ADVERTISEMENT

ರಂಜಾನ್‌ ದಿನ ಎಲ್ಲಾ ಆಚರಣೆಗಳೂ ಮನೆಯಲ್ಲೇ ನಡೆಸಿ:

ವಕ್ಫ್ ಸಲಹಾ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಎ.ಯಾಕುಬ್ ಮನವಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 12:13 IST
Last Updated 17 ಏಪ್ರಿಲ್ 2020, 12:13 IST
ಕೆ.ಎ.ಯಾಕುಬ್
ಕೆ.ಎ.ಯಾಕುಬ್   

ಮಡಿಕೇರಿ: ‘ಮುಂದಿನ ವಾರದಿಂದ ರಂಜಾನ್ ಉಪವಾಸ ಆರಂಭವಾಗಲಿದ್ದು, ಮುಸ್ಲಿಂ ಸಮುದಾಯದವರು ಮನೆಯಲ್ಲೇ ಎಲ್ಲ ಆಚರಣೆಗಳನ್ನು ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು’ ಎಂದು ವಕ್ಫ್ ಸಲಹಾ ಸಮಿತಿ ಜಿಲ್ಲಾ ಅಧ್ಯಕ್ಷ ಕೆ.ಎ.ಯಾಕುಬ್ ಮನವಿ ಮಾಡಿದ್ದಾರೆ.

ರಾಜ್ಯ ವಕ್ಫ್ ಸಮಿತಿಯೂ ಆದೇಶ ಹೊರಡಿಸಿದ್ದು, ಮನೆಯಲ್ಲೇ ಪ್ರಾರ್ಥಿಸುವ ಮೂಲಕ ಸರ್ಕಾರದ ಲಾಕ್‌ಡೌನ್ ನಿಯಮಗಳನ್ನು ಪಾಲಿಸಬೇಕು ಎಂದೂ ಅವರು ಕೋರಿದ್ದಾರೆ.

‘ರಂಜಾನ್ ತಿಂಗಳ ಸಂದರ್ಭದಲ್ಲಿ ರಾಜ್ಯ ಅಲ್ಪಸಂಖ್ಯಾತ ಮತ್ತು ವಕ್ಫ್ ಮಂಡಳಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕಡ್ಡಾಯವಾಗಿ ರಂಜಾನ್ ದಿನಗಳಲ್ಲಿ ಮುಸ್ಲಿಂ ಬಾಂಧವರು ಪಾಲಿಸಬೇಕು. ಮಾರ್ಗಸೂಚಿಯ ಅನುಸಾರವೇ ನಡೆದುಕೊಳ್ಳಬೇಕು. ಓಡಾಡುವಾಗ ಮಾಸ್ಕ್ ಧರಿಸಬೇಕು. ಬಡವರಿಗೆ ಸಹಾಯ ಮಾಡುವ ನೆಪದಲ್ಲಿ ಗುಂಪು ಸೇರಬಾರದು. ಮುಸ್ಲಿಮರ ಜೊತೆಗೆ ಇತರರಿಗೂ ಸಹಾಯ ಮಾಡಬೇಕು. ಮನೆಯಲ್ಲೇ ರಂಜಾನ್ ಆಚರಿಸಬೇಕು’ ಎಂದು ಹೇಳಿದ್ದಾರೆ.

ADVERTISEMENT

ದರ್ಗಾ ಮತ್ತು ಮಸೀದಿಗೆ ಹೋಗಬಾರದು. ಕೇಂದ್ರ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಸೂಚನೆ ಪಾಲಿಸಬೇಕು. ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಹಕರಿಸಬೇಕು. ರಂಜಾನ್ ಮಾಸಾಚರಣೆ ವೇಳೆಯಲ್ಲಿ ಮಸೀದಿ ಮತ್ತು ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡುವಂತಿಲ್ಲ. ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದು ಮತ್ತು ಉಪವಾಸ ವ್ರತ ಅಂತ್ಯ ಕುರಿತಂತೆ ಜೋರಾದ ಶಬ್ದದೊಂದಿಗೆ ಮಾಹಿತಿ ನೀಡುವಂತಿಲ್ಲ ಎಂದು ತಿಳಿಸಿದ್ದಾರೆ.

ಧ್ವನಿವರ್ಧಕ ಬಳಸಿ ಪ್ರವಚನ ನೀಡುವಂತಿಲ್ಲ. ಇಫ್ತಾರ್ ಕೂಟಗಳು ಮತ್ತು ಸಾಮೂಹಿಕ ಭೋಜನ ಕೂಟ ಆಯೋಜಿಸುವಂತಿಲ್ಲ. ಮಸೀದಿ ಮತ್ತು ಮೊಹಲ್ಲಾಗಳಲ್ಲಿ ತಂಪು ಪಾನೀಯ, ಗಂಜಿ ವಿತರಿಸುವಂತಿಲ್ಲ. ಮಸೀದಿ ಮತ್ತು ದರ್ಗಾಗಳ ಸುತ್ತಾಮುತ್ತ ಯಾವುದೇ ಉಪಹಾರ ಅಂಗಡಿಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ರಾಜ್ಯ ವಕ್ಫ್ ಸಮಿತಿ ನೀಡಿರುವ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಯಾಕುಬ್ ಅವರು ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನದಿಂದ ಇಂದು ಕೊಡಗು ಜಿಲ್ಲೆ ಕೊರೊನಾ ಮುಕ್ತವಾಗಿದೆ. ಇನ್ನು ಮುಂದೆಯೂ ಜನರು ಲಾಕ್‌ಡೌನ್ ನಿಯಮಗಳನ್ನು ಪಾಲಿಸುವ ಮೂಲಕ ಅಧಿಕಾರಿಗಳ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಬೇಕು ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.