ADVERTISEMENT

ಶಿಕ್ಷಣದ ಗುಣಮಟ್ಟ ಸುಧಾರಣೆಗೆ ‘ಶಾಲಾಸಿದ್ಧಿ’ ಪೂರಕ-ಪಿ.ಎಸ್.ಮಚ್ಚಾಡೋ

ಕೂಡಿಗೆಯಲ್ಲಿ ನಡೆದ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 16:58 IST
Last Updated 4 ಏಪ್ರಿಲ್ 2021, 16:58 IST
ಕುಶಾಲನಗರ ಸಮೀಪದ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ನಡೆದ ಶಾಲಾಸಿದ್ಧಿ ತರಬೇತಿ ಕಾರ್ಯಕ್ರಮವನ್ನು ಡಿಡಿಪಿಐ ಪಿ.ಎಸ್.ಮಚ್ಚಾಡೋ ಉದ್ಘಾಟಿಸಿ ಮಾತನಾಡಿದರು
ಕುಶಾಲನಗರ ಸಮೀಪದ ಕೂಡಿಗೆ ಡಯಟ್ ಸಂಸ್ಥೆಯಲ್ಲಿ ನಡೆದ ಶಾಲಾಸಿದ್ಧಿ ತರಬೇತಿ ಕಾರ್ಯಕ್ರಮವನ್ನು ಡಿಡಿಪಿಐ ಪಿ.ಎಸ್.ಮಚ್ಚಾಡೋ ಉದ್ಘಾಟಿಸಿ ಮಾತನಾಡಿದರು   

ಕುಶಾಲನಗರ: ‘ಶಾಲಾಸಿದ್ಧಿ ಕಾರ್ಯಕ್ರಮ ವಿದ್ಯಾರ್ಥಿಗಳ ಕಲಿಕೆ, ಶೈಕ್ಷಣಿಕ ಪ್ರಗತಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯಜಿಲ್ಲಾ ಉಪ ನಿರ್ದೇಶಕ ಪಿ.ಎಸ್.ಮಚ್ಚಾಡೋ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಹಾಗೂ ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ವತಿಯಿಂದ ಡಯಟ್ ಸಂಸ್ಥೆಯಲ್ಲಿ 2020-21 ನೇ ಸಾಲಿನ ‘ಶಾಲಾಸಿದ್ಧಿ ಕಾರ್ಯಕ್ರಮ ಅನುಷ್ಠಾನಗೊಳಿಸುವ ಸಂಬಂಧ ನಡೆದ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಶಾಲಾಸಿದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸ್ವ-ಮೌಲ್ಯಮಾಪನದ ಮೂಲಕ ಶಾಲೆ, ಕಾಲೇಜಿನ ಸಮಗ್ರ ಅಭಿವೃದ್ಧಿ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸಲಾಗುವುದು’ ಎಂದರು.

ADVERTISEMENT

ಪದವಿ ಪೂರ್ವ ಶಿಕ್ಷಣ ಇಲಾಖೆಯಜಿಲ್ಲಾ ಉಪ ನಿರ್ದೇಶಕ ವಿಷ್ಣುಮೂರ್ತಿ ಮಾತನಾಡಿ, ‘ಈ ಕಾರ್ಯಕ್ರಮವು ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಹಾಗೂ ಶಾಲಾ-ಕಾಲೇಜಿನ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ’ ಎಂದು ಹೇಳಿದರು.

ಡಯಟ್‌ನ ಪ್ರಾಂಶುಪಾಲ ಎ.ಶ್ರೀಧರನ್ ಮಾತನಾಡಿ, ‘ಸಂಸ್ಥೆಗಳ ಸ್ವ– ಮೌಲ್ಯಮಾಪನದ ನಂತರ ಜಿಲ್ಲೆಯ ಡಯಟ್‌ನ ಪ್ರಾಂಶುಪಾಲರು, ಸಂಪನ್ಮೂಲ ಉಪನ್ಯಾಸಕರ ನೇತೃತ್ವದ ತಂಡವು ಶಾಲೆಗಳಿಗೆ ಭೇಟಿ ನೀಡಲಾಗುವುದು’ ಎಂದರು.

ಜಿಲ್ಲಾ ನೋಡಲ್ ಅಧಿಕಾರಿ ಕೆ.ವಿ.ಸುರೇಶ್ ಮಾತನಾಡಿ, ‘ ಈ ಕಾರ್ಯಕ್ರಮದಡಿ ಜಿಲ್ಲೆಯ 24 ಸರ್ಕಾರಿ ಪಿಯು ಕಾಲೇಜುಗಳು, 47 ಪ್ರೌಢಶಾಲೆಗಳು ಹಾಗೂ 450 ಸರ್ಕಾರಿ ಪ್ರಾಥಮಿಕ ಶಾಲೆಗಳು ಒಳಪಡಲಿವೆ’ ಎಂದು ತಿಳಿಸಿದರು.

ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು, ಪಿಯು ಕಾಲೇಜಿನ ಪ್ರಾಂಶುಪಾಲರು, ಶಿಕ್ಷಣಾಧಾರಿಗಳು ಹಾಗೂ ಸಂಪನ್ಮೂಲ ಶಿಕ್ಷಕರಿಗೆ ಕಾರ್ಯಾಗಾರ ಆಯೋಜಿಸಲಾಗಿತ್ತು.

ನೋಡಲ್ ಅಧಿಕಾರಿ ಸಿ.ಎಂ.ಮಹಾಲಿಂಗಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಬೀಳಗಿ, ಟಿ.ಎನ್.ಗಾಯತ್ರಿ,
ಸಂಪನ್ಮೂಲ ಶಿಕ್ಷಕರಾದ ಸತೀಶ್, ಮಂಜುಳಾ, ಶಾಂತಕುಮಾರ್, ಬಿಆರ್‌ಸಿಗಳಾದ ವನಜಾಕ್ಷಿ, ಶಶಿಧರ್, ಶಿಕ್ಷಣ ಸಂಯೋಜಕರು, ಪ್ರೌಢಶಾಲಾ ಮುಖ್ಯಶಿಕ್ಷಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.