
ಸೋಮವಾರಪೇಟೆ: ಹಿರಿಯ ನಾಗರಿಕರು ಇಲಾಖೆಯೊಂದಿಗೆ ಎಲ್ಲ ರೀತಿಯ ಸಹಕಾರ ನೀಡಿದಲ್ಲಿ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ. ವಿಮಲ ತಿಳಿಸಿದರು.
ಮಹಿಳಾ ಸಮಾಜದ ಸಭಾಂಗಣದಲ್ಲಿ ಭಾನುವಾರ ನಡೆದ ತಾಲ್ಲೂಕು ಹಿರಿಯ ನಾಗರಿಕರ ಸೇವಾ ಟ್ರಸ್ಟ್‌ನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರಿಗೆ ಯಾವುದೇ ಸಮಸ್ಯೆಗಳಾಗದಂತೆ ಸಾಕಷ್ಟು ಯೋಜನೆಗಳನ್ನು ನೀಡುತ್ತಿವೆ. 60 ವರ್ಷ ದಾಟಿದ ಎಲ್ಲರೂ ಸೇವಾಸಿಂಧು ಕೇಂದ್ರಗಳಲ್ಲಿ ತಮ್ಮ ಸೂಕ್ತ ದಾಖಲಾತಿಗಳನ್ನು ನೀಡಿ ನೋಂದಣಿ ಮಾಡಿಸಿ ಯೋಜನೆಗಳನ್ನು ಪಡೆಯಬಹುದು. ಕೆಲವು ಕಾನೂನುಗಳ ಮಾಹಿತಿಗಳನ್ನು ಹಿರಿಯರು ಪಡೆದಲ್ಲಿ ತಮ್ಮ ಹಕ್ಕುಬಾಧ್ಯತೆಗಳನ್ನು ತಿಳಿಯಬಹುದು. ಈ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಮಾಡಿದ್ದು, ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಹಿರಿಯರಿಗೆ ಮೊದಲ ಆದ್ಯತೆ ನೀಡಬೇಕೆಂದು ಸರ್ಕಾರ ಕಾನೂನು ಜಾರಿ ಮಾಡಿದೆ. ಇದರಿಂದಾಗಿ ಯಾರೂ ಸರತಿ ಸಾಲಿನಲ್ಲಿ ನಿಂತು ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಯಾರೇ ಆದರೂ ಹಿರಿಯನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಅವರಿಗೆ ಗೌರವ ನೀಡುವ ಮೂಲಕ, ಅವರ ಜೀವನಕ್ಕೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಕಾಣಬೇಕು. ಹಿರಿಯರ ಜೀವನಕ್ಕೆ ತೊಂದರೆಯಾದಲ್ಲಿ ಅವರು ದೂರು ನೀಡಿದಲ್ಲಿ, ಅಂತಹವರ ಮೇಲೆ 2007ರ ಕಾನೂನಿನಂತೆ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಸಮಸ್ಯೆಗಳಾದಲ್ಲಿ ಸರ್ಕಾರದ ಸಹಾಯವಾಣಿ 1090ಗೆ ಕರೆ ಮಾಡಿದಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೆ.ಜಿ. ಸುರೇಶ್ ಮಾತನಾಡಿ, ಟ್ರಸ್ಟ್ ಮೂಲಕ ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ಹಲವು ಕಾರ್ಯಕ್ರಮಗಳನ್ನು ಮಾಡಲು ಯೋಜನೆ ಮಾಡಿಕೊಂಡಿದ್ದು ಎಲ್ಲ ಸದಸ್ಯರು ಕೈ ಜೋಡಿಸಬೇಕು. ಇದರೊಂದಿಗೆ ಟ್ರಸ್ಟ್ ಸದಸ್ಯರು ಮೃತಪಟ್ಟಲ್ಲಿ ಅವರಿಗೆ ಹಣಕಾಸಿನ ನೆರವು ನೀಡುವ ಉದ್ದೇಶದಿಂದ ಡೆತ್ ಫಂಡ್ ಸ್ಥಾಪಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಟ್ರಸ್ಟ್ ಹಿರಿಯ ಸದಸ್ಯರಾದ ಜಿ.ಎಸ್. ಪ್ರಭುದೇವ್ ಮತ್ತು ಎಂ.ಟಿ. ದಾಮೋಧರ್ ಅವರನ್ನು ಸನ್ಮಾನಿಸಲಾಯಿತು. 2026ರ ವರ್ಷದ ನೂತನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಟ್ರಸ್ಟ್ ಉಪಾಧ್ಯಕ್ಷ ಸಿ.ಕೆ. ಮಲ್ಲಪ್ಪ, ಕಾರ್ಯದರ್ಶಿ ಬಿ.ಎಂ. ಶ್ರೀಧರ್, ಸಹಕಾರ್ಯದರ್ಶಿ ಎ.ಎಂ. ಆನಂದ, ಖಜಾಂಚಿ ಜಿ.ಆರ್. ಹಾಲಪ್ಪ, ನಿರ್ದೇಶಕುರಗಳಾದ ಎಸ್.ಪಿ. ಪ್ರಸನ್ನ, ಎಚ್.ಸಿ. ಚಂಗಪ್ಪ, ಬಿ.ಬಿ. ಮೋಹನ್, ಎಸ್.ಎಂ. ಸಣ್ಣಪ್ಪ, ಎಸ್.ಎಂ. ಬೆಳ್ಳಿಯಪ್ಪ, ಎಸ್.ಬಿ. ನಂಜಪ್ಪ. ಟಿ.ಕೆ. ಮಾಚಯ್ಯ, ಎಚ್.ಎಸ್. ವರಲಕ್ಷ್ಮೀ, ಪಿ.ಕೆ. ಲಕ್ಷ್ಮೀ, ಕೆ.ಎಸ್. ಶ್ರೀಕಂಠ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.