ADVERTISEMENT

‌ಸೋಮವಾರಪೇಟೆ: ಬಿರುಸು ಪಡೆದ ಭತ್ತದ ಕೃಷಿ ಚಟುವಟಿಕೆ

ಎರಡು ದಿನಗಳಿಂದ ಕಡಿಮೆಯಾದ ಮಳೆ

ಡಿ.ಪಿ.ಲೋಕೇಶ್
Published 30 ಜೂನ್ 2025, 13:32 IST
Last Updated 30 ಜೂನ್ 2025, 13:32 IST
ಸೋಮವಾರಪೇಟೆ ತಾಲ್ಲೂಕಿನ ಹೆಗ್ಗುಳ ಗ್ರಾಮದ ಲೋಹಿತ ಅವರ ಭತ್ತದ ಗದ್ದೆಯನ್ನು ಭತ್ತದ ನಾಟಿಗೆ ಸಿದ್ಧತಾ ಕಾರ್ಯದಲ್ಲಿ ತೊಡಗಿರುವುದು 
ಸೋಮವಾರಪೇಟೆ ತಾಲ್ಲೂಕಿನ ಹೆಗ್ಗುಳ ಗ್ರಾಮದ ಲೋಹಿತ ಅವರ ಭತ್ತದ ಗದ್ದೆಯನ್ನು ಭತ್ತದ ನಾಟಿಗೆ ಸಿದ್ಧತಾ ಕಾರ್ಯದಲ್ಲಿ ತೊಡಗಿರುವುದು    

‌ಸೋಮವಾರಪೇಟೆ: ಮಳೆ ಒಂದೆರಡು ದಿನಗಳಿಂದ ಕಡಿಮೆಯಾಗಿದ್ದು, ಭತ್ತದ ಕೃಷಿಯತ್ತ ರೈತರು ಮುಖ ಮಾಡಿದ್ದಾರೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ, ಸೂರ್ಲಬ್ಬಿ, ಮಂಕ್ಯಾ, ಕಿಕ್ಕರಳ್ಳಿ, ಮೂವತ್ತೊಕ್ಲು ಸೇರಿದಂತೆ ಶಾಂತಳ್ಳಿ ಹೋಬಳಿಯ ಹಲವಾರು ಗ್ರಾಮಗಳಲ್ಲಿ ವಾರ್ಷಿಕವಾಗಿ 250ರಿಂದ 300 ಇಂಚು ಮಳೆಯಾಗುತ್ತದೆ. ಪ್ರತಿ ವರ್ಷವೂ ಕಾಫಿ, ಏಲಕ್ಕಿ, ಕಾಳುಮೆಣಸು ಫಸಲು ಮಳೆಯಲ್ಲಿ ಹಾನಿಯಾಗುತ್ತದೆ. ಕಾಡಾನೆ, ಕಾಡುಕೋಣ, ಕಾಡು ಹಂದಿಗಳ ಕಾಟವಿದ್ದರೂ ಭತ್ತ ಬೆಳೆಯುವುದನ್ನು ಕೃಷಿಕರು ನಿಲ್ಲಿಸದೆ, ತಮ್ಮ ಮನೆಯ ಬಳಕೆಗಾದರೂ, ಭತ್ತವನ್ನು ಬೆಳೆಯುತ್ತಿದ್ದಾರೆ.

