ADVERTISEMENT

ಉತ್ತರ ಕೊಡಗಿನಲ್ಲಿ ಮೇಳೈಸಲಿದೆ ಸಬ್ಬಮ್ಮ ದೇವರ ಸುಗ್ಗಿ ಉತ್ಸವ

ಡಿ.ಪಿ.ಲೋಕೇಶ್
Published 14 ಏಪ್ರಿಲ್ 2025, 7:13 IST
Last Updated 14 ಏಪ್ರಿಲ್ 2025, 7:13 IST
ಸೋಮವಾರಪೇಟೆ ತಾಲ್ಲೂಕಿನ ತೋಳೂರುಶೆಟ್ಟಳ್ಳಿ ಸಬ್ಬಮ್ಮ ದೇವರ ಸುಗ್ಗಿಕಟ್ಟೆ.
ಸೋಮವಾರಪೇಟೆ ತಾಲ್ಲೂಕಿನ ತೋಳೂರುಶೆಟ್ಟಳ್ಳಿ ಸಬ್ಬಮ್ಮ ದೇವರ ಸುಗ್ಗಿಕಟ್ಟೆ.   

ಸೋಮವಾರಪೇಟೆ: ಏಪ್ರಿಲ್ ತಿಂಗಳು ಪ್ರಾರಂಭವಾಯಿತೆಂದರೆ, ಉತ್ತರ ಕೊಡಗಿನಲ್ಲಿ ಸುಗ್ಗಿ ಹಬ್ಬದ ಸಂಭ್ರಮ ಗರಿಗೆದರುತ್ತದೆ.

ಪ್ರತಿ ಗ್ರಾಮಗಳಲ್ಲಿ ತಿಂಗಳ ಮೊದಲ ವಾರದಿಂದಲೇ ಸುಗ್ಗಿ ಹಬ್ಬಕ್ಕೆ ಕುಟುಂಬಗಳು ಸಿದ್ಧತೆಗಳು ನಡೆಯುತ್ತವೆ. ಜಾನಪದದ ಪ್ರಮುಖ ಅಂಗವಾದ ವಾರ್ಷಿಕ ಸುಗ್ಗಿ ಉತ್ಸವಗಳು ಮಲೆನಾಡು ಪ್ರದೇಶದಲ್ಲಿ, ಮುಂದಿನ ಸಾಲಿನ ಮಳೆಗಾಲ ಪ್ರಾರಂಭವಾಗಿ ಗ್ರಾಮೀಣ ಭಾಗದ ಜನರು ಕೃಷಿ ಕಾರ್ಯಗಳಲ್ಲಿ ಯಾವುದೇ ತೊಂದರೆಯಾಗಬಾರದು, ಉತ್ತಮ ಮಳೆಯಾಗಿ ಗ್ರಾಮ ಸುಭಿಕ್ಷೆಯಿಂದಿರಬೇಕು, ಸಮೃದ್ಧ ಫಸಲು ಕೈಸೇರಬೇಕು. ಗ್ರಾಮದಲ್ಲಿ ರೋಗರುಜಿನಗಳು ಬರಬಾರದು ಎಂದು ಗ್ರಾಮದ ಕಲ್ಯಾಣಕ್ಕಾಗಿ ಗ್ರಾಮದೇವರಿಗೆ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಸಮಯವಾಗಿದೆ.

ತಾಲ್ಲೂಕಿನ ಕೂತಿ ಮತ್ತು ತೋಳೂರುಶೆಟ್ಟಳ್ಳಿ ಗ್ರಾಮಗಳಲ್ಲಿ ನಡೆಯುವ ಸುಗ್ಗಿ ಉತ್ಸವ ಪ್ರಮುಖವಾದದ್ದು. ಉಳಿದಂತೆ, ಕುಮಾರಳ್ಳಿ, ತಾಕೇರಿ, ಕಿರಗಂದೂರು, ಚೌಡ್ಲು, ಬೀದಳ್ಳಿ, ಕಿಬ್ಬೆಟ್ಟ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ನಡೆಯುವ ಸುಗ್ಗಿ ಉತ್ಸವದಲ್ಲಿಯೂ ಶ್ರೀ ಸಬ್ಬಮ್ಮ ದೇವರನ್ನೇ ಪೂಜಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ADVERTISEMENT

ಈ ವೇಳೆ ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳನ್ನು, ನೆಂಟರಿಷ್ಟರನ್ನು ಸುಗ್ಗಿ ಹಬ್ಬಕ್ಕೆ ಮನೆಗೆ ಆಹ್ವಾನಿಸಲಾಗುತ್ತದೆ. ನಗರ ಪ್ರದೇಶಗಳಲ್ಲಿ ನೌಕರಿ ಮಾಡುವ ಗ್ರಾಮದ ಯುವಕ-ಯುವತಿಯರು ತಮ್ಮೂರಿಗೆ ಹೊರಡುವುದಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಾರೆ.

