ADVERTISEMENT

ತುಂತುರು ಮಳೆ ನಡುವೆ ಭತ್ತದ ನಾಟಿ

ಕೈಲ್ ಮುಹೂರ್ತಕ್ಕೂ ಮುನ್ನ ನಾಟಿ ಪೂರ್ಣಗೊಳಿಸುವ ಧಾವಂತ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2024, 3:34 IST
Last Updated 26 ಆಗಸ್ಟ್ 2024, 3:34 IST
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ಭಾನುವಾರ ಭತ್ತದ ಸಸಿಮಡಿಗಳಿಂದ ಅಗೆ ತೆಗೆಯುವ ಕಾರ್ಯದಲ್ಲಿ ಮಹಿಳಾ ಕಾರ್ಮಿಕರು ನಿರತರಾಗಿದ್ದರು
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ಭಾನುವಾರ ಭತ್ತದ ಸಸಿಮಡಿಗಳಿಂದ ಅಗೆ ತೆಗೆಯುವ ಕಾರ್ಯದಲ್ಲಿ ಮಹಿಳಾ ಕಾರ್ಮಿಕರು ನಿರತರಾಗಿದ್ದರು   

ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಳೆ ಬಿಡುವು ನೀಡಿದ್ದು, ಹನಿ ಮಳೆಯ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ.

ಆಗಸ್ಟ್ 27ರಂದು ಮಂಗಳವಾರ ನಾಲ್ಕುನಾಡು ವ್ಯಾಪ್ತಿಯಲ್ಲಿ ಕೈಲ್ ಮುಹೂರ್ತ ಹಬ್ಬ ನಡೆಯಲಿದ್ದು, ಅದಕ್ಕೂ ಮುನ್ನ ನಾಟಿ ಕೆಲಸ ಪೂರ್ಣಗೊಳಿಸುವ ಧಾವಂತ ರೈತರಲ್ಲಿ ಕಂಡುಬಂತು.

ಸಮೀಪದ ಬೇತು, ಹೊದ್ದೂರು, ಬಲಮುರಿ, ನೆಲಜಿ, ಬಲ್ಲಮಾವಟಿ ಗ್ರಾಮಗಳಲ್ಲಿ ಭತ್ತದ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದವು. ಎಲ್ಲೆಡೆ ಯಂತ್ರೋಪಕರಣಗಳನ್ನು ಬಳಸಿ ರೈತರು ಗದ್ದೆ ಹದ ಮಾಡುತ್ತಿದ್ದರೆ, ಬಲ್ಲಮಾವಟಿಯಲ್ಲಿ ಎತ್ತುಗಳನ್ನು ಬಳಸಿ ಗದ್ದೆ ಉಳುಮೆ ಕೈಗೊಂಡಿದ್ದರು.

ADVERTISEMENT

ಪ್ರವಾಹದ ಭೀತಿಯಿಂದ ಕಾವೇರಿ ನದಿತಟದ ಗದ್ದೆಗಳಲ್ಲಿ ಪ್ರತಿವರ್ಷ ತಡವಾಗಿ ಭತ್ತದ ನಾಟಿ ಕಾರ್ಯ ನಡೆಸಲಾಗುತ್ತಿದೆ. ಎಲ್ಲೆಡೆ ಕೈಲ್ ಮುಹೂರ್ತ ಹಬ್ಬದ ಆಚರಣೆಗೆ ಮುನ್ನ ನಾಟಿ ಕೆಲಸವನ್ನು ಪೂರ್ಣಗೊಳಿಸುವುದು ರೂಢಿ. ನಾಲ್ಕುನಾಡು ವ್ಯಾಪ್ತಿಯಲ್ಲಿ ಇಂದಿನಿಂದ ಸಾಂಪ್ರದಾಯಿಕ ಆಚರಣೆ ಕೈಲ್ ಮುಹೂರ್ತಕ್ಕೆ ಸಿದ್ಧತೆಗಳಾಗುತ್ತಿದ್ದು, ಭಾನುವಾರ ಕೊನೆಯ ಹಂತದ ನಾಟಿಕೆಲಸ ಬಿರುಸಿನಿಂದ ನಡೆಯಿತು.

ವಿವಿಧೆಡೆಗಳಲ್ಲಿ ಸಸಿಮಡಿಗಳಿಂದ ಅಗೆ ತೆಗೆಯುವ, ಉಳುಮೆ ಮಾಡುವ ಕಾರ್ಯವೂ ನಡೆಯುತ್ತಿದೆ. ಕಾರ್ಮಿಕರ ಕೊರತೆಯ ನಡುವೆಯೂ ಸ್ಥಳೀಯ ಕಾರ್ಮಿಕರನ್ನು ಒಗ್ಗೂಡಿಸಿ ಪರವೂರಿನಿಂದ ಬಂದ ಕಾರ್ಮಿಕರನ್ನು ಬಳಸಿ ರೈತರು ನಾಟಿ ಕಾರ್ಯ ಕೈಗೊಳ್ಳುತ್ತಿದ್ದಾರೆ. ಕೂಲಿಕಾರ್ಮಿಕರ ಅಭಾವದಿಂದಾಗಿ ಬಹುತೇಕ ಮಂದಿ ಹಿಂದಿನ ವರ್ಷಗಳಲ್ಲಿ ಭತ್ತದ ಕೃಷಿಯನ್ನು ಕೈಬಿಟ್ಟಿದ್ದರು. ಅಲ್ಲಲ್ಲಿ ಕಾಡು ಪ್ರಾಣಿಗಳ ಉಪಟಳವೂ ರೈತರನ್ನು ಸಂಕಷ್ಟಕ್ಕೆ ತಂದೊಡ್ಡಿತ್ತು.