ಅಕಾಲಿಕ ಮಳೆ, ಕಾರ್ಮಿಕರ ಕೊರತೆ, ರಸಾಯನಿಕ ಗೊಬ್ಬರ, ಕೀಟ ನಾಶಕಗಳ ಬೆಲೆ ಗಗನಕ್ಕೇರಿ ಉತ್ಪಾದನಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚಿನ ಹೋಬಳಿಗಳಲ್ಲಿ ಕೃಷಿಕರು ಗದ್ದೆ ಭೂಮಿಯನ್ನು ಸಮತಟ್ಟು ಮಾಡಿ ತೋಟಗಾರಿಕಾ ಬೆಳೆಯನ್ನು ಬೆಳೆಯುತ್ತಿರುವ ಸಂದರ್ಭದಲ್ಲಿ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 8 ಗ್ರಾಮಗಳಲ್ಲಿ ಹವಮಾನ ವೈಪರೀತ್ಯ, ಅಕಾಲಿಕ ಮಳೆಗೆ ಸೆಡ್ಡು ಹೊಡೆದು ಭತ್ತ ಕೃಷಿಯನ್ನು ಮುಂದುವರಿಸಿದ್ದಾರೆ.

ADVERTISEMENT

‘ಈ ಭಾಗದಲ್ಲಿ ಕೃಷಿಕರಿಗೆ ಸದ್ಯಕ್ಕೆ ಭತ್ತವೇ ಜೀವನಾಧಾರ ಬೆಳೆಯಾಗಿದೆ. ಪ್ರತಿವರ್ಷ ಧಾರಾಕಾರ ಮಳೆಯಿಂದ ಫಸಲು ಹಾನಿಯಾಗುತ್ತಿದೆ. ಕಾಡು ಪ್ರಾಣಿಗಳು ತಿಂದು ಉಳಿಸಿದ ಫಸಲನ್ನು ತೆಗೆದುಕೊಳ್ಳುವಂತ ಪರಿಸ್ಥಿತಿ ಇದೆ. ಜಮ್ಮಾ ಆಸ್ತಿ ಹಿಡುವಳಿ ಇರುವುದರಿಂದ ಕೃಷಿಕರಿಗೆ ಆಸ್ತಿ ದಾಖಲಾತಿಗಳ ಸಮಸ್ಯೆಯಿದೆ. ದಾಖಲಾತಿ ಸಮಸ್ಯೆಯಿಂದ ಮಳೆಹಾನಿ ಪರಿಹಾರ ಹಾಗೂ ಸರ್ಕರ ಸೌಲಭ್ಯಗಳು ಬಹುತೇಕ ರೈತರಿಗೆ ಸಿಗುತ್ತಿಲ್ಲ’ ಎಂದು ಗ್ರಾಮಸ್ಥರು ದೂರಿದರು.

‘ಅತಿ ಮಳೆಯಿಂದ ಕಾಫಿ ಕೊಳೆರೋಗ ಬಂದು ಉದುರುತ್ತಿವೆ. ರೋಗಬಾಧೆಯಿಂದ ಏಲಕ್ಕಿ ಫಸಲು ಸಿಗುತ್ತಿಲ್ಲ. ಭತ್ತ, ತರಕಾರಿ ಬೆಳೆಯುತ್ತೇವೆ. ಸಕಾಲದಲ್ಲಿ ಪಡಿತರ ಸರಬರಾಜು ಮಾಡಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡರೆ, ಅತೀ ಶೀಘ್ರ ದುರಸ್ತಿಗೊಳಿಸಿ ವಿದ್ಯುತ್ ನೀಡಬೇಕು. ಕಂದಾಯ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಬೇಕು’ ಎಂದು ರೈತ ಮಹಿಳೆ ಸೂರ್ಲಬ್ಬಿಯ ಜಯಂತಿ ಹೇಳಿದರು.