ತಾಲ್ಲೂಕಿನ ನಗರಳ್ಳಿ ಗ್ರಾಮದಲ್ಲಿ ನಡೆಯುವ ವಾರ್ಷಿಕ ಸುಗ್ಗಿ, ಕೂತಿ ನಾಡು ಶ್ರೀ ಸಬ್ಬಮ್ಮ ದೇವಿಯ (ಲಕ್ಷ್ಮೀ)ಉತ್ಸವ ಎಂದೇ ಹೆಸರಾಗಿದೆ. ಸಮೀಪದ ತೋಳೂರು ಶೆಟ್ಟಳ್ಳಿ ಸಬ್ಬಮ್ಮ ದೇವರ ವಾರ್ಷಿಕ ದೊಡ್ಡ ಸುಗ್ಗಿ ವಿಜೃಂಭಣೆಯಿಂದ ನಡೆಯುತ್ತದೆ.
ಏಪ್ರಿಲ್ ಕೊನೆ ವಾರದಲ್ಲಿ ಅಥವಾ ಮೇ ಮೊದಲ ವಾರದಲ್ಲಿ ಚೌಡ್ಲು ಗ್ರಾಮದ ಸುಗ್ಗಿ ಉತ್ಸವ ನಡೆಯುತ್ತದೆ.

ವರ್ಷಂಪ್ರತಿ ಸುಗ್ಗಿಕಟ್ಟೆಯಲ್ಲಿ ಒಂದು ವಾರಗಳ ಕಾಲ ಸುಗ್ಗಿ ಉತ್ಸವ ನಡೆಯುತ್ತದೆ. ವಿಶೇಷವಾಗಿ ಚೌಡ್ಲು, ನಗರೂರು, ಬಳಗುಂದ, ಕಿಬ್ಬೆಟ್ಟ, ಕಲ್ಕಂದೂರು, ಮಾಟ್ನಳ್ಳಿ, ಬಿಳಕಿಕೊಪ್ಪ, ಆದಿಗಳಲೆ ಗ್ರಾಮಸ್ಥರು ಸುಗ್ಗಿ ಉತ್ವವದಲ್ಲಿ ಭಾಗವಹಿಸುತ್ತಾರೆ.

ಸುಗ್ಗಿ ಉತ್ಸವದಂದು ಗ್ರಾಮದಲ್ಲಿರುವ ಪ್ರಾಚೀನ ಶಾಸನಗಳು, ವೀರಗಲ್ಲು, ಮಾಸ್ತಿ ಕಲ್ಲು ಹಾಗೂ ಸ್ಮಾರಕಗಳಿಗೆ ಪೂಜೆ ಸಲ್ಲಿಸುತ್ತಾರೆ. ಚೌಡ್ಲು ಗ್ರಾಮವನ್ನು ಹೆಚ್ಚಿನ ಕಾಲ ಸಾಮಂತ ರಾಜರು ಆಳ್ವಿಕೆ ಮಾಡಿರುವ ಹಿನ್ನೆಲೆಯಲ್ಲಿ, ಯುದ್ದ ಮತ್ತು ಸೈನಿಕರ ಧೈರ್ಯ ಸಾಹಸಗಳನ್ನು ಬಿಂಬಿಸುವ ನೃತ್ಯ ಪ್ರಕಾರಗಳು ಸುಗ್ಗಿ ಉತ್ಸವದಲ್ಲಿ ಜನರನ್ನು ಆಕರ್ಷಿಸುತ್ತವೆ.