ಈ ವರ್ಷ ಮತ್ತೆ ಭತ್ತದ ಕೃಷಿ ಉತ್ಸಾಹದಿಂದ ಸಾಗುತ್ತಿದೆ. ಸಮೀಪದ ಗ್ರಾಮಗಳಲ್ಲಿ ಆಸಕ್ತ ರೈತರು ಭತ್ತದ ನಾಟಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ನಾಟಿಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಭತ್ತದ ಗದ್ದೆಯ ಉಳುಮೆ ಕಾರ್ಯ ನಡೆಯುತ್ತಿದೆ. ಮಹಿಳಾ ಕಾರ್ಮಿಕರು ಅಲ್ಲಲ್ಲಿ ಭತ್ತದ ಸಸಿಮಡಿಗಳಿಂದ ಅಗೆ ತೆಗೆಯುವ ಕೆಲಸ ಮಾಡಿದರೆ, ಪುರುಷರು ನಾಟಿ ಕೆಲಸ ನರ್ವಹಿಸಿದರು.

ಸಮೀಪದ ಹಳೆತಾಲೂಕಿನ ಬೊಪ್ಪಂಡ ಕಾಶಿ ನಂಜಪ್ಪ ಅವರ ಗದ್ದೆಯಲ್ಲಿ ನಾಟಿ ಕೆಲಸ ಪೂರ್ಣಗೊಂಡ ಬಳಿಕ ಸಾಂಪ್ರದಾಯಿಕ ನಾಟಿ ಓಟದ ಸ್ಪರ್ಧೆ ನಡೆಯಿತು. ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.

ಈ ಹಿಂದೆ ಎಲ್ಲ ರೈತರೂ ಸಾಂಪ್ರದಾಯಿಕ ನಾಟಿ ಓಟ ನಡೆಸುತ್ತಿದ್ದರು. ವಿಜೇತರಿಗೆ ಬಾಳೆಗೊನೆ, ಎಲೆ ಅಡಿಕೆ ನೀಡಿ ಗೌರವಿಸಲಾಗುತ್ತಿತ್ತು. ಈಗ ಅಂತಹ ಸಾಂಪ್ರದಾಯಿಕ ಆಚರಣೆಗಳು ಮರೆಯಾಗಿವೆ. ಸಾಂಪ್ರದಾಯಿಕ ಆಚರಣೆಗಳು ಕಳಚಿಕೊಳ್ಳಬಾರದು ಎಂದು ಪ್ರತಿವರ್ಷ ನಾಟಿ ಓಟದ ಸ್ಪರ್ಧೆಯನ್ನು ಆಯೋಜಿಸಿ ಯುವಕರನ್ನು ಉತ್ತೇಜಿಸುತ್ತಿದ್ದೇವೆ ಎಂದು ಕಾಶಿ ನಂಜಪ್ಪ ಹೇಳಿದರು.

ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ರೈತರು ಭತ್ತದ ನಾಟಿ ಕಾರ್ಯ ಬಿರುಸಿನಿಂದ ಕೈಗೊಂಡರು
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ಸಾಂಪ್ರದಾಯಿಕ ಉಳುಮೆ ಕಾರ್ಯದಲ್ಲಿ ನಿರತನಾಗಿದ್ದ ಕಾರ್ಮಿಕ
ಮಳೆ ಬಿಡುವು ಕೊಟ್ಟಿರುವುದು ಭತ್ತದ ಕೃಷಿಗೆ ಉತ್ತೇಜನಕಾರಿಯಾಗಿದೆ. ಮಹಿಳಾ ಕಾರ್ಮಿಕರು ಸಸಿಮಡಿಯಿಂದ ಅಗೆ ತೆಗೆಯುತ್ತಿದ್ದಾರೆ. ನಾಟಿ ಕೆಲಸ ಮುಕ್ತಾಯದ ಹಂತದಲ್ಲಿದೆ.
ಲವನಾಣಯ್ಯ ಕೃಷಿಕ ಬಲ್ಲಮಾವಟಿ ಗ್ರಾಮ
ಉಳುಮೆ ಮಾಡದೇ ಗದ್ದೆಗಳನ್ನು ಹಾಗೆಯೇ ಬಿಡುವುದು ಸರಿಯಲ್ಲ. ಜಿಲ್ಲೆಯ ರೈತರ ಜೀವನಾಡಿಯಾದ ಭತ್ತದ ಕೃಷಿಯನ್ನು ಆಸಕ್ತಿಯಿಂದ ಕೈಗೊಳ್ಳಬೇಕು.
ಕಾಳಯ್ಯ ರೈತ ಬೇತು ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.