ಗೋಣಿಕೊಪ್ಪಲು: ‘ಕಿಗ್ಗಟ್ಟ್ ನಾಡ್ ಹಿರಿಯ ನಾಗರಿಕ ವೇದಿಕೆ ಮಹಾಸಭೆಯನ್ನು ಸೆ 22 ರಂದು ಪೊನ್ನಂಪೇಟೆ ಇಗ್ಗುತ್ತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಸಲಾಗುವುದು’ ಎಂದು ವೇದಿಕೆ ಅಧ್ಯಕ್ಷ ಕೊಟ್ಟ್ ಕತ್ತೀರ ಪಿ. ಸೋಮಣ್ಣ ಹೇಳಿದರು.
ನಾಗರಿಕ ವೇದಿಕೆ ಸಭೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10 ಗಂಟೆಗೆ ಸಭೆ ಆರಂಭಗೊಳ್ಳಲಿದೆ. ಎಸ್ಎಸ್ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವೇದಿಕೆ ಸದಸ್ಯರ ಮೊಮ್ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.
‘ಇದೇ ಸಂದರ್ಭದಲ್ಲಿ ಸಮಾಜ ಸೇವೆಯಲ್ಲಿ ಸುದೀರ್ಘವಾಗಿ ತೊಡಗಿಕೊಂಡಿರುವ ವ್ಯಕ್ತಿಗೆ ‘ಕಿಗ್ಗಟ್ಟ್ ನಾಡ್ ಮ್ಯಾನ್ ಆಫ್ ದ ಇಯರ್’ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಸರ್ವೆ ಇಲಾಖೆಯಲ್ಲಿ ಎಡಿಎಲ್ಆರ್ ಆಗಿ ನಿವೃತ್ತಿ ಹೊಂದಿರುವ ಅಜ್ಜಿಕುಟ್ಟೀರ ಬಿ.ಭೀಮಯ್ಯ ಅವರಿಗೆ ಈ ಗೌರವ ನೀಡಲಾಗುವುದು. ಮಹಾಸಭೆಗೆ ವಿಶೇಷ ಆಹ್ವಾನಿತರಾಗಿ ಚೆಕ್ಕೇರ ಪೊನ್ನು ಪೂಣಚ್ಚ ಆಗಮಿಸಲಿದ್ದಾರೆ’ ಎಂದು ತಿಳಿಸಿದರು.
ವೇದಿಕೆಯ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಮಾತನಾಡಿ, ‘ಕಿಗ್ಗಟ್ಟ್ ನಾಡ್ ಮ್ಯಾನ್ ಆಫ್ ದ ಇಯರ್ ಪ್ರಶಸ್ತಿ ವೇದಿಕೆಗೆ ಹೆಚ್ಚು ಗೌರವ ತರಲಿದೆ. ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಕೊಂಡಿರುವ ಹಿರಿಯರಿಗೆ ಮನ್ನಣೆ ಸಿಗುವಂತಾಗಲಿದೆ’ ಎಂದರು.
ಸಭೆಯಲ್ಲಿ ವೇದಿಕೆ ಕಾರ್ಯದರ್ಶಿ ಚೇಂದೀರ ಎಂ. ಬೋಪಣ್ಣ, ಸದಸ್ಯರಾದ ಮಾಣಿಪಂಡ ಪಾರ್ವತಿ ಜೋಯಪ್ಪ, ಕೇಚೇಟ್ಟಿರ ಕಾಮುಣಿ ಪೂಣಚ್ಚ, ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.