ಇದರೊಂದಿಗೆ ಯಡೂರು, ಹಾನಗಲ್ಲು ಶೆಟ್ಟಳ್ಳಿ, ಕುಮಾರಳ್ಳಿ ಸುಗ್ಗಿ, ಶನಿವಾರಸಂತೆ ಸಮೀಪದ ಬೆಂಬಳೂರು ಗ್ರಾಮದ ಸುಗ್ಗಿ ಸೇರಿದಂತೆ ತಾಲ್ಲೂಕಿನ ಸೇರಿದಂತೆ ವಿವಿಧೆಡೆಗಳಲ್ಲಿ ಸುಗ್ಗಿ ಉತ್ಸವ ನಡೆಯುತ್ತದೆ.

ಪ್ರಮುಖ ಹಬ್ಬವಾಗಿರುವ ಸುಗ್ಗಿ ಉತ್ಸವಕ್ಕೆ ಈಗಾಗಲೇ ಕೂತಿ ಸುಗ್ಗಿ ಉತ್ಸವಕ್ಕೆ ಚಾಲನೆ ನಿಡಲಾಗಿದೆ. ಏ. 20 ಮತ್ತು 21ರಂದು ಕೂತಿ ಗ್ರಾಮದ ಸುಗ್ಗಿಕಟ್ಟೆಯಲ್ಲಿ ಉತ್ಸವ ನಡೆಯಲಿದೆ.
ಜಗದೀಶ್ ಅಧ್ಯಕ್ಷರು ಕೂತಿ ಸಬ್ಬಮ್ಮ ದೇವರ ಸಮಿತಿ.
ಶ್ರೀ ಸಬ್ಬಮ್ಮ ದೇವಿಯನ್ನು ಪ್ರಕೃತಿ ಅರಾಧನೆ ಮೂಲಕ ಪೂಜಿಸಲಾಗುತ್ತದೆ. ರೈತಾಪಿ ವರ್ಗವನ್ನು ರಕ್ಷಣೆ ಮಾಡುತ್ತಿರುವ ತಾಯಿ ಸಬ್ಬಮ್ಮ ಸುಗ್ಗಿ ಉತ್ಸವ ಏ. 24 ಮತ್ತು 25ರಂದು ನಡೆಯಲಿದೆ.
ರಾಜಗೋಪಲ್ ಅಧ್ಯಕ್ಷರು ಸಬ್ಬಮ್ಮ ದೇವರ ಸಮಿತಿ ತೋಳೂರುಶೆಟ್ಟಳ್ಳಿ.

15 ದಿನಗಳ ಕಾಲ ಕಟ್ಟುನಿಟ್ಟಿನ ಆಚರಣೆ

ಸುಗ್ಗಿ ಸಾರು (ಕಟ್ಟುನಿಟ್ಟಿನ ಅಚರಣೆಯ ಪದ) ಪ್ರಾರಂಭವಾದಂತೆ 15 ದಿನಗಳ ಕಾಲ ಗ್ರಾಮೀಣ ಭಾಗಗಳಲ್ಲಿ ಕಟ್ಟುನಿಟ್ಟಿನ ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಈ ದಿನಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗದಂತೆ ಎಚ್ಚರ ವಹಿಸುತ್ತಾರೆ. ತಾವು ಮಾಡುವ ತಪ್ಪನ್ನು ದೇವಿ ಕ್ಷಮಿಸುವುದಿಲ್ಲ ಎಂಬ ಪ್ರತೀತಿ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಸುಗ್ಗಿ ಪ್ರಾರಂಭವಾದಂತೆ ರೈತರು ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ. ‘ಹಸಿ ಕಡಿಯಬಾರದು ಒಣಗು ಮುರಿಯಬಾರದು’ ಎಂಬ ಕಟ್ಟುಪಾಡು ಇದೆ. ಯಾರು ಹಸಿ ಮರಗಳನ್ನು ಕಡಿಯುವುದಿಲ್ಲ. ಒಣಗಿದ ಕಡ್ಡಿಗಳನ್ನು ಮುರಿಯುವುದಿಲ್ಲ. ಮನೆಯಲ್ಲಿ ಹೆಂಚಿನಲ್ಲಿ ರೊಟ್ಟಿ ಸುಡುವಂತಿಲ್ಲ. ಸೂರ್ಯ ಉದಯಿಸಿ ಸಂಜೆ ನಕ್ಷತ್ರಗಳು ಕಾಣುವ ತನಕ ಈ ನಿಯಮ ಚಾಲ್ತಿಯಲ್ಲಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.