ಮಡಿಕೇರಿ: ‘ಆರ್‌ಎಸ್‌ಎಸ್ ಒಂದು ದೇಶಭಕ್ತ ಸಂಘಟನೆ. ವಿಶಾಲವಾಗಿ ಬೆಳೆದಿರುವ ಈ ಸಂಘಟನೆಯ ಪ್ರಗತಿ ಸಹಿಸಲಾರದೇ ರಾಜ್ಯಸರ್ಕಾರ ನಿರ್ಬಂಧ ಹೇರಲು ಮುಂದಾಗಿದೆ. ಒಂದು ವೇಳೆ ನಿಷೇಧ ಹೇರಿದರೆ ದೇಶದ ಜನರು ವಿರೋಧಿಸುತ್ತಾರೆ’ ಎಂದು ಬಿಜೆಪಿ ಮುಖಂಡ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ತಿಳಿಸಿದರು.
‘ಆರ್‌ಎಸ್‌ಎಸ್ ಕೇವಲ ಒಂದು ಜಾತಿಯ ಸಂಘಟನೆಯಲ್ಲ. ಯಾರು ಬೇಕಾದರೂ ಇದರಲ್ಲಿ ಭಾಗವಹಿಸಬಹುದು. ಆರ್‌ಎಸ್‌ಎಸ್‌ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಎನ್ನುವ ಶಾಖೆಯೂ ಇದೆ. ಹಾಗಿದ್ದರೂ, ಈ ಸಂಘಟನೆಯ ಕಾರ್ಯಚಟುವಟಿಕೆಯ ಮೇಲೆ ನಿರ್ಬಂಧ ಹೇರಲು ಹೊರಟಿರುವುದು ಸರಿಯಲ್ಲ’ ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
‘ಪ್ರಧಾನಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಗೃಹ ಸಚಿವರು ಎಲ್ಲರೂ ಆರ್‌ಎಸ್‌ಎಸ್‌ನಿಂದ ಬಂದವರು. ಹೀಗಿದ್ದರೂ, ಈ ಸಂಘಟನೆಯ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಇದೊಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ’ ಎಂದು ಹರಿಹಾಯ್ದರು.
‘ಈ ಹಿಂದೆ 1975 ಮತ್ತು 1992ರಲ್ಲಿ ಆರ್‌ಎಸ್‌ಎಸ್ ಅನ್ನು ನಿಷೇಧ ಮಾಡಲಾಗಿತ್ತು. ಆದರೆ, ಇದಕ್ಕೆಲ್ಲ ಜಗ್ಗದೇ ಮತ್ತೆ ಬಲಿಷ್ಠವಾಗಿ ನಿಂತಿದೆ. ಎಲ್ಲ ಜಾತಿ, ವರ್ಗದವರನ್ನೂ ಒಳಗೊಂಡಿರುವ ಆರ್‌ಎಸ್‌ಎಸ್ ಅನ್ನು ನೋಡಿ ಕಾಂಗ್ರೆಸ್‌ನವರಲ್ಲಿ ಭಯ ಆರಂಭವಾಗಿದೆ’ ಎಂದರು.
‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಸರ್ಕಾರದ ಬಳಿ ಹಣ ಇಲ್ಲ. ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಅನುದಾನ ನೀಡಲೂ ಆಗದೇ ಅಭಿವೃದ್ದಿ ಶೂನ್ಯವಾಗಿದೆ. ಈ ವಿಚಾರವನ್ನೆಲ್ಲ ಮರೆ ಮಾಡಲು ಆರ್‌ಎಸ್‌ಎಸ್ ನಿಷೇಧದಂತಹ ಮಾತುಗಳನ್ನಾಡುತ್ತಿದ್ದಾರೆ. ಇದನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ಕೊಡಲಿ’ ಎಂದು ಸಲಹೆ ನೀಡಿದರು.
ಪ್ರಿಯಾಂಕ್ ಖರ್ಗೆ ಅವರು ತಮ್ಮ ತಂದೆಯಿಂದಲೇ ಸಚಿವರಾದವರು. ಅವರಿಗೆ ನಿಜಕ್ಕೂ ಶಕ್ತಿ ಇದ್ದರೆ ತಮ್ಮ ತಂದೆಯನ್ನು ಮುಖ್ಯಮಂತ್ರಿ ಮಾಡಲಿ ಎಂದು ಸವಾಲೆಸೆದರು.
‘ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುತ್ತಿರುವ ಕಲಬುರಗಿ ಜಿಲ್ಲೆ ಎಸ್‌ಎಸ್ಎಲ್‌ಸಿ, ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದುಕೊಳ್ಳುತ್ತಿದೆ. ಒಂದು ವೇಳೆ ಶೈಕ್ಷಣಿಕವಾಗಿ ಜನರು ಮುಂದುವರಿದರೆ ತಮ್ಮ ಸ್ಥಾನಕ್ಕೆ ಕುಂದುಂಟಾಗುತ್ತದೆ ಎಂಬ ಭಯ ಅವರಲ್ಲಿ ಆವರಿಸಿದೆ. ರಸ್ತೆಯ ಪರಿಸ್ಥಿತಿಯಂತೂ ತೀರಾ ಶೋಚನೀಯವಾಗಿದೆ. ಅವರು ಆರ್‌ಎಸ್‌ಎಸ್ ನಿಷೇಧದಂತಹ ವ್ಯರ್ಥ ಪ್ರಯತ್ನಗಳನ್ನು ಬಿಟ್ಟು ತಮ್ಮ ತವರು ಜಿಲ್ಲೆಯ ಪ್ರಗತಿಯ ಕಡೆಗೆ ಗಮನಕೊಡಲಿ’ ಎಂದು ಸಲಹೆ ನೀಡಿದರು.
ಬಿಜೆಪಿಯ ಕೊಡಗು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಜೈನಿ, ನೆಲ್ಲೀರ ಚಲನ್, ವಿ.ಕೆ.ಲೋಕೇಶ್, ವಕ್ತಾರ ತಳೂರು ಕಿಶೋರ್ ಕುಮಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.