ADVERTISEMENT

ಗಡಿಭಾಗದ ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ

ಕರಿಕೆ ಗ್ರಾಮಸ್ಥರ ಗೋಳು ಕೇಳೋರಿಲ್ಲ

ವಿಕಾಸ್ ಬಿ.ಪೂಜಾರಿ
Published 21 ನವೆಂಬರ್ 2019, 19:45 IST
Last Updated 21 ನವೆಂಬರ್ 2019, 19:45 IST
ಮಡಿಕೇರಿ ತಾಲ್ಲೂಕಿನ ಕರಿಗೆ – ಭಾಗಮಂಡಲ ರಸ್ತೆಯ ಸ್ಥಿತಿ
ಮಡಿಕೇರಿ ತಾಲ್ಲೂಕಿನ ಕರಿಗೆ – ಭಾಗಮಂಡಲ ರಸ್ತೆಯ ಸ್ಥಿತಿ   

ಮಡಿಕೇರಿ: ತಾಲ್ಲೂಕಿನ ಭಾಗಮಂಡಲ–ಕರಿಕೆ ಗ್ರಾಮದ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಗಡಿಭಾಗದ ವಾಹನ ಸವಾರರಿಗೆ ತೊಂದರೆ ಎದುರಾಗಿದೆ. ಕೊಡಗಿನ ಗಡಿಭಾಗದ ರಸ್ತೆಯ ಅಭಿವೃದ್ಧಿಯನ್ನೇ ಸರ್ಕಾರ ಮರೆತಿದೆ.

ಕರಿಕೆ ಗ್ರಾಮವು, ಜಿಲ್ಲಾ ಕೇಂದ್ರವಾದ ಮಡಿಕೇರಿಯಿಂದ 68 ಕಿ.ಮೀ ದೂರದಲ್ಲಿದೆ. ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗೆ ಹೊಂದಿಕೊಂಡಿದೆ. ಜತೆಗೆ, ತಲಕಾವೇರಿ ಮತ್ತು ಎಮ್ಮೆಮಾಡು, ನಾಪೋಕ್ಲು ಭಾಗದ ಪ್ರವಾಸಿ ಕೇಂದ್ರಗಳಿಗೆ ತೆರಳಲು ಇದೇ ರಸ್ತೆಯನ್ನು ಹೆಚ್ಚು ಜನರು ಅವಲಂಬಿಸಿದ್ದಾರೆ. ಅಂತರ ರಾಜ್ಯ ವ್ಯಾಪಾರ ವಹಿವಾಟು, ಸಣ್ಣಮಟ್ಟದ ಸರಕು ಸಾಗಣೆಗಳಿಗೂ ಹೆಚ್ಚು ಉಪಯೋಗವಾಗಿದೆ.

ಆದರೆ, ಈ ರಸ್ತೆ ದುಸ್ಥಿತಿಗೆ ತಲುಪಿದ್ದು ಸಾರ್ವಜನಿಕರಿಗೆ ದಿನನಿತ್ಯದ ಸಂಚಾರಕ್ಕೆ ತೊಂದರೆಯಾಗುತ್ತಿರುವುದು ಕರಿಕೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಲೋಕೋಪಯೋಗಿ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.

ADVERTISEMENT

ಗ್ರಾಮದ ಪಂಚಾಯಿತಿ ವ್ಯಾಪ್ತಿಯ ಒಟ್ಟು 16 ಕಿ.ಮೀ. ರಸ್ತೆ ಸಂಪೂರ್ಣ ಹಾಳಾಗಿದೆ. ಇದರಿಂದ ಗ್ರಾಮಸ್ಥರ ನಿತ್ಯ ಸಂಚಾರಕ್ಕೆ ತೊಂದರೆಯಾಗಿದೆ. ಶಾಲಾ ಮಕ್ಕಳಿಗೆ, ನಿತ್ಯ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು ಗುಂಡಿ ಬಿದ್ದ ರಸ್ತೆಯ ಮೂಲಕವೇ ತೆರಳಬೇಕಿದೆ ಎಂದು ಕರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಬಾಲಚಂದ್ರ ನಾಯರ್‌ ನೋವು ತೋಡಿಕೊಂಡರು.

