ADVERTISEMENT

ಶನಿವಾರಸಂತೆ ವಿಡಿಯೊ ತಿರುಚಿದ ಆರೋಪ: ‘ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ’

ಶನಿವಾರಸಂತೆ ವಿಡಿಯೊ ತಿರುಚಿದ ಆರೋಪ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 21:16 IST
Last Updated 1 ಡಿಸೆಂಬರ್ 2021, 21:16 IST
ಮಡಿಕೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯ ಎಸ್‌.ಎನ್‌.ರಘು ಮಾತನಾಡಿದರು. ಎಚ್‌.ಆರ್‌.ಹರೀಶ್‌ಕುಮಾರ್‌, ಸಂದೀಪ್‌, ಶಾತವೀರ ವಸಂತ್‌ ಹಾಜರಿದ್ದರು
ಮಡಿಕೇರಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯ ಎಸ್‌.ಎನ್‌.ರಘು ಮಾತನಾಡಿದರು. ಎಚ್‌.ಆರ್‌.ಹರೀಶ್‌ಕುಮಾರ್‌, ಸಂದೀಪ್‌, ಶಾತವೀರ ವಸಂತ್‌ ಹಾಜರಿದ್ದರು   

ಮಡಿಕೇರಿ: ‘ಶನಿವಾರಸಂತೆಯ ಗಲಾಟೆ ಹಾಗೂ ಬಂದ್‌ಗೆ ಸಂಬಂಧಿಸಿದಂತೆ ವಿಡಿಯೊವೊಂದನ್ನು ತಿರುಚಲಾಗಿದೆಯೆಂದು ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಿರುವ ಶನಿವಾರಸಂತೆ ಪೊಲೀಸರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯ ಎಸ್‌.ಎನ್‌.ರಘು ಹೇಳಿದರು.

‘ಬಂದ್‌ ಕೈಬಿಡುವಂತೆ ಪೊಲೀಸರು ಮಾಡಿದ್ದ ಮನವಿಯನ್ನು ನಾವು ತಿರಸ್ಕರಿಸಿದ್ದೆವು. ಅವರ ಪ್ರಯತ್ನ ವಿಫಲವಾದಾಗ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ವಿಡಿಯೊ ತಿರುಚಿದ್ದಾರೆಂದು ವ್ಯವಸ್ಥಿತ ಸಂಚು ರೂಪಿಸಿದರು. ಹೋರಾಟ ಹತ್ತಿಕ್ಕಲು ಮಾಡಿದ ಹುನ್ನಾರಕ್ಕೆ ಬಗ್ಗುವುದಿಲ್ಲ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೇತೃತ್ವದಲ್ಲಿಯೇ ನ್ಯಾಯಯುತ ಹಾಗೂ ಸಮಗ್ರ ತನಿಖೆ ನಡೆಯಬೇಕು’ ಎಂದು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

’ವಿಡಿಯೊ ತನಿಖೆಯನ್ನೂ ನಡೆಸದೇ, ಎಫ್‌ಎಸ್‌ಐಎಲ್‌ಗೂ ಕಳುಹಿಸದೇ ಮೂವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಇದು ಹೇಗೆ ಸಾಧ್ಯ.

ADVERTISEMENT

‘ಗುಡುಗಳಲೆ ಜಾತ್ರೆ ಮೈದಾನದಲ್ಲಿ ಬೈಕ್‌ ಹಾಗೂ ಪಿಕಪ್‌ನಲ್ಲಿ ಬಂದು ಹಲ್ಲೆ ನಡೆಸಿದವರ ಮೇಲೆ ಜಾತಿ ನಿಂದನೆ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದೆವು. ಆದರೆ, ಪೊಲೀಸರು ದರೋಡೆ ಪ್ರಕರಣ ಮಾತ್ರ ದಾಖಲಿಸಿದ್ದರು. ಅದನ್ನು ಪ್ರಶ್ನಿಸಿ, ಬಂದ್‌ಗೆ ಕರೆ ನೀಡಿದಾಗ ವಿಡಿಯೊ ವಿಚಾರ ಹೊರಬಿತ್ತು’ ಎಂದು ಹೇಳಿದರು.

‘ನನ್ನ ರಾಜಕೀಯ ಜೀವನದಲ್ಲಿ ಮುಸ್ಲಿಂ ಸಮುದಾಯಕ್ಕೆ ನೆರವು ನೀಡಿದ್ದೇನೆ. ಆದರೆ, ವಿಸಿಎಸ್ ಕುಟುಂಬದಿಂದ ಶನಿವಾರಸಂತೆ ವಾತಾವರಣ ಹಾಳಾಗುತ್ತಿದೆ’ ಎಂದು ದೂರಿದರು.

ಪತ್ರಕರ್ತ ಎಚ್‌.ಆರ್‌.ಹರೀಶ್‌ಕುಮಾರ್‌ ಮಾತನಾಡಿ, ‘ನಾವು ವಿಡಿಯೊ ತಿರುಚಿದ್ದರೆ ಪೊಲೀಸರು ವಿಚಾರಣೆ ನಡೆಸಬೇಕಿತ್ತು. ಆದರೆ ವಿಚಾರಣೆಯನ್ನು ನಡೆಸಿಲ್ಲ. ಮೊಬೈಲ್‌ ಫೋನ್‌ ಅನ್ನೂ ವಶಕ್ಕೆ ಪಡೆದಿಲ್ಲ’ ಎಂದರು.

ಮುಖಂಡ ಶಾಂತವೀರ ವಂಸತ್‌ ಮಾತನಾಡಿ, ‘ಪೊಲೀಸರು ಮತ್ತೊಂದು ಶಾಂತಿಸಭೆ ಕರೆದು ಸೌಹಾರ್ದ ವಾತಾವರಣ ನಿರ್ಮಿಸಬೇಕು’ ಎಂದು ಕೋರಿದರು. ಹಿಂದೂ ಜಾಗರಣಾ ವೇದಿಕೆ ಸೋಮವಾರಪೇಟೆ ತಾಲ್ಲೂಕು ಘಟಕದ ಉಪಾಧ್ಯಕ್ಷ ಕೆ.ಎ.ಸಂದೀಪ್‌ ಹಾಜರಿದ್ದರು.

* ವಿಡಿಯೊ ತಿರುಚಿದ ಪ್ರಕರಣದಲ್ಲಿ ಸತ್ಯಾಂಶ ಹೊರಬರಬೇಕು. ಯಾರೇ ಆರೋಪಿ ಸ್ಥಾನದಲ್ಲಿದ್ದರೂ ಅವರಿಗೆ ಶಿಕ್ಷೆಯೂ ಆಗಬೇಕು
-ಎಸ್‌.ಎನ್‌.ರಘು, ಸದಸ್ಯ, ಗ್ರಾಮ ಪಂಚಾಯಿತಿ, ಶನಿವಾರಸಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.