ADVERTISEMENT

‘ರಕ್ಷಾ ಬಂಧನ’ ಸಂಬಂಧ ಗಟ್ಟಿಗೊಳಿಸುವ ಹಬ್ಬ: ಬ್ರಹ್ಮಕುಮಾರಿ ಧನಲಕ್ಷ್ಮಿ

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 6:15 IST
Last Updated 10 ಆಗಸ್ಟ್ 2025, 6:15 IST
ಮಡಿಕೇರಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ‘ಲೈಟ್ ಹೌಸ್‌’ನಲ್ಲಿ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿ ಅವರು ರಕ್ಷಾ ಬಂಧನ ಕಟ್ಟಿದರು
ಮಡಿಕೇರಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ‘ಲೈಟ್ ಹೌಸ್‌’ನಲ್ಲಿ ವಿವಿಧ ಸಂಘ, ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಗೆ ಶಾಖೆಯ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿ ಅವರು ರಕ್ಷಾ ಬಂಧನ ಕಟ್ಟಿದರು   

ಮಡಿಕೇರಿ: ಇಲ್ಲಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮಡಿಕೇರಿಯ ಶಾಖೆಯ ‘ಲೈಟ್ ಹೌಸ್’ ಸಭಾಂಗಣದಲ್ಲಿ ಶನಿವಾರ ನಡೆದ ‘ರಕ್ಷಾ ಬಂಧನ’ ಕಾರ್ಯಕ್ರಮದಲ್ಲಿ 250ಕ್ಕೂ ಅಧಿಕ ಮಂದಿ ಭಾಗಿಯಾದರು.

ಶುಕ್ರವಾರದಿಂದ ಶನಿವಾರ ಬೆಳಿಗ್ಗೆಯವರೆಗೂ ಮೌನವ್ರತದಲ್ಲಿದ್ದ ಶಾಖೆಯ ಜಿಲ್ಲಾ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿ ಅಕ್ಕ, ಎಲ್ಲರಿಗೂ ಶ್ರೀರಕ್ಷೆಯನ್ನು ಕಟ್ಟಿ, ತಿಲಕ ಹಾಗೂ ಶ್ರೀಗಂಧವನ್ನಿಟ್ಟು, ಪ್ರಸಾದ ವಿತರಿಸಿದರು. 

ರಕ್ಷಾ ಬಂಧನ ಸೋದರತ್ವ ಭಾವನೆಯ ಹಬ್ಬವಾಗಿದೆ. ರಕ್ಷಣೆಯ ಬಂಧನ ಪರಮಾತ್ಮನ ಜತೆಯಲ್ಲಿ. ಸೌಹರ್ದ ಸಂಬಂಧಗಳು ಮನುಷ್ಯರ ಜೊತೆಯಲ್ಲಿ. ಆ ಸಂಬಂಧ ಬಂಧನವಾಗಿರಬೇಕು ಎಂದು ಪ್ರತಿಪಾದಿಸಿದರು.

ADVERTISEMENT

ಶಾಖೆಯ ರಾಜಯೋಗ ಶಿಕ್ಷಕಿ ಬ್ರಹ್ಮಕುಮಾರಿ ಧನಲಕ್ಷ್ಮಿ ಮಾತನಾಡಿ, ‘ಪರಮಾತ್ಮ ಜ್ಯೋತಿ ಸ್ವರೂಪ. ಜ್ಯೋತಿ ಬೆಳಗಿಸುವ ಮೂಲಕ ನಮ್ಮ ಆತ್ಮಜ್ಯೋತಿಯನ್ನು ಬೆಳಗಿಸಿಕೊಳ್ಳಬೇಕು. ಪರಮಾತ್ಮನನ್ನು ಸ್ಮೃತಿ ಮಾಡುವ ಸ್ಥಾನ ಇದು. ಇಂದು ವಿಶ್ವದಾದ್ಯಂತ 150 ದೇಶಗಳಲ್ಲಿ ಇರುವ ಸುಮಾರು 10 ಸಾವಿರ ಶಾಖೆಗಳಲ್ಲಿ ರಕ್ಷಾ ಬಂಧನ ಆಚರಿಸಲಾಗಿದೆ’ ಎಂದು ಹೇಳಿದರು.

