ADVERTISEMENT

ಮಡಿಕೇರಿ: ಹೊರಬಂದ ಆಕಾಂಕ್ಷಿತರು; ನೆನಪಾದ ವಾರ್ಡ್‌!

ಮಡಿಕೇರಿ ನಗರಸಭೆಯ ಚುನಾವಣೆ ಹೊಸ್ತಿಲಲ್ಲಿ ಸ್ಪರ್ಧಿಗಳ ಉತ್ಸಾಹ

ಅದಿತ್ಯ ಕೆ.ಎ.
Published 26 ಮಾರ್ಚ್ 2021, 19:30 IST
Last Updated 26 ಮಾರ್ಚ್ 2021, 19:30 IST
ದೇಚೂರು ರಸ್ತೆಯ ಸ್ಥಿತಿ ಹೀಗಿದ್ದು, ದುರಸ್ತಿಗೆ ಕಾದಿದೆ
ದೇಚೂರು ರಸ್ತೆಯ ಸ್ಥಿತಿ ಹೀಗಿದ್ದು, ದುರಸ್ತಿಗೆ ಕಾದಿದೆ   

ಮಡಿಕೇರಿ: ಇಲ್ಲಿನ ನಗರಸಭೆಯ 23 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟವಾಗಿದ್ದು, ಶೀಘ್ರವೇ ಚುನಾವಣೆಯೂ ಘೋಷಣೆ ಆಗುವ ಎಲ್ಲ ಸಾಧ್ಯತೆಗಳಿದ್ದು, ಆಕಾಂಕ್ಷಿಗಳ ಉತ್ಸಾಹ ಕಂಡುಬರುತ್ತಿದೆ.

ಇಷ್ಟುದಿನ ಮನೆ ಸೇರಿದ್ದ ಆಕಾಂಕ್ಷಿತರು, ಈಗ ವಾರ್ಡ್‌ ಸುತ್ತಾಟ ನಡೆಸುತ್ತಿದ್ದಾರೆ. ಮಾಜಿ ನಗರಸಭೆ ಸದಸ್ಯರು ಹಾಗೂ ನೂತನವಾಗಿ ಸ್ಪರ್ಧಿಸುವ ಆಕಾಂಕ್ಷಿತರು ನಗರಸಭೆಯತ್ತ ಮುಖಮಾಡುತ್ತಿದ್ದಾರೆ. ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿರುವ ಯುವಕರು ನಗರದ ಅಲ್ಲಲ್ಲಿ ರಾಜಕೀಯ ಚರ್ಚೆ ನಡೆಸುತ್ತಿದ್ದಾರೆ.

ಇನ್ನು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಎಸ್‌ಡಿಪಿಐನಿಂದ ಸ್ಪರ್ಧಿಸಲು ಟಿಕೆಟ್‌ ನಿರೀಕ್ಷೆಯಲ್ಲಿರುವ ಹಲವು ಯುವಕರು ಉತ್ಸಾಹ ತೋರುತ್ತಿದ್ದಾರೆ. ನಗರ ಆಡಳಿತದ ರುಚಿ ಹಿಡಿದಿರುವ ಮಾಜಿಗಳು ತಮಗೇ ಟಿಕೆಟ್‌ ನೀಡಬೇಕು ಎಂದು ವರಿಷ್ಠರ ಮುಂದೆ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ. ವರಿಷ್ಠರು, ಈ ಬಾರಿ ಅಳೆದು–ತೂಗಿ ಟಿಕೆಟ್‌ ನೀಡಲಿದ್ದಾರೆಯೋ? ಅಥವಾ ತಮ್ಮ ಮತಬ್ಯಾಂಕ್‌ ಗಟ್ಟಿ ಮಾಡಿಕೊಳ್ಳಲು ಮಾಜಿಗಳಿಗೆ ಮಣೆ ಹಾಕಲಿದ್ದಾರೆಯೋ ನೋಡಬೇಕು ಎಂದು ಹಿರಿಯರ ರಾಜಕೀಯ ಮುಖಂಡರು ಹೇಳುತ್ತಾರೆ.