‘ಹೆಚ್ಚು ಮಳೆಯಾಗುವ ಗರ್ವಾಲೆ ಗ್ರಾಮ ಪಂಚಾಯಿತಿ ಪುಷ್ಪಗಿರಿ ತಪ್ಪಲು ಗ್ರಾಮಗಳ ಜನರು ತತ್ತರಿಸಿದ್ದಾರೆ. ಅದರೂ ಭತ್ತ ಕೃಷಿ ಚಟುವಟಿಕೆ ಬಿರುಸಿನಿಂದ ಸಾಗುತ್ತಿದೆ. ಕಳೆದ ಜನವರಿಯಿಂದ ಇಲ್ಲಿಯವರೆಗೆ 125 ಸೆಂ.ಮೀ.ನಷ್ಟು ಮಳೆ ಸುರಿದಿದೆ. ಕೃಷಿಕರ ಭತ್ತ ಸಸಿ ಮಡಿಗಳು ನಾಟಿಗೆ ಸಿದ್ಧವಾಗಿವೆ. ಉಳುಮೆ ಮಾಡಿದ್ದ ಗದ್ದೆಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ತೋಡು, ಕೊಲ್ಲಿಗಳಲ್ಲೂ ನೀರಿನ ಹರಿವು ಕಡಿಮೆಯಾಗಿರುವುದರಿಂದ ನಾಟಿ ಮಾಡಲು ಉಪಯೋಗವಾಗಿದೆ’ ಎಂದು ಕುಂಬಾರಗಡಿಗೆ ಗ್ರಾಮದ ಭತ್ತ ಬೆಳೆಗಾರ ಕನ್ನಿಗಂಡ ಪಳಂಗಪ್ಪ ಹೇಳಿದರು.

ವಾರ್ಷಿಕ 250ರಿಂದ 300 ಇಂಚು ಮಳೆ ಅತಿ ಮಳೆಯಿಂದ ಕೊಳೆರೋಗ ಬಾಧೆಗೆ ಉದುರುವ ಕಾಫಿ  ಕೃಷಿಕರಿಗೆ ಆಸ್ತಿ ದಾಖಲಾತಿಗಳ ಸಮಸ್ಯೆ
ಭತ್ತದ ಹಣ್ಣಾಗುವ ಸಂದರ್ಭದಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತದೆ. ಬೆಳೆಹಾನಿಯಾದಾಗ ನಿಯಮ ಸರಳೀಕರಣಗೊಳಿಸಿ ಪರಿಹಾರ ನೀಡಬೇಕು. ಭತ್ತ ಕೃಷಿಗೆ ಎಕರೆಗೆ ₹25 ಸಾವಿರ ಸಹಾಯಧನ ನೀಡಲೇಬೇಕು
ಲೋಕೇಶ್ ಕೃಷಿಕ ಗರ್ವಾಲೆ ಗ್ರಾಮ 

ರೈತರ ಮನೆಮನೆಗೆ ಕೃಷಿ ಸೌಲಭ್ಯ  

ಭತ್ತದ ಬೆಳೆಗಾರರಿಗೆ ಕೃಷಿ ಇಲಾಖೆಯಿಂದ ಸಿಗಬೇಕಾದ ಸೌಲಭ್ಯಗಳನ್ನು ಮನೆಮನೆಗೆ ತಲುಪಿಸುತ್ತಿದ್ದೇವೆ. ಬಿತ್ತನೆ ಬೀಜವನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ. ಕೆಲವು ರೈತರ ನಾಟಿ ಕೆಲಸ ಪ್ರಾರಂಭಿಸಿದ್ದಾರೆ. ನಾಟಿ ಮಾಡಿದ ಹದಿನೈದು ದಿನದ ನಂತರ ಕೀಟನಾಶಕಗಳನ್ನು ಕೊಡುತ್ತೇವೆ. ಪ್ರತಿವರ್ಷ ಹೆಚ್ಚಿನ ಆಸಕ್ತಿ ವಹಿಸಿ ಬೆಳೆಹಾನಿ ಪರಿಹಾರ ಕೊಡಿಸಲು ಪ್ರಯತ್ನ ಮಾಡಿದ್ದೇವೆ. ಪಿ.ಎಂ. ಕಿಷಾನ್ ಯೋಜನೆಯ ಸೌಲಭ್ಯ ಫಲಾನುಭವಿಗಳಿಗೆ ಸಿಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಪಿ.ವೀರಣ್ಣ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.