ಕುಶಾಲನಗರ: ಉತ್ತರ ಕೊಡಗಿನ ಪವಿತ್ರ ಕಾವೇರಿ ನದಿಯ ದಂಡೆಯಲ್ಲಿರುವ ರಾಂಪುರ ಕಣಿವೆ ಗ್ರಾಮದಲ್ಲಿ ಏ.6ರಂದು ಸೋಮವಾರ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮರಥೋತ್ಸವ ನಡೆಯಲಿದ್ದು, ದೇವಸ್ಥಾನ ಸಮಿತಿ ವತಿಯಿಂದ ಭರದ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಐತಿಹಾಸಿಕ ಹಿನ್ನೆಲೆಯುಳ್ಳ ಈ ದೇವಾಲಯದಲ್ಲಿ ಪ್ರತಿ ವರ್ಷವೂ ಯುಗಾದಿ ಹಬ್ಬ ಕಳೆದು 7 ದಿನಗಳಿಗೆ ಬ್ರಹ್ಮ ರಥೋತ್ಸವ ನಡೆಯುವುದು ಸಂಪ್ರದಾಯವಾಗಿದೆ. ರಥೋತ್ಸವವು ಅಂದು ಮಧ್ಯಾಹ್ನ 2 ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ ಜರುಗಲಿದ್ದು, ರಥೋತ್ಸವಕ್ಕೆ ಜಿಲ್ಲೆಯ ಜನರೂ ಸೇರಿದಂತೆ ನೆರೆಯ ಹಾಸನ ಮತ್ತು ಮೈಸೂರು ಜಿಲ್ಲೆ ಗಡಿಭಾಗದ ಗ್ರಾಮಗಳಿಂದಲೂ ಅಪಾರ ಭಕ್ತರು ಆಗಮಿಸುವ ನಿರೀಕ್ಷೆ ಇದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ಹೆಬ್ಬಾಲೆ ಬಸವೇಶ್ವರ ದೇವಸ್ಥಾನ ಸಮಿತಿಯವರು ಕಾಶಿಯಿಂದ ತೀರ್ಥವನ್ನು ತರಿಸಿ ಅದನ್ನು ಅಡ್ಡಪಲ್ಲಕ್ಕಿ ಮೂಲಕ ತಂದು ಕಣಿವೆ ರಾಮಲಿಂಗೇಶ್ವರನಿಗೆ ಪೂಜೆ, ಅಭಿಷೇಕ ಸಲ್ಲಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡುವ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಈ ವಾರ್ಷಿಕ ಜಾತ್ರೆಗೆ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.
ಐತಿಹಾಸಿಕ ಹಿನ್ನೆಲೆ: ದಕ್ಷಿಣಗಂಗೆ ಕಾವೇರಿ ನದಿಯ ದಂಡದ ಮೇಲಿರುವ ರಾಮಲಿಂಗೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಐತಿಹ್ಯವಿದೆ.
ರಾಮಾಯಣದಲ್ಲಿ ಸೀತೆ ಅಪಹರಣಗೊಂಡ ಸಂದರ್ಭ ಸೀತೆಯನ್ನು ಹುಡುಕಿಕೊಂಡು ಆಂಜನೇಯ ಮತ್ತು ಲಕ್ಷ್ಮಣನೊಂದಿಗೆ ಬಂದ ಶ್ರೀರಾಮ ಇಲ್ಲಿನ ರಮಣೀಯ ದೃಶ್ಯವನ್ನು ನೋಡಿ ಆನಂದಿಸಿ, ಇಲ್ಲಿಯೇ ಕೆಲಕಾಲ ವಿಶ್ರಮಿಸಿ ಮುಂದೆ ಸಾಗಿದರು ಎಂದು ಹೇಳಲಾಗುತ್ತದೆ.
ಇದೇ ವೇಳೆ ಇಲ್ಲಿನ ನದಿ ದಡದಲ್ಲಿ ತಪಸ್ಸು ಮಾಡುತ್ತಿದ್ದ ವ್ಯಾಘ್ರ ಮಹರ್ಷಿ ಶ್ರೀರಾಮನಿಗೆ ಅಜ್ಞೆ ಮಾಡಿ ತನ್ನ ಪೂಜಾ ಕೈಂಕಾರ್ಯಗಳಿಗೆ ಅವಶ್ಯವಿರುವ ಶಿವಲಿಂಗವನ್ನು ತರಲು ಆಂಜನೇಯನನ್ನು ಶ್ರೀರಾಮ ಕಾಶಿಗೆ ಕಳುಹಿಸುತ್ತಾನೆ. ಆದರೆ, ಆಂಜನೇಯ ಶಿವಲಿಂಗ ತರುವುದು ವಿಳಂಬವಾದ ಕಾರಣ ಶ್ರೀರಾಮ ಅಲ್ಲಿಯೇ ಮರಳಿನಿಂದ ಶಿವಲಿಂಗವನ್ನು ಮಾಡಿ ಪೂಜೆಗೆ ಅನುವು ಮಾಡಿಕೊಟ್ಟು ಅಲ್ಲಿಂದ ತೆರಳಿದ ಎನ್ನುವ ಪ್ರತೀತಿಯೂ ಇದೆ. ಈ ಕಾರಣದಿಂದಾಗಿ ಕಣಿವೆ ದೇವಸ್ಥಾನದಲ್ಲಿರುವ ಲಿಂಗವನ್ನು ಮರಳುಲಿಂಗ ಎಂದೇ ಕರೆಯಲಾಗುತ್ತದೆ ಎಂದು ದೇವಾಲಯದ ಪ್ರಧಾನ ಅರ್ಚಕ ಎಚ್.ಆರ್.ರಾಘವೇಂದ್ರ ಆಚಾರ್ ಹೇಳುತ್ತಾರೆ.