ADVERTISEMENT

ಎರಡು ವರ್ಷದಿಂದ ಅಧಿಕಾರಿಗಳ ಆಡಳಿತ: ಇಲ್ಲಿನ ನಗರಸಭೆಯಲ್ಲಿ ಕಳೆದೆರಡು ವರ್ಷಗಳಿಂದಲೂ ಜನಪ್ರತಿನಿಧಿಗಳ ಆಡಳಿತ ಇರಲಿಲ್ಲ. ಅಧಿಕಾರಿಗಳದ್ದೇ ದರ್ಬಾರ್‌ ಆಗಿತ್ತು. ಸ್ಥಳೀಯ ವಾರ್ಡ್‌ಗಳಿಗೆ ನಗರಸಭೆ ಆಯುಕ್ತ ರಾಮದಾಸ್‌ ಹೊರತು ಪಡಿಸಿ, ಇನ್ನಾರೂ ತೆರಳುತ್ತಿರಲಿಲ್ಲ. ಆರೋಗ್ಯ ಸಿಬ್ಬಂದಿಗಳು ಯಾವ ವಾರ್ಡ್‌ಗಳ ಜನರ ಸಮಸ್ಯೆಯನ್ನೂ ಕೇಳಿಲ್ಲ ಎಂಬುದು ಸ್ಥಳೀಯರ ಆಪಾದನೆ. ‘ಸದ್ಯದಲ್ಲೇ ಚುನಾವಣೆ ಎದುರಾಗಿ, ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿ’ ಎಂಬುದು ವಾರ್ಡ್‌ ಜನರ ಆಗ್ರಹವಾಗಿದೆ.

ಸುಂದರ ನಗರವಾದೀತೆ?:ಮಡಿಕೇರಿ ಮಂಜಿನ ನಗರಿಯೆಂದೇ ವಿಶ್ವ ಪ್ರಸಿದ್ಧಿ ಬೆಟ್ಟಗುಡ್ಡಗಳಿಂದ ಆವೃತ್ತವಾದ ಸುಂದರ ನಗರಿ. ಆದರೆ, ಇಂದಿಗೂ ಹಲವು ಸಮಸ್ಯೆಗಳಿಂದ ನಲುಗಿ ಹೋಗುತ್ತಿದೆ. ನಗರದಲ್ಲಿ ಪ್ರತಿನಿತ್ಯ ಸಂಗ್ರಹಿಸುವ ತ್ಯಾಜ್ಯವನ್ನು ಸ್ಟೋನ್ ಹಿಲ್ ಎಂಬ ಗುಡ್ಡದ ಮೇಲೆ ತಂದು ಸುರಿಯಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಘಟಕವನ್ನು ಪರ್ಯಾಯ ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂಬ ಕೂಗಿದ್ದರೂ ನಗರಸಭೆ ಆಡಳಿತಕ್ಕೆ ಇದು ಸಾಧ್ಯವಾಗಿಲ್ಲ. ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ನಾಲ್ಕು ಬಡಾವಣೆಗಳು ನಲುಗಿ ಹೋಗುತ್ತಿವೆ. ನೊಣಗಳು, ಎಫ್‌ಎಂಸಿ ಕಾಲೇಜಿಗೂ ದಾಳಿ ಇಡುತ್ತಿವೆ. ಇದರಿಂದ ಕಾಲೇಜು ವಿದ್ಯಾರ್ಥಿಗಳಿಗೆ ಪಾಠ–ಪ್ರವಚನಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಪ್ರಾಂಶುಪಾಲರೇ ದೂರಿದ್ದಾರೆ.

ಮಡಿಕೇರಿಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರಿಕೆಯಾಗುತ್ತಿದೆ. ಬೆಳಿಗ್ಗೆ 11ರ ನಂತರ, ವಾಹನ ಪಾರ್ಕ್‌ ಮಾಡಲು ಸಾಧ್ಯವಾಗುತ್ತಿಲ್ಲ. ವೈಜ್ಞಾನಿಕವಾಗಿ ಪಾರ್ಕಿಂಗ್‌ ವ್ಯವಸ್ಥೆ ಮಾಡಬೇಕು ಎಂದು ಸಾರ್ವಜನಿಕರ ಬೇಡಿಕೆಯೂ ಈಡೇರಿಲ್ಲ. ಅಪಾಯಕಾರಿ ಸ್ಥಳದಲ್ಲಿರುವ ಮನೆಗಳ ತೆರವು, ಅವರಿಗೆ ಪರ್ಯಾಯ ಸ್ಥಳದಲ್ಲಿ ವಸತಿ ಕಲ್ಪಿಸಲು ಹಿಂದಿನ ಆಡಳಿತಕ್ಕೆ ಸಾಧ್ಯವಾಗಿಲ್ಲ. ಮನೆಗಳ ದಾಖಲಾತಿ ನೀಡಲು ಅಧಿಕಾರಿಗಳು ಸತಾಯಿಸುತ್ತಾರೆ ಎಂಬ ದೂರು ಇನ್ನೂ ದೂರವಾಗಿಲ್ಲ. ಹೊಸ ಆಡಳಿತ ಮಂಡಳಿ ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.