ವಿಶ್ವ ಭ್ರಾತೃತ್ವವನ್ನು ಮೂಡಿಸಲು ರಕ್ಷಾ ಬಂಧನ ಹಬ್ಬ ಸಹಕಾರಿ. ಸಹೋದರತ್ವದ ಭಾವವನ್ನು ಹರಡುವ ಮೂಲಕ ಮನುಷ್ಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಸುಂದರವಾದ ಮತ್ತು ಅತ್ಯಂತ ಮಹತ್ವದ ಹಬ್ಬ ‘ರಕ್ಷಾ ಬಂಧನ’ವಾಗಿದೆ ಎಂದು ಹಬ್ಬದ ಮಹತ್ವ ಕುರಿತು ಅವರು ಮಾತನಾಡಿದರು. 

ಭಾರತದ ಶ್ರೀಮಂತ ಸಂಸ್ಕೃತಿ ವಿಶ್ವದಾದ್ಯಂತ ಪಸರಿಸಿದೆ. ಇಲ್ಲಿನ ಸಂಸ್ಕೃತಿಯ ಭಾಗವಾಗಿರುವ ರಕ್ಷಾ ಬಂಧನ ಹಬ್ಬವು ಪರಸ್ಪರ ಪ್ರೀತಿ ವಿಶ್ವಾಸ, ಸೌಹಾರ್ದತೆಯ ಭಾವನೆಗಳನ್ನು ಮೂಡಿಸುವ ಮೂಲಕ, ವಿಶ್ವ ಭಾತೃತ್ವವನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

‘ಬಂಧನ’ ಎಂದರೆ  ಪರಮಾತ್ಮನೊಂದಿಗಿನ ಬಂಧನ ಮತ್ತು ಜನರೊಂದಿಗಿನ ಸೌಹಾರ್ದ ಸಂಬಂಧವೆಂದೇ ಅರ್ಥ. ರಕ್ಷಾ ಬಂಧನದ ಪವಿತ್ರವಾದ ಈ ದಿನದಂದು ಯಾರೊಂದಿಗಾದರು ಮುನಿಸಿಕೊಂಡಿದ್ದರೆ, ಅಂತವಹವರಿಗೂ ಶುಭಾಶಯಗಳನ್ನು ತಿಳಿಸಿ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರೊ.ರವಿಶಂಕರ್, ‘ಬ್ರಹ್ಮಕುಮಾರಿ ಸಂಸ್ಥೆ ಜಾತಿ, ಮತ, ಪಂಥಗಳ ಭೇದವಿಲ್ಲದೆ ರಕ್ಷಾ ಬಂಧನ ಕಾರ್ಯಕ್ರಮವನ್ನು ಎಲ್ಲರನ್ನು ಒಳಗೊಂಡಂತೆ ನಡೆಸುತ್ತಿದೆ. ‘ಒಬ್ಬ ದೇವರು ಒಂದು ಕುಟುಂಬ’ ಎನ್ನುವ ಧ್ಯೇಯ ವಾಕ್ಯ ಸಾಮರಸ್ಯದ ಸಮಾಜ ನಿಮಾಣಕ್ಕೆ ಅತ್ಯಂತ ಸಹಾಯಕಾರಿಯಾಗಿದೆ. ರಕ್ಷಾ ಬಂಧನ ಪ್ರೀತಿ ಮತ್ತು ಬಾಂಧವ್ಯದ ಸಂಕೇತ ಸಾರುವ ಹಬ್ಬವೇ ಆಗಿದೆ’ ಎಂದು ತಿಳಿಸಿದರು.

ಶ್ರೀ ಕೋದಂಡ ರಾಮೋತ್ಸವ ಸಮಿತಿ ಸಂಚಾಲಕ ಕೆ.ಎಂ.ಬಿ.ಗಣೇಶ್, ಸಂಸ್ಕೃತಿ ಸಿರಿ ಬಳಗ ಟ್ರಸ್ಟ್ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ, ಹಿರಿಯ ಕ್ರೀಡಾಪಟು ಡಾ.ಪುಪ್ಪಾ ಕುಟ್ಟಣ್ಣ, ಬ್ರಹ್ಮಕುಮಾರಿಯರಾದ ಬಿ.ಕೆ.ರಮಾದೇವಿ, ಬಿ.ಕೆ.ಹರಿಣಾಕ್ಷಿ, ಭಕ್ತರಾದ ಸುರೇಶ್ ಕಾರಂತ, ರೇವತಿ, ವಿಜಯಾ ರಾಜನ್, ರೂಪಾ, ಜಯಾ, ಲಲಿತಾ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕೊಡಗು ಪತ್ರಿಕಾಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೖದ್ದಿ ಸಮಿತಿ ಅಧ್ಯಕ್ಷ ಜಿ.ವಿ.ರವಿಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.