ಕಳೆದ ಮಳೆಗಾಲದಲ್ಲಿ ರಸ್ತೆಯ ಮೇಲೆ ಅಲ್ಲಲ್ಲಿ ಮಣ್ಣು ಬಿದ್ದಿದ್ದರೂ ಇದುವರೆಗೂ ಅದನ್ನೂ ತೆರವು ಮಾಡಿಲ್ಲ. ಆದ್ದರಿಂದ, ಅಧಿಕಾರಿ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸಲು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ನಾಪೋಕ್ಲು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಎಸ್.ರಮಾನಾಥ್‌ ಆಕ್ರೋಶ ವ್ಯಕ್ತಪಡಿಸಿದರು.

‘ಮೈತ್ರಿ’ ಸರ್ಕಾರದ ಅವಧಿಯಲ್ಲಿ ಈ ಭಾಗದ ರಸ್ತೆ ಅಭಿವೃದ್ಧಿಗೆ ₹4 ಕೋಟಿ ಅನುದಾನ ಮಂಜೂರಾಗಿತ್ತು. ಇದೀಗ ಆ ಅನುದಾನ ತಡೆ ಹಿಡಿಯಲಾಗಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ನಿರಂತರ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರಮಾನಾಥ್‌ ನೋವು ತೋಡಿಕೊಂಡರು.

ರಾಜ್ಯಕ್ಕೆ ಕಳಂಕವಾದ ಕಳಪೆ ರಸ್ತೆ: ನೆರೆಯ ಕೇರಳ ರಾಜ್ಯದಲ್ಲಿ ಉತ್ತಮ ರಸ್ತೆಗಳನ್ನೇಅಲ್ಲಿನ ಸರ್ಕಾರ ನಿರ್ಮಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ರಸ್ತೆ ಅಭಿವೃದ್ಧಿ ಮಾಡದೆ ನಮ್ಮ ಜಿಲ್ಲೆ ಹಾಗೂ ರಾಜ್ಯಕ್ಕೂ ಕಳಂಕ ತಂದಿದೆ. ಇನ್ನು 2004ರಿಂದ ಕರಿಕೆ– ಭಾಗಮಂಡಲ ರಸ್ತೆಯ ವಿಸ್ತರಣೆಯೇ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಡಿಪಿಆರ್‌ ಸರ್ವೆ ಆಗಿಲ್ಲ: 2017ರಲ್ಲಿ ಕೇರಳದ ಕಾಂಞ್ಞಂಗಾಡುವಿನಿಂದ ಮಡಿಕೇರಿಯ ಕಾಟಕೇರಿ ತನಕ 110 ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರಾಷ್ಟ್ರೀಯ ರಸ್ತೆ ಅಭಿವೃದ್ಧಿ ನಿಗಮದಿಂದ ಸರ್ವೆಗೆ ಆದೇಶ ನೀಡಲಾಗಿತ್ತು. ಈ ಬಗ್ಗೆ ಕೇರಳ ರಾಜ್ಯದ ಗಡಿ ಭಾಗದವರೆಗೆ ಸರ್ವೆಯಾಗಿದೆ. ಆದರೆ, ಕರ್ನಾಟಕದಲ್ಲಿ ಸರ್ವೆ ಕಾರ್ಯ ನಡೆದಿಲ್ಲ. ಕರಿಕೆ ಗ್ರಾಮದಲ್ಲಿ ರಸ್ತೆ ಮಾತ್ರವಲ್ಲ. ಸರ್ಕಾರದ ಸೌಲಭ್ಯದ ಕೊರೆತೆಯಿಂದಲೂ ಇಲ್ಲಿನ ಜನರು ಪರದಾಡುತ್ತಿದ್ದಾರೆ. ಸಾಕಷ್ಟು ಸಂದರ್ಭದಲ್ಲಿ ಜಿಲ್ಲೆಯ ಶಾಸಕರಿಗೆ, ಸಂಸದರಿಗೆ ಇಲ್ಲಿಯ ಸಮಸ್ಯೆಯ ಬಗ್ಗೆ ತಿಳಿಸಲಾಗಿದೆ. ಆದರೂ ಅಭಿವೃದ್ಧಿಯನ್ನೇ ನಿರ್ಲಕ್ಷಿಸಿದ್ದಾರೆ ಎಂದು ಜಿಲ್ಲೆಯ ಗಡಿಭಾಗದ ಗ್ರಾಮಸ್ಥರು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.