
ಮಡಿಕೇರಿ: ಕೊಡಗು ಜಿಲ್ಲೆಯ ಮಾಲ್ದಾರೆ ಗ್ರಾಮದಿಂದ ನೀನಾಸಂವರೆಗೆ ಮಂಜು ಕೊಡಗು ಅವರ ಪಯಣ ಹಲವು ಅನಿರೀಕ್ಷಿತಗಳನ್ನು ಕಂಡಿದೆ.
ಐತಪ್ಪ–ಲೀಲಾ ದಂಪತಿಯ ಪುತ್ರರಾದ ಪಿ.ಎ.ಮಂಜಪ್ಪ (ಮಂಜು ಕೊಡಗು) ಅವರು ಕನ್ನಡದ ಜೊತೆಗೆ ಭಾರತೀಯ ಮತ್ತು ಪಾಶ್ಚಾತ್ಯ ಭಾಷೆಗಳ ಒಟ್ಟು 37 ನಾಟಕಗಳನ್ನು ನಿರ್ದೇಶಿಸಿರುವುದು ವಿಶೇಷ. ಇವರ ನಿರ್ದೇಶನದ, ಲಂಕೇಶ್ ಅವರ ‘ಗುಣಮುಖ’ ನಾಟಕಕ್ಕೆ ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ದೊರಕಿದೆ.
ಇವರೇ ಕಟ್ಟಿರುವ ‘ಭಳಿರೇ...ವಿಚಿತ್ರಮ್’ ರಂಗತಂಡವು ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ ‘ದಶಾನನ ಸ್ವಪ್ನಸಿದ್ಧಿ’ ನಾಟಕವನ್ನು ಪ್ರದರ್ಶಿಸಿತ್ತು. ರಾಷ್ಟ್ರಮಟ್ಟದ ‘ಮೆಟಾ ಥಿಯೇಟರ್ ಫೆಸ್ಟಿವಲ್’ನಲ್ಲಿ 5 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡು ಅತ್ಯುತ್ತಮ ವಸ್ತ್ರವಿನ್ಯಾಸ ಎಂಬ ರಾಷ್ಟ್ರಪುರಸ್ಕಾರವೂ ಈ ಪ್ರಯೋಗಕ್ಕೆ ಲಭಿಸಿತ್ತು.
ಮೂರು ದಶಕಗಳ ಹಿಂದೆ ನೀನಾಸಂನ ರಂಗಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದು ಅಲ್ಲಿನ ತಿರುಗಾಟದಲ್ಲಿ ವರ್ಷ ನಟ, ತಂತ್ರಜ್ಞರಾಗಿದ್ದರು. ಬೆಂಗಳೂರಿನ ‘ಸಮುದಾಯ’, ಚಿತ್ರದುರ್ಗದ ಕಲಾಶಾಲೆ ‘ಜಮುರಾ’ ಕಲಾವೇದಿಕೆಯಲ್ಲಿ ಅಧ್ಯಾಪಕರಾಗಿದ್ದರು. ಏಕಲವ್ಯ, ವಿಕಾಸ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಕೆಲ ವರ್ಷ ತರಬೇತುದಾರರಾಗಿದ್ದರು.
2002ರಿಂದ ಹೆಗ್ಗೋಡಿನ ನೀನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕರಾಗಿರುವ ಅವರ ವಿದ್ಯಾರ್ಥಿಗಳು ದೇಶದ ಹಲವೆಡೆ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ವಿನ್ಯಾಸಕ್ಕೆ ಸಂಬಂಧಿಸಿದ ಅವರ ‘ಆಹಾರ್ಯ-ಅಭಿನಯ’ ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪ್ರಕಟಿಸಿದ್ದು, ರಂಗಶಿಕ್ಷಣ ಕೇಂದ್ರಗಳಿಗೆ ಪಠ್ಯವಾಗಿದೆ. ‘ಬ್ರೆಕ್ಟ್‌ನ ಎಕ್ಸೆಪ್ಷೆನ್ ಆ್ಯಂಡ್ ದಿ ರೂಲ್’ ನಾಟಕವನ್ನು ಕನ್ನಡಕ್ಕೆ ‘ಮರುಭೂಮಿಯಲ್ಲೊಂದು ಯಾನ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.
ಹೆಸರಾಂತ ನಿರ್ದೇಶಕರಾದ ಬಿ.ವಿ.ಕಾರಂತ ಅವರ ನಿರ್ದೇಶನದ ‘ಭಗವದಜ್ಜುಕೀಯ’, ಮೀಡಿಯಾ, ಚಿದಂಬರರಾವ್ ಜಂಬೆ ನಿರ್ದೇಶನದ ‘ತುಘಲಕ್’, ಕೆ.ವಿ.ಅಕ್ಷರ ನಿರ್ದೇಶನದ ‘ಹೊಸ ಸಂಸಾರ’, ‘ಬಾಬುಗಿರಿ’, ‘ಆಂಗ್ಲನೌಕಾ ಕ್ಯಾಪ್ಟನ್’ ಸೇರಿದಂತೆ 35ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ‘ಮಹಾರಾತ್ರಿ’, ‘ಯಾರೋ ಅಂದರು‘, ‘ಡೇರ್ ಡೆವಿಲ್ ಮುಸ್ತಾಫ’, ‘ಮೀಡಿಯಾ’, ‘ವಿಜಯನಾರಸಿಂಹ’, ‘ವಿಗಡ ವಿಕ್ರಮರಾಯ’, ‘ದೂತ ಘಟೋತ್ಕಜ’ ಅವರ ನಿರ್ದೇಶನದ ಪ್ರಮುಖ ನಾಟಕಗಳು. ಸದ್ಯ, ಶಂಕರೇಗೌಡ ಅವರ ‘ಪಾದುಕಾ ಕಿರೀಟಿ’ ನಾಟಕದ ನಿರ್ದೇಶನದಲ್ಲಿ ತೊಡಗಿದ್ದು, ಡಿ. 11ರಂದು ಹೆಗ್ಗೋಡುವಿನಲ್ಲಿ ಪ್ರದರ್ಶನವಾಗಲಿದೆ.
ಈಚೆಗೆ ಜುಲೈ ತಿಂಗಳಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ 2025–26ನೇ ಸಾಲಿನ ಎಚ್.ವಿ.ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ ನೀಡಿ ಗೌರವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.