
ಮಡಿಕೇರಿ: ‘ಆದಾಯ ತೆರಿಗೆ ಸಲ್ಲಿಕೆಯ ನೆಪದಲ್ಲಿ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸುವುದು ಸರಿಯಲ್ಲ. ಬಡವರಿಗೆ ನ್ಯಾಯಯುತವಾಗಿ ಸಿಗಬೇಕಾದ ದವಸ ಧಾನ್ಯವನ್ನು ಕಸಿಯದಿರಿ’ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ದ ಜಿಲ್ಲಾ ಘಟಕದ ಅಧ್ಯಕ್ಷ ಅಮೀನ್ ಮೊಹಿಸಿನ್ ಮನವಿ ಮಾಡಿದರು.
ಸರ್ಕಾರ ಒಂದೆಡೆ ವಿಶೇಷ ಆರ್ಥಿಕ ದುರ್ಬಲ ವರ್ಗದ ಆರ್ಥಿಕ ಮಿತಿ ₹ 8 ಲಕ್ಷಕ್ಕೆ ನಿಗದಿ ಮಾಡಿದ್ದರೆ, ಮತ್ತೊಂದೆಡೆ, ಬಿಪಿಎಲ್ ಪಡಿತರ ಚೀಟಿ ಪಡೆಯಲು ₹ 1.25 ಲಕ್ಷ ಆದಾಯ ನಿಗದಿ ಮಾಡಿದೆ. ಇದು ನಿಜಕ್ಕೂ ವಿಪರ್ಯಾಸ ಮಾತ್ರವಲ್ಲ, ನಾಗರಿಕ ಸೇವೆಯ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
ಜಿಲ್ಲೆಯಲ್ಲಿ ಈವರೆಗೆ 4,500 ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಕೂಡಲೇ ರದ್ದುಗೊಳಿಸಿದ ಎಲ್ಲ ಬಿಪಿಎಲ್ ಕಾರ್ಡ್‌ಗಳನ್ನೂ ಮರಳಿ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ಕೊಡಗು ಜಿಲ್ಲೆಗೆ ₹ 500 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್, ಪ್ರವಾಸೋದ್ಯಮ ಅಭಿವೃದ್ಧಿಗೆಂದು ₹ 2,500 ಕೋಟಿ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಬಡವರಿಗೆ ಬೇಕಾಗಿರುವ ರೈಲು ಸಂಪರ್ಕವನ್ನು ಕೇಂದ್ರ ಹಾಗೂ ರಾಜ್ಯದ ಪ್ರತಿಷ್ಠೆಯ ಕಿತ್ತಾಟದಿಂದ ಕೈ ಬಿಡಲಾಗಿದೆ. ಈ ಬಜೆಟ್‌ನಲ್ಲಿ ಕೊಡಗಿಗೆ ರೈಲು ಸಂಪರ್ಕಕ್ಕಾಗಿ ಬೇಕಿರುವ ಅನುದಾನವನ್ನು ರಾಜ್ಯಸರ್ಕಾರ ಮೀಸಲಿಟ್ಟು ಪ್ರಕ್ರಿಯೆ ಪ್ರಾರಂಭಿಸಬೇಕು. ಸಂಸದರು ಕೇಂದ್ರದೊಂದಿಗೆ ಚರ್ಚಿಸಿ ಸಹಕರಿಸಬೇಕು ಎಂದು ಕೋರಿದರು.
ತುರ್ತು ಆರೋಗ್ಯ ಸೇವೆಗಾಗಿ ಜಿಲ್ಲೆಗೆ ಏರ್ ಆಂಬ್ಯುಲೆನ್ಸ್ ನೀಡಬೇಕು. ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಅನುದಾನ ಮೀಸಲಿಡಬೇಕು. ವನ್ಯಜೀವಿ– ಮಾನವ ಸಂಘರ್ಷ ನಿಯಂತ್ರಣಕ್ಕೆ ವಿಶೇಷ ಅನುದಾನ ನೀಡಿ, ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.
