ಬೇಸಿಗೆಯ ಬಿಸಿಲಿನಿಂದ ಬಾಡುತ್ತಿರುವ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ವ್ಯಾಪ್ತಿಯ ಕಾಫಿ ತೋಟಗಳಿಗೆ ಕೃತಕವಾಗಿ ನೀರನ್ನು ಹಾಯಿಸುತ್ತಿರುವ ದೃಶ್ಯ ಶನಿವಾರ ಕಂಡು ಬಂತು
ಶನಿವಾರಸಂತೆ: ಕಳೆದ ವಾರ ಏಕಾಏಕಿ ಅಲ್ಲಲ್ಲಿ ಸುರಿದ ಮಳೆಯಿಂದಾಗಿ ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳ ಕಾಫಿ ಬೆಳಗಾರರಲ್ಲಿ ಸಂತಸ ಮೂಡಿದೆ. ಕಾಫಿ ಹೂವಾಗಲು ಕೆಲವು ಗ್ರಾಮಗಳಿಗೆ ಸರಾಸರಿ ಮಳೆ ಬೀಳದೆ ಇರುವುದರಿಂದ ಕೆಲವು ಗ್ರಾಮಗಳ ಕಾಫಿ ಬೆಳೆಗಾರರಲ್ಲಿ ಆತಂಕ ಸೃಷ್ಟಿಯಾಗಿದೆ.
ಶನಿವಾರಸಂತೆ ಹೋಬಳಿಯ ಶುಂಠಿ ಕೂರಲಹಳ್ಳಿ, ಬಸವನಕೊಪ್ಪ, ಗೊಂದಳ್ಳಿ ನಂದಿಗುಂದ, ಹಿತ್ತಲ ಕೇರಿ, ಗೋಪಾಲಪುರ, ಈ ಭಾಗಗಳಿಗೆ ಮಳೆಯಾಗಿದೆ. ಈ ಗ್ರಾಮಗಳ ಸಮೀಪದಲ್ಲಿ ಇರುವ ಗ್ರಾಮಗಳಾದ ದೊಡ್ಡಮಳತ್ತೆ ಚಿಕ್ಕಾರ, ಕೂಗೂರು, ಹಿರಿಕರ, ಚೆನ್ನಾಪುರ ಮಾಲಂಬಿ, ಮುಳ್ಳೂರು ಭಾಗಗಳ ಗ್ರಾಮಗಳು ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳಿಗೆ ಉತ್ತಮ ಮಳೆಯಾಗಿಲ್ಲ. ಇದರಿಂದ ಮುಂದಿನ ಫಸಲಿಗೆ ಬಹುದೊಡ್ಡ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಕಾಫಿ ಬೆಳೆಗಾರರು ಆತಂಕದಲ್ಲಿದ್ದಾರೆ. ಇದರಿಂದ ಈ ಗ್ರಾಮದ ಕಾಫಿ ಬೆಳೆಗಾರರಲ್ಲಿ ಗೊಂದಲ ಉಂಟಾಗಿ, ಮುಂದಿನ ವರ್ಷದ ಕಾಫಿ ತೋಟದ ನಿರ್ವಹಣೆ ಹೇಗೆ ಎಂಬ ಬಗ್ಗೆ ಚಿಂತೆಗೀಡಾಗಿದ್ದಾರೆ.
ಈ ಭಾಗದ ರೈತರು ಪ್ರತಿನಿತ್ಯ ಯುಗಾದಿ ಹಬ್ಬದ ನಂತರ ಮಳೆಯ ನಿರೀಕ್ಷೆಯಲ್ಲಿ ಇರುತ್ತಾರೆ. ಆದರೆ, ಯುಗಾದಿ ಹಬ್ಬಕ್ಕೆ ಇನ್ನೂ ಎರಡು ವಾರಗಳು ಇದ್ದಂತೆ ಏಕಾಏಕಿ ಒಂದು ದಿನ ಈ ರೀತಿ ಮಳೆ ಬಂದಿರುವುದು ರೈತರಲ್ಲಿಯೂ ಬೇಸರ ವ್ಯಕ್ತವಾಗಿದೆ. ಇನ್ನೂ ಎರಡು ಮೂರು ದಿನಗಳಲ್ಲಿ ಮಳೆಬಾರದ ಇದ್ದರೆ, ಕಾಫಿ ಬೆಳೆಗೆ ಈ ಮಳೆಯಿಂದ ಯಾವುದೇ ಪ್ರಯೋಜನವಾಗದಿರುವ ಸಾಧ್ಯತೆಗಳೇ ಅಧಿಕ ಇದೆ.
ಕಳೆದ ವರ್ಷ ಮಳೆ ಏರುಪೇರು ಆದ ಹಿನ್ನೆಲೆಯಲ್ಲಿ ಕೊಡ್ಲಿಪೇಟೆ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಕಾಫಿ ಫಸಲು ಬರಲಿಲ್ಲ. ಇದ್ದಂತಹ ಕಾಫಿ ಪಸಲಿಗೆ ಉತ್ತಮವಾದ ಬೆಲೆ ಸಿಕ್ಕಿದ್ದರಿಂದ ಈ ವರ್ಷ ಸಾಧಾರಣ ಆದಾಯವನ್ನು ಕಾಫಿ ಬೆಳೆಗಾರರು ಪಡೆದಿದ್ದಾರೆ.
