ನಾಪೋಕ್ಲು: ಗ್ರಾಮೀಣ ಕ್ರೀಡಾಕೂಟಗಳು ದೇಸಿ ಕ್ರೀಡೆಗಳು ಜೀವಂತವಾಗಿ ಉಳಿಯಲು ಹಾಗೂ ಗ್ರಾಮೀಣ ಜನರಲ್ಲಿ ಸಾಮರಸ್ಯ ಮೂಡಲು ಸಹಕಾರಿಯಾಗಿವೆ ಎಂದು ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.
ಮರಂದೋಡು ಶಾಲಾ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಕುಂಜಿಲ -ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಷಿಕ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.
ವರ್ಷದಲ್ಲಿ ಒಂದು ಬಾರಿ ಎಲ್ಲಾ ಗ್ರಾಮಸ್ಥರು ಒಂದೆಡೆ ಸೇರಿ ಕ್ರೀಡಾಕೂಟದಲ್ಲಿ ಭಾಗವಹಿಸುವುದರಿಂದ ಗ್ರಾಮದಲ್ಲಿ ಒಗ್ಗಟ್ಟು ನೆಲೆಸುವುದು ಎಂದರು. ಈ ಭಾಗದಲ್ಲಿ ಕ್ರೀಡಾಂಗಣ ನಿರ್ಮಿಸಲು ಸಹಕಾರ ನೀಡಲಾಗುವುದು. ಹಲವು ರಸ್ತೆಗಳ ಅಭಿವೃದ್ಧಿಗೆ ಬೇಡಿಕೆ ಬಂದಿದ್ದು ಹಂತ ಹಂತವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.
ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ವಿರೋಧಪಕ್ಷದವರ ಅಪಪ್ರಚಾರಕ್ಕೆ ಕೊಡಗಿನ ಪ್ರಜ್ಞಾವಂತ ಜನರು ಮೋಸ ಹೋಗುವುದಿಲ್ಲ ಎಂದರು.
ಅಧ್ಯಕ್ಷತೆಯನ್ನು ಕ್ರೀಡಾಕೂಟದ ಅಧ್ಯಕ್ಷ ಚೊಯಮಾಡಂಡ ಹರೀಶ್ ಮೊಣ್ಣಪ್ಪ ವಹಿಸಿದ್ದರು. ಗ್ರಾಮಸ್ಥರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಿದ್ದು ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಿವೃತ್ತ ಸೈನಿಕರಾದ ಸಾಬು, ವಿಜಯ, ಸೂರಿ ಮುತ್ತಪ್ಪ, ಕುಂಜಿಲ -ಕಕ್ಕಬೆ ಗ್ರಾಮ ಪಂಚಾಯಿತಿ ಸದಸ್ಯೆ ಕೆ.ಆರ್. ಲೀಲಾವತಿ, ಕ್ರೀಡಾಕೂಟದ ಸಮಿತಿ ಕಾರ್ಯದರ್ಶಿ ಮುಕ್ಕಾಟಿರ ಅಜಿತ್, ಖಜಾಂಚಿ ಚಂಡಿರ ರಾಲಿ ಗಣಪತಿ, ಕೆಡಿಪಿ ಸದಸ್ಯ ಬಾಚಮಾಂಡ ಲವ ಚಿಣ್ಣಪ್ಪ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅರ್ತಾಂಡ ಶೈಲಾ ಕುಟ್ಟಪ್ಪ, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ಹಾಗೂ ಕ್ರೀಡಾ ಪ್ರೇಮಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.