
ಮಡಿಕೇರಿ: ಪ್ರಕೃತಿ ಪ್ರಿಯರ ನೆಚ್ಚಿನ ತಾಣ ರಾಜಾಸೀಟ್ ಉದ್ಯಾನ ಈಗ ಪುಷ್ಪೋದ್ಯಾನವಾಗಿ ಬದಲಾಗಿದೆ. ತೋಟಗಾರಿಕಾ ಇಲಾಖೆ ಈ ಪುಟ್ಟದಾದ ಉದ್ಯಾನದಲ್ಲಿ ₹ 33 ಲಕ್ಷ ವೆಚ್ಚದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ. ಬರೋಬರಿ 20 ಸಾವಿರ ಹೂಗಳು 8 ಸಾವಿರ ಕುಂಡಗಳು ಪ್ರವಾಸಿಗರ ಕಣ್ಣುಗಳಿಗೆ ರಸಗವಳವಾಗಿವೆ.
ಸೇವಂತಿಗೆ, ಗುಲಾಬಿ, ಚೆಂಡು, ತಾವರೆ, ಸಾಲ್ವಿಯ, ಜೀನಿಯಾ, ಡಯಾಂಥಸ್, ಇಂಪೇಷಿಯನ್ಸ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ ಸೇರಿದಂತೆ ಹಲವು ಹೂಗಳು ಏಕಕಾಲಕ್ಕೆ ಅರಳಿದ್ದು, ಪುಷ್ಪಲೋಕವನ್ನೇ ಅನಾವರಣಗೊಳಿಸಿದೆ.
ವಿವಿಧ ಬಣ್ಣಗಳ ಗುಲಾಬಿ, ಸೇವಂತಿಗೆ ಹಾಗೂ ಇತರೆ ಜಾತಿ ಹೂಗಳಲ್ಲೇ ಭಗಂಡೇಶ್ವರ ದೇಗುಲ ಅರಳಿ ನಿಂತಿದೆ. 33 ಅಡಿ ಎತ್ತರ, 18 ಅಡಿ ಉದ್ದ, 23 ಅಡಿ ಅಗಲದ ಈ ಭವ್ಯ ದೇಗುಲ ಸಂಪೂರ್ಣ ಹೂವಿನಿಂದ ಆವೃತವಾಗಿವೆ. ಗರ್ಭಗುಡಿಯ ಶಿವಲಿಂಗವೂ ಪುಷ್ಪಲಿಂಗವಾಗಿದ್ದು, ಫಲಪುಷ್ಪ ಪ್ರದರ್ಶನದ ಪ್ರಧಾನ ಆಕರ್ಷಣೆ ಎನಿಸಿದೆ.
ಹೂವಿನಿಂದಲೇ ಮಾಡಿದ ವಿವಿಧ ಬಗೆಯ ಸಂಗೀತ ಉಪಕರಣಗಳು, ಅವುಗಳಿಗೆ ಹಿನ್ನೆಲೆಯಾಗಿ ಧ್ವನಿವರ್ಧಕದಲ್ಲಿ ಸುಶ್ರಾವ್ಯವಾಗಿ ಕೇಳಿ ಬರುತ್ತಿದ್ದ ಸಂಗೀತವು ‘ಎಲ್ಲೆಲ್ಲು ಸಂಗೀತವೇ ಎಲ್ಲೆಲ್ಲು ಸೌಂದರ್ಯವೇ ಕೇಳುವ ಕಿವಿಯಿರಲು, ನೋಡುವ ಕಣ್ಣಿರಲು’ ಎಂಬ ಮಲಯ ಮಾರುತ ಚಿತ್ರದ ಹಾಡು ಫಲಪುಷ್ಪ ಪ್ರದರ್ಶನದಲ್ಲಿ ಪದೆ ಪದೆ ನೆನಪಾಗುವಂತೆ ಮಾಡುತ್ತಿದೆ.
ಗಣರಾಜ್ಯೋತ್ಸವದ ಅಂಗವಾಗಿ 8 ಅಡಿ ಎತ್ತರದ ಅಮರ್ ಜವಾನ್ ಕಲಾಕೃತಿ ಸಹ ಹೂವಿನಿಂದಲೇ ಮಾಡಿದ್ದು, ಇದನ್ನು ನೋಡಿದ ಯಾರಿಗೇ ಆದರೂ ಸೆಲ್ಯೂಟ್ ಹಾಕಬೇಕು ಎನಿಸುವಂತಿದೆ. ಬಹುತೇಕ ಮಂದಿ ಸೆಲ್ಯೂಟ್ ಹಾಕಿ ದೇಶಪ್ರೇಮ ಮೆರೆದ ದೃಶ್ಯಗಳು ಕಂಡು ಬಂದವು.
ಇನ್ನು, ಮಕ್ಕಳನ್ನು ರಂಜಿಸಲೆಂದೇ ಇರುವ ಸ್ಪೈಡರ್ ಮ್ಯಾನ್, ಮಿಕ್ಕಿಮೌಸ್, ಡೊರೇಮ್ಯಾನ್ ಕಲಾಕೃತಿಗಳು ಸಹ ಹೂಗಳಿಂದಲೇ ಮಾಡಿದ್ದು, ಮಕ್ಕಳನ್ನು ಬರಸೆಳೆಯುತ್ತಿವೆ.
ಜೋಡಿ ಮೀನಿನ ಕಲಾಕೃತಿಗಳು, ಹಾರುವ ಹಕ್ಕಿ, ಚಿಟ್ಟೆಗಳ ಆಕೃತಿಗಳು ಸೇರಿದಂತೆ ಹಲವು ಬಗೆಯ ಕಲಾಕೃತಿಗಳು ನೋಡುಗರನ್ನು ರಂಜಿಸುತ್ತಿವೆ. ಕನ್ನಡ ವರ್ಣಮಾಲೆಯ ಅಕ್ಷರಗಳೂ ಹೂಗಳಿಂದ ರಚಿತವಾಗಿದ್ದು, ಕನ್ನಡತನದ ಕಂಪು ಸಹ ಹರಡಿದೆ.