ಆಂಜನೇಯನೂ ಶಿವಲಿಂಗವನ್ನು ತಂದದ್ದರಿಂದ ಆ ಲಿಂಗವನ್ನು ಪಕ್ಕದಲ್ಲೇ ಇರುವ ಲಕ್ಷ್ಮಣೇಶ್ವರ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಲಾಯಿತು ಎಂದೂ ಹೇಳಲಾಗುತ್ತದೆ.
ರಾಮಲಿಂಗೇಶ್ವರ ಪ್ರತಿಷ್ಠಾಪನೆಯಾದ ಹಿನ್ನೆಲೆಯಲ್ಲಿ ಈ ಪ್ರದೇಶಕ್ಕೆ ಶ್ರೀರಾಂಪುರ ಎಂದು ಕರೆಯಲಾಗುತ್ತದೆ.
ತೂಗು ಸೇತುವೆ ಆಕರ್ಷಣೆ: ದೇವಸ್ಥಾನದ ಪಕ್ಕದಲ್ಲಿಯೇ ಕಾವೇರಿ ನದಿಗೆ ಅಡ್ಡಲಾಗಿ ಶಿವಮೊಗ್ಗ ಮಲೆನಾಡು ಅಭಿವೃದ್ಧಿ ಮಂಡಳಿ ವತಿಯಿಂದ ಸುಮಾರು ₹45 ಲಕ್ಷ ವೆಚ್ಚದಲ್ಲಿ ತೂಗು ಸೇತುವೆಯನ್ನು ನಿರ್ಮಿಸಲಾಗಿದ್ದು, ಇದು ಪ್ರವಾಸಿಗರ ಪ್ರಮುಖ ಆಕರ್ಷಣೀಯ ಕೇಂದ್ರವಾಗಿದೆ. ರಾಮಲಿಂಗೇಶ್ವರ ದೇವಸ್ಥಾನ ಸಮಿತಿ ವತಿಯಿಂದ ದಾನಿಗಳ ಸಹಕಾರದೊಂದಿಗೆ ₹50 ಲಕ್ಷ ವೆಚ್ಚದಲ್ಲಿ ನೂತನ ಸಮುದಾಯ ಭವನ ನಿರ್ಮಾಣ ಮಾಡಲಾಗಿದ್ದು, ಈ ಸಭಾಂಗಣದಲ್ಲಿ ವಿವಿಧ ಧಾರ್ಮಿಕ ಕಲ್ಯಾಣ ಕಾರ್ಯಕ್ರಮಗಳು ನಡೆಯುತ್ತಿವೆ.
ರಾಜ್ಯಮಟ್ಟದ ನೃತ್ಯ ಸ್ಪರ್ಧೆ: ಏ.6 ರಂದು ಭಾನುವಾರ ಸಂಜೆ.6.30ಕ್ಕೆ ದೇವಾಲಯ ಸಮಿತಿ ವತಿಯಿಂದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಕುಣಿಯೋಣ ಬಾರ ಆಯೋಜಿಸಲಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ ₹8888 ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ₹5555. ಮತ್ತು ಟ್ರೋಫಿ ಹಾಗೂ ತೃತೀಯ ಬಹುಮಾನ ₹2222 ಮತ್ತು ಟ್ರೋಫಿ ನೀಡಲಾಗುತ್ತದೆ.
ಏ.6ರ ಸಂಜೆ.6.30ಕ್ಕೆ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ವಿದ್ಯುತ್ ದೀಪಗಳಿಂದ ಶೃಂಗಾರ, ಹಸಿರು,ತಳಿರು ತೋರಣ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ
ಜೀವ ನದಿ ಕಾವೇರಿ ಪೂರ್ವಾಭಿಮುಖವಾಗಿ ಹರಿದಿರುವ ಏಕೈಕ ಪುಣ್ಯ ಕ್ಷೇತ್ರ ಇದಾಗಿದ್ದು ನಾಡಿನ ಎಲ್ಲಿಯೂ ಇಂತಹ ಕ್ಷೇತ್ರ ಕಾಣಸಿಗದು. ಶ್ರೀರಾಮ ಲಕ್ಷ್ಮಣ ಹಾಗೂ ಆಂಜನೇಯ ಅವರ ಪಾದ ಸ್ಪರ್ಶಗೊಂಡ ಈ ಸ್ಥಳ ಶ್ರೇಷ್ಠ ಧಾರ್ಮಿಕ ಕ್ಷೇತ್ರಎಚ್.ಆರ್.ರಾಘವೇಂದ್ರ ಆಚಾರ್ ಪ್ರಧಾನ ಅರ್ಚಕರು
ಕಣಿವೆ ಗ್ರಾಮದಲ್ಲಿ ಎಲ್ಲ ಸಮುದಾಯದವರು ಸಾಮರಸ್ಯದಿಂದ ಜೀವನ ನಡೆಸಿಕೊಂಡು ಬರುತ್ತಿದ್ದು ಒಟ್ಟಾಗಿ ರಥೋತ್ಸವ ಆಚರಿಸಿಕೊಂಡು ಬರುತ್ತಿದ್ದೇವೆ. ಈ ರಥೋತ್ಸವಕ್ಕೆ ಕೊಡಗು ಸೇರಿದಂತೆ ಮೈಸೂರು ಹಾಸನ ಜಿಲ್ಲೆಯ ಗಡಿಗ್ರಾಮಗಳ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆಕೆ.ಎನ್.ಸುರೇಶ್ ದೇವಾಲಯ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.