ADVERTISEMENT

ಶನಿವಾರಸಂತೆ: ನಿಲ್ದಾಣ ಬಂತು, ಬಸ್‌ ಬರುವುದು ಯಾವಾಗ?

ಕೆ.ಎಸ್.ಗಿರೀಶ್
Published 26 ಜನವರಿ 2026, 8:13 IST
Last Updated 26 ಜನವರಿ 2026, 8:13 IST
ಶನಿವಾರಸಂತೆಯಲ್ಲಿ ನಿರ್ಮಾಣವಾಗಿ ಉದ್ಘಾಟನೆಗಾಗಿ ಕಾದಿರುವ ನೂತನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ
ಶನಿವಾರಸಂತೆಯಲ್ಲಿ ನಿರ್ಮಾಣವಾಗಿ ಉದ್ಘಾಟನೆಗಾಗಿ ಕಾದಿರುವ ನೂತನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ   

ಶನಿವಾರಸಂತೆ: ಪಟ್ಟಣದಲ್ಲಿ ಸುಸಜ್ಜಿತವಾದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಾಣ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದ್ದು, ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಬಹು ವರ್ಷಗಳ ಬೇಡಿಕೆ ಎನಿಸಿದ್ದ ಈ ಬಸ್‌ನಿಲ್ದಾಣದ ಕನಸು ಕೊನೆಗೂ ಈಡೇರಿದೆ. ಇನ್ನು ಬಸ್‌ಗಳ ಕೊರತೆಯ ಸಮಸ್ಯೆ ನೀಗುವುದು ಯಾವಾಗ ಎಂಬ ಪ್ರಶ್ನೆ ಮೂಡಿದೆ.

ಮುಖ್ಯವಾಗಿ, ಶನಿವಾರಸಂತೆಯಿಂದ ಗ್ರಾಮಾಂತರ ಭಾಗಗಳಿಗೆ ತೆರಳಲು ಸೂಕ್ತ ಬಸ್‌ವ್ಯವಸ್ಥೆ ಇಲ್ಲ. ಗ್ರಾಮೀಣ ಜನರ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಕೊರತೆಯಿಂದ ಸರ್ಕಾರದ ಪ್ರಮುಖ ಗ್ಯಾರಂಟಿ ಎನಿಸಿದ ‘ಶಕ್ತಿ’ ಯೋಜನೆ ಇದ್ದೂ ಇಲ್ಲದಂತಾಗಿದೆ.

ಹೊಸೂರು, ಚಿಕ್ಕತೋಳೂರು, ಕೂತಿ, ಬೆಂಬಲೂರು, ಬೆಸೂರು, ಅಂಕನಹಳ್ಳಿ, ಮನೆಹಳ್ಳಿಮಠ ಸೇರಿದಂತೆ ಇತರ ಗ್ರಾಮಾಂತರ ಭಾಗಕ್ಕೆ ಬಸ್‌ಗಳನ್ನು ನಿಯೋಜಿಸಬೇಕಿದೆ.

ADVERTISEMENT

ಇನ್ನು ಬೆಂಗಳೂರಿಗೆ ಶನಿವಾರಸಂತೆಯಿಂದ ರಾತ್ರಿ ವೇಳೆ ತೆರಳುವವರ ಪಾಡು ಸಹ ಶೋಚನೀಯವಾಗಿದೆ. ಸಂಜೆ 7ರ ನಂತರ ಇರುವುದು ಕೇವಲ ಎರಡೇ ಬಸ್‌. ಸೋಮವಾರಪೇಟೆಯಿಂದ ಹೊರಡುವ ಈ ಬಸ್‌ಗಳಲ್ಲಿ ವಾರಾಂತ್ಯದಲ್ಲಿ ಹಾಗೂ ರಜೆ ಇರುವಾಗ ಸೀಟ್ ಸಿಗುವುದು ಕಷ್ಟ. ಒಂದು ವೇಳೆ ಸೀಟು ದೊರೆಯದೇ ಇದ್ದರೆ ನಿಂತುಕೊಂಡೇ ಪ್ರಯಾಣಬೇಕಾದ ಸ್ಥಿತಿ ಇದೆ.

‘ಈ ಬಸ್‌ಗಳೂ ನಸುಕಿನ 3 ಗಂಟೆ ಹೊತ್ತಿಗೆ ಬೆಂಗಳೂರು ತಲುಪುತ್ತವೆ. ಅಲ್ಲಿಂದ ಬೇರೆ ಕಡೆ ಹೋಗಲು ಪ್ರಯಾಣಿಕರಿಗೆ ತೊಂದರೆಯಾಗುವುದರಿಂದ ಬೆಳಿಗ್ಗೆ 5 ಇಲ್ಲವೇ 6 ಗಂಟೆಗೆ ತಲುಪುವಂತಹ ಬಸ್‌ ವ್ಯವಸ್ಥೆ ಬೇಕು’ ಎಂದು ಈ ಭಾಗದ ಜನರು ಒತ್ತಾಯಿಸುತ್ತಾರೆ.

‘ಬೆಳಿಗ್ಗೆ 4.30ಕ್ಕೆ ಶನಿವಾರಸಂತೆ ಮೂಲಕ ಬೆಂಗಳೂರಿಗೆ ಹೊರಡುವ ಬಸ್‌ನಲ್ಲಿ ನಿತ್ಯವೂ ಸೀಟು ಸಿಗುವುದಿಲ್ಲ. ಹಾಗಾಗಿ, ಹೆಚ್ಚುವರಿ ಬಸ್‌ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡುತ್ತಾರೆ.

‌