ಪುಷ್ಪಲೋಕವನ್ನು ಕಣ್ತುಂಬಿಕೊಂಡು ಪಕ್ಕದ ಗಾಂಧಿ ಮೈದಾನಕ್ಕೆ ಬಂದರೆ ಅಲ್ಲಿ 60 ವಿವಿಧ ಮಳಿಗೆಗಳು ವೈವಿಧ್ಯಮಯವಾದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿವೆ. ತೋಟಗಾರಿಕೆ, ಕಾಫಿ ಮಂಡಳಿ, ಕೃಷಿ, ಪಶುಪಾಲನೆ, ಮೀನುಗಾರಿಕೆ, ಹಾಪ್‌ಕಾಮ್ಸ್, ಕೈಗಾರಿಕೆ ವಾಣಿಜ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳು ಇವೆ. ಸಿಲೋನ್ ಅಡಿಕೆ, ವಿವಿಧ ಬಗೆಯ ಗೆಡ್ಡೆ ಗೆಣಸುಗಳು, ಅಳಿವಿನಂಚಿಲ್ಲಿರುವ ಅಪರೂಪದ ಫಲಗಳು ಅಲ್ಲಿವೆ.
ನಾವು ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದೇವೆ. ಈ ಫಲಪುಷ್ಪ ಪ್ರದರ್ಶನ ನಮಗೊಂದು ವಿಶಿಷ್ಟ ಅನುಭವ ನೀಡಿದೆ.ರಾಜೇಶ್ ಪ್ರವಾಸಿಗ
ಈ ಫಲಪುಷ್ಪ ಪ್ರದರ್ಶನವು ಶ್ಲಾಘನೆಗೆ ಯೋಗ್ಯವಾಗಿದೆ. ಈ ಪ್ರದರ್ಶನ ನಿಜಕ್ಕೂ ಚೆನ್ನಾಗಿದೆಪಲ್ಲವಿ ಪ್ರವಾಸಿಗರು ಮುಂಬೈ
ಹೈಟೆಕ್ ಮಾದರಿಯ ಕ್ಯಾಂಟೀನ್ ನಿರ್ಮಾಣ; ಶಾಸಕ ಭರವಸೆ ತೋಟಗಾರಿಕೆ ಇಲಾಖೆಯು ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯಿತಿ ಹಾಗೂ ಇತರೆ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಪ್ರಯುಕ್ತ ಮಡಿಕೇರಿಯ ರಾಜಸೀಟ್ ಉದ್ಯಾನದಲ್ಲಿ 3 ದಿನಗಳ ಕಾಲ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಶಾಸಕ ಡಾ.ಮಂತರ್‌ಗೌಡ ಶನಿವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ‘ರಾಜಸೀಟು ಉದ್ಯಾನದ ಒಳಭಾಗದಲ್ಲಿ ಹೈಟೆಕ್ ಮಾದರಿಯ ಕ್ಯಾಂಟೀನ್ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.
‘ರಾಜಸೀಟು ಉದ್ಯಾನದಲ್ಲಿ ಈ ಬಾರಿ ಪ್ರಸಿದ್ಧ ಶ್ರೀ ಭಗಂಡೇಶ್ವರ ದೇವಾಲಯ ಮಾದರಿಯಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಿರುವುದು ಆಕರ್ಷಣಿಯವಾಗಿದೆ. ಹಾಗೆಯೇ ಮಕ್ಕಳಿಗಾಗಿ ಕನ್ನಡ ಅಕ್ಷರ ಮಾಲೆಯ ಪುಷ್ಪ ಪ್ರದರ್ಶನ ಏರ್ಪಡಿಸಿರುವುದು ವಿಶೇಷವಾಗಿದೆ. ಉದ್ಯಾನದಲ್ಲಿ ವರ್ಷಕ್ಕೊಮ್ಮೆ ಬದಲಾಗಿ ವಿಶೇಷ ಸಂದರ್ಭಗಳಲ್ಲಿಯೂ ಫಲಪುಷ್ಪ ಪ್ರದರ್ಶನ ಏರ್ಪಡಿಸಬೇಕು’ ಎಂದು ಸಲಹೆ ನೀಡಿದರು. ಉದ್ಯಾನವನ್ನು ಮತ್ತಷ್ಟು ಆಕರ್ಷಣೀಯ ಮಾಡುವಲ್ಲಿ ಇನ್ನಷ್ಟು ಹಸಿರುಮಯವನ್ನಾಗಿ ಮಾಡಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸುವಂತೆಯೂ ಅವರು ಸೂಚಿಸಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ನಗರಸಭೆ ಅಧ್ಯಕ್ಷೆ ಪಿ.ಕಲಾವತಿ ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಹಾಪ್‌ಕಾಮ್ಸ್ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚಂಗಪ್ಪ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಪಿ.ಪೊನ್ನಪ್ಪ ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಮುಖಂಡರಾದ ತೆನ್ನಿರ ಮೈನಾ ಅಂಬೆಕಲ್ಲು ನವೀನ್ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಲಿಂಗರಾಜ ದೊಡ್ಡಮನಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಶಶಿಧರ ಹಿರಿಯ ಸಹಾಯಕ ನಿರ್ದೇಶಕ ಪಣಿಂದ್ರ ಸಹಾಯಕ ನಿರ್ದೇಶಕ ಮುತ್ತಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.