುರ ವ್ಯಾಪ್ತಿಯಲ್ಲಿ 15 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ.

ಸಿದ್ದಾಪುರ ವ್ಯಾಪ್ತಿಯ ಕರಡಿಗೋಡು ಹಾಗೂ ಗುಹ್ಯ ಗ್ರಾಮದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ತಗ್ಗು ಪ್ರದೇಶದ ಜನರು ಪರಿಹಾರ ಕೇಂದ್ರಗಳಿಗೆ ತೆರಳುವಂತೆ ತಹಶೀಲ್ದಾರ್‌ ರಾಮಚಂದ್ರ ಮನವಿ ಮಾಡಿದ್ದಾರೆ. ಕರಡಿಗೋಡು ಗ್ರಾಮಕ್ಕೆ ತೆರಳುವ ಸಂಪರ್ಕ ರಸ್ತೆ ಕಡಿತಗೊಂಡಿದ್ದು, ನದಿ ದಡದ ಕೆಲವು ಮನೆಗಳು ಮುಳುಗಡೆಯಾಗಿವೆ. ಚಿಕ್ಕನಳ್ಳಿಗೆ ತೆರಳುವ ಕಿರು ಸೇತುವೆ ಮುಳುಗಡೆಯಾಗಿದ್ದು, ಬುಧವಾರ ನೀರು ಕೊಂಚ ಇಳಿಕೆಯಾಗಿದೆ.

ಗುಹ್ಯ ಗ್ರಾಮದಲ್ಲೂ ಪ್ರವಾಹದ ಭೀತಿ ಎದುರಾಗಿದ್ದು, ಕಕ್ಕಟ್ಟುಕಾಡುವಿಗೆ ತೆರಳುವ ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ನೆಲ್ಯಹುದಿಕೇರಿ ವ್ಯಾಪ್ತಿಯಲ್ಲಿ ಇದೀಗ ಪ್ರವಾಹದ ಭೀತಿ ಎದುರಾಗಿದೆ. ನೆಲ್ಯಹುದಿಕೇರಿ ವ್ಯಾಪ್ತಿಯ ಬೆಟ್ಟದ ಕಾಡು ರಸ್ತೆ ಜಲಾವೃತಗೊಂಡಿದ್ದು ಸಂಪರ್ಕ ಕಡಿತಗೊಂಡಿದೆ.

ADVERTISEMENT

ನದಿ ನೀರಿನ ಏರಿಕೆಯು ಕುಂಬಾರಗುಂಡಿ ಬೆಟ್ಟದಕಾಡು ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಬೆಟ್ಟದಕಾಡುವಿನಲ್ಲಿ 5 ಮನೆಗಳು, ಕಾರೆಬಾಣೆ 2 ಮನೆಗಳು ಜಲಾವೃತಗೊಂಡಿದ್ದು, ಕುಟುಂಬದವರನ್ನು ಸ್ಥಳಾಂತರ ಮಾಡಲಾಗಿದೆ. ಸ್ಥಳಕ್ಕೆ ಕುಶಾಲನಗರ ವ್ಯಾಪ್ತಿಯ ಕಂದಾಯ ಅಧಿಕಾರಿಗಳು ಹಾಗೂ ಗ್ರಾಮ ಆಡಳಿತಾಧಿಕಾರಿ ಸಚಿನ್ ಭೇಟಿ ನೀಡಿ ಅಗತ್ಯ ಕ್ರಮ‌ ಕೈಗೊಂಡಿದ್ದಾರೆ.

ಪರಿಹಾರ ಕೇಂದ್ರ

ಪ್ರವಾಹ ಪೀಡಿತ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿ ತೀರದ ನಿವಾಸಿಗಳಿಗೆ ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಪರಿಹಾರ ಕೇಂದ್ರಗಳನ್ನು ತೆರಯಲಾಗಿದೆ ಎಂದು ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ರಾಮಚಂದ್ರ ಹಾಗೂ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ತಿಳಿಸಿದ್ದಾರೆ.

ಈಗಾಗಲೇ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುವ ಕುಟುಂಬಗಳಿಗೆ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ . ಅಲ್ಲದೆ ನದಿ ತೀರದ ನಿವಾಸಿಗಳಿಗೆ ಅನಾರೋಗ್ಯ ಕಂಡುಬಂದಲ್ಲಿ ಅವರ ಚಿಕಿತ್ಸೆಗಾಗಿ ವೈದ್ಯರುಗಳೊಂದಿಗೆ ಚರ್ಚಿಸಿ ಸಿಬ್ಬಂದಿಗಳನ್ನು ನೇಮಿಸಲಾಗುವುದು ಎಂದರು.

ಪ್ರವಾಹ ಪೀಡಿತ ಪ್ರದೇಶಗಳಾದ ಕರಡಿಗೋಡು, ಗುಹ್ಯ,ಕೊಂಡಂಗೇರಿ ಗ್ರಾಮಗಳಿಗೆ ಗ್ರಾಮ‌ ಆಡಳಿತಾಧಿಕಾರಿ ಓಮಪ್ಪ ಬಣಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುಹ್ಯ ಗ್ರಾಮದಲ್ಲಿ ಮನೆಯ ಅಂಗಳಕ್ಕೆ ಬಂದಿರುವ ನದಿ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.