ಮಡಿಕೇರಿ: ಒಳ ಮೀಸಲಾತಿ ಕುರಿತು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ನೀಡಿರುವ ವರದಿಯನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ (ಬಲಗೈ) ಸಂಬಂಧಿತ ಜಾತಿಗಳ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ಸದಸ್ಯರು ಇಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಒಕ್ಕೂಟದ ಜಿಲ್ಲಾ ಸಂಚಾಲಕ ರಾಜಪ್ಪ, ‘ಒಳ ಮೀಸಲಾತಿ ಬೇಕು ನಿಜ. ಆದರೆ, ಈಗ ಈ ಕುರಿತು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ನೀಡಿರುವ ವರದಿಯನ್ನು ಜಾರಿ ಮಾಡುವುದಕ್ಕೂ ಮುನ್ನ ಪುನರ್ ಪರಿಶೀಲನೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.
ಈ ವರದಿಯಲ್ಲಿರುವ ತಾರತಮ್ಯದ ಅಂಶಗಳನ್ನು ಹೋಗಲಾಡಿಸಿ, ಸಮಾನ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ವರದಿಯ ಪುನರ್ ಪರಿಶೀಲನೆಗೆ ಉಪಸಮಿತಿ ರಚಿಸಿ ಆಗಿರುವ ಲೋಪದೋಷವನ್ನು ಸರಿಪಡಿಸಿ ನ್ಯಾಯೋಚಿತವಾಗಿ ಜಾರಿ ಮಾಡಬೇಕು. ಇಲ್ಲದಿದ್ದರೆ, ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಳಿಕ ಅವರು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘಟನೆಯ ಮುಖಂಡರಾದ ರಾಜಶೇಖರ್, ದೇವರಾಜ, ಪೊನ್ನಪ್ಪ, ಗೋವಿಂದರಾಜ, ಚನ್ನಕೇಶವ, ರಾಜು, ಡೀಲಕ್ಷ, ವೀರಭದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.