
ಕುಶಾಲನಗರ: ನಾಡಿನ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಲು ಇಂತಹ ಸ್ಪರ್ಧೆ ಸಹಕಾರಿಯಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮುನೀರ್ ಅಹಮದ್ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಲ್ಲಿನ ರಥ ಬೀದಿಯಲ್ಲಿ ಭಾನುವಾರ ಸಾರ್ವಜನಿಕರಿಗೆ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಉತ್ತಮ ಸಮಾಜವನ್ನು ರೂಪಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಪಾತ್ರ ಮಹತ್ವವಾದದ್ದು, ಇದರಲ್ಲಿ ಎಲ್ಲರೂ ಒಟ್ಟಾಗಿ ಸೇರಿ ನಮ್ಮಲ್ಲಿ ಪರಸ್ಪರ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಉದ್ಯಮಿ ಎಸ್.ಕೆ. ಸತೀಶ ಮಾತನಾಡಿ, ತಾಲ್ಲೂಕು ಕಸಾಪ ಉತ್ತಮವಾದ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಜನರಲ್ಲಿ ಸಾಹಿತ್ಯ, ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಿದೆ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಪ್ರದರ್ಶಿಸಲು ರಂಗೋಲಿ ಸ್ಪರ್ಧೆ ಸಹಕಾರಿಯಾಗಿದೆ ಎಂದರು. ರಂಗೋಲಿ ಕಲೆಯನ್ನು ಇಂದಿನ ಮಕ್ಕಳು ಹಾಗೂ ಯುವ ಜನತೆಗೆ ಪರಿಚಯಿಸಲು ಈ ಸ್ಪರ್ಧೆ ಅನುಕೂಲವಾಗಿದೆ ಎಂದು.
ಉದ್ಯಮಿಗಳಾದ ಕೆ.ಜೆ.ಚಿನ್ನಸ್ವಾಮಿ, ಎಸ್.ಎಲ್. ಶ್ರೀಪತಿ, ದಿನೇಶ್, ವಿ.ವಿ.ನಾಗೇಂದ್ರ ಶೆಟ್ಟಿ, ಕಾರ್ಯದರ್ಶಿಗಳಾದ ಎಸ್.ನಾಗರಾಜ್, ಟಿ.ವಿ.ಶೈಲಾ, ಖಜಾಂಚಿ ಕೆ.ವಿ.ಉಮೇಶ್, ನಿರ್ದೇಶಕರಾದ ಎಂ.ಎನ್. ಕಾಳಪ್ಪ, ಹೇಮಲತಾ, ಟಿ.ಬಿ.ಮಂಜುನಾಥ್, ಡಿ.ಎಸ್.ಸೋಮಶೇಖರ್, ಜಿಲ್ಲಾ ಸಮಿತಿಯ ಕೆ.ಎನ್. ದೇವರಾಜ್, ಹೆಬ್ಬಾಲೆ ಘಟಕ ಅಧ್ಯಕ್ಷ ಎಂ.ಎನ್. ಮೂರ್ತಿ, ದೇವಿ ಪ್ರಸಾದ್, ಹರೀಶ್ ಗುಡ್ಡೆಮನೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.