ಕಾವೇರಿ ನದಿ ಕಲುಷಿತಗೊಳ್ಳುವುದನ್ನು ತಡೆಗಟ್ಟಲು ಯೋಜನೆ ರೂಪಿಸಬೇಕು. ರೈತರ ಭೂಮಿಯನ್ನು ‘ಸಿ ಮತ್ತು ಡಿ’ ಗೆ ತಂದು ಸೆಕ್ಷನ್ 4ರ ಅಡಿಯಲ್ಲಿ ಸರ್ವೆಗೆ ಮುಂದಾಗಿರುವ ಪ್ರಕ್ರಿಯೆಯನ್ನು ಕೈ ಬಿಟ್ಟು ಸಮಸ್ಯೆ ನಿವಾರಣೆ ಆಗುವವರೆಗೂ ನೊಂದ ರೈತರಿಗೆ ₹ 25 ಸಾವಿರ ಮಾಸಾಶನ ಜಾರಿಗೊಳಿಸಬೇಕು. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ₹ 15 ಸಾವಿರ ಕೋಟಿ ಮೀಸಲಿಡಬೇಕು ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ಎಂ.ಕೆ.ಮನ್ಸೂರ್ ಆಲಿ ಮಾತನಾಡಿ, ಜಿಲ್ಲೆಯಲ್ಲಿ ಪಾಸ್ ಪೋರ್ಟ್ ಕಚೇರಿ ಆರಂಭಿಸಬೇಕು, ಮಳೆಹಾನಿ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳನ್ನು ಅರ್ಹರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ. ಶಾಸಕರು ಹಾಗೂ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಪರಿಹಾರ ಸೂಚಿಸಬೇಕ ಎಂದು ಮನವಿ ಮಾಡಿದರು.
ಪಕ್ಷದ ಕಾರ್ಯದರ್ಶಿ ಮೇರಿ ವೇಗಸ್, ನಗರಾಧ್ಯಕ್ಷ ಮೊಹಮ್ಮದ್ ಅಲಿ ಹಾಗೂ ಸದಸ್ಯರಾದ ಅಬ್ದುಲ್ ಅಡ್ಕಾರ್, ಜಲೀಲ್ ಭಾಗವಹಿಸಿದ್ದರು.
ನಗರಸಭೆಗೆ ಮುತ್ತಿಗೆ; ಎಚ್ಚರಿಕೆ
ಮಡಿಕೇರಿ ನಗರದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಿರಲಿ ಇರುವ ಸಮಸ್ಯೆಗಳನ್ನು ಪರಿಹರಿಸಲೂ ನಗರಸಭೆಗೆ ಸಾಧ್ಯವಾಗಿಲ್ಲ. ಇನ್ನು ಮುಂದೆಯೂ ಸ್ಪಂದಿಸದೇ ಇದ್ದಲ್ಲಿ ಶೀಘ್ರದಲ್ಲೇ ನಗರಸಭೆ ಮುತ್ತಿಗೆ ಹಾಕಲಾಗುವುದು ಎಂದು ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ನಗರಸಭೆಯ ವಿರೋಧ ಪಕ್ಷದ ನಾಯಕ ಅಮೀನ್ ಮೊಹಿಸಿನ್ ಎಚ್ಚರಿಕೆ ನೀಡಿದರು. ಮಡಿಕೇರಿ ನಗರದ ಬಹುತೇಕ ರಸ್ತೆಯ ಎರಡು ಬದಿಗಳಲ್ಲಿ ಅಮೃತ್ ೨.೦ ನೀರಿನ ಪೈಪ್ ಅಳವಡಿಸಲು ಅಗೆದಿದ್ದು ನಗರ ಪೂರ್ತಿ ದೂಳು ಆವರಿಸಿಕೊಂಡಿದೆ. ಇದರಿಂದ ಜನರು ಅನಾರೋಗ್ಯಕ್ಕೆ ಒಳಗಾಗುವ ಆತಂಕವಿದೆ. ಹೆಚ್ಚಿನ ರಸ್ತೆಗಳು ಸಂಚರಿಸಲು ಸಾಧ್ಯವಾಗದ ಸ್ಥಿತಿಯಲ್ಲಿವೆ. ಪೈಪ್ ಅಳವಡಿಸಿದ ನಂತರ ಡಾಂಬರೀಕರಣ ಮಾಡಿ ಜನರಿಗೆ ಅನುಕೂಲ ಕಲ್ಪಿಸಿಲ್ಲ. ಆಡಳಿತ ಪಕ್ಷ ಕಳೆದ ಹತ್ತು ತಿಂಗಳಿನಲ್ಲಿ ಕೇವಲ 4 ಸಾಮಾನ್ಯ ಸಭೆಯನ್ನು ನಡೆಸಿದೆ. 4 ಸ್ಥಾಯಿ ಸಮಿತಿ ರಚನೆಯಾಗಿ 2 ತಿಂಗಳಾದರೂ ಒಂದೇ ಒಂದು ಸಭೆ ಕರೆಯಲಿಲ್ಲ. ಕಳೆದ 5 ತಿಂಗಳು ಆಡಳಿತ ನಡೆಸಿದ ಬಿ.ಜೆ.ಪಿ ಪಕ್ಷ ನಗರವನ್ನು ಅಭಿವೃದ್ಧಿ ಪಡಿಸುವ ಸುವರ್ಣ ಅವಕಾಶವನ್ನು ಕಳೆದುಕೊಂಡಿದೆ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.