ಮಳೆಯು ಒಂದು ಗ್ರಾಮಕ್ಕೆ ಬಿದ್ದಿದ್ದು ಮತ್ತೊಂದು ಗ್ರಾಮಕ್ಕೆ ಏಕೆ ಬೀಳುತ್ತಿಲ್ಲ ಎಂಬ ಬಗ್ಗೆ ಸಂಶೋಧನೆ ನಡೆಸಬೇಕಾಗಿದೆ. ವಾತಾವರಣದ ಈ ರೀತಿಯ ಬದಲಾವಣೆಯನ್ನು ಸರ್ಕಾರವು ಸೂಕ್ತ ರೀತಿಯಲ್ಲಿ ಸಂಶೋಧನೆ ನಡೆಸಿ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಕೆಲವು ರೈತರ ಅಭಿಪ್ರಾಯವಾಗಿದೆ.
ಕೆಲವು ರೈತರು ಕೊಳವೆಬಾವಿ ಮತ್ತು ಕೃಷಿ ಹೊಂಡದ ನೀರನ್ನು ಬಳಸಿ ತುಂತುರು ನೀರಾವರಿಯ ಮೂಲಕ ಕೃತಕವಾಗಿ ಕಾಫಿ ಹೂವನ್ನು ಮಾಡಿ ಫಸಲನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ನೀರಾವರಿಯ ಸಲಕರಣೆ ಮಾರಾಟ ಮಾಡುವ ವ್ಯಾಪಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ 3 ದಿನಗಳಲ್ಲಿ ಅತಿ ಹೆಚ್ಚು ನೀರಾವರಿಯ ಉಪಕರಣಗಳು ಮಾರಾಟವಾಗಿವೆ. ರೈತರು ಕೇಳುವಂತಹ ಕೆಲವೊಂದು ಉಪಕರಣಗಳು ತಕ್ಷಣದಲ್ಲೇ ಒದಗಿಸಲು ಸಾಧ್ಯವಾಗುತ್ತಿಲ್ಲ. ಸಮಸ್ಯೆ ಎದುರಾದಾಗ ಬೆಳಗಾರರು ಕೃಷಿ ನೀರಾವರಿಯ ಉಪಕರಣಗಳನ್ನು ಕೊಳ್ಳಲು ಬರುತ್ತಾರೆ. ಪೂರ್ವಭಾವಿಯಾಗಿ ಕಾಫಿ ಬೆಳಗೆ ಕಾಫಿ ಹೂ ಮಾಡಲು ವ್ಯವಸ್ಥೆ ಮಾಡಿಕೊಂಡರೆ ಮಳೆಯ ಏರುಪೇರು ನೋಡಿಕೊಂಡು ಸೂಕ್ತ ರೀತಿಯಲ್ಲಿ ಕಾಫಿ ಬೆಳೆಯನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳುತ್ತಾರೆ.
ಸೂಕ್ತ ರೀತಿಯಲ್ಲಿ ಮಳೆ ಬಾರದಿದ್ದಾಗ ಕೃತಕವಾಗಿ ತುಂತುರು ನೀರಾವರಿ ವ್ಯವಸ್ಥೆಯನ್ನು ಮಾಡಲು ಕಾಫಿ ಮಂಡಳಿಯೂ ಉತ್ತಮವಾದ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಇದರ ಸದುಪಯೋಗವನ್ನು ಕಾಫಿ ಬೆಳೆಗಾರರು ಮಾಡಿಕೊಳ್ಳಬೇಕಾಗಿದೆ. ಆದರೆ, ಕೆಲವು ರೈತರಿಗೆ ನೀಡಲು ಕೃಷಿ ಭೂಮಿಯ ದಾಖಲೆ ಇಲ್ಲದಿರುವುದರಿಂದ ಕೆಲವು ರೈತ ಫಲಾನುಭವಿಗಳಿಗೆ ಈ ಯೋಜನೆಗಳು ತಲುಪುತ್ತಿಲ್ಲ ಎನ್ನುತ್ತಾರೆ ಸ್ಥಳೀಯ ರೈತರು.
ಕೊಡ್ಲಿಪೇಟೆ ಹೋಬಳಿಯ ಖ್ಯಾತೆ ಗ್ರಾಮದ ಹೇಮಾವತಿ ಹಿನ್ನಿರಿನ ಪ್ರದೇಶಗಳಲ್ಲಿ ಹಿಂಗಾರು ಬೆಳೆಯಾಗಿ ಭತ್ತವನ್ನು ಬೆಳೆಯುತ್ತಿದ್ದಾರೆ. ಆದರೆ, ಈಗ ಮಳೆ ಇಲ್ಲದೇ ಇರುವುದರಿಂದ ಹಿನ್ನೀರು ಇಳಿಮುಖವಾಗಿದೆ. ಇರುವ ಭತ್ತದ ಬೆಳೆ ಉಳಿಸಿಕೊಳ್ಳಲು ಮಳೆಯ ಅಗತ್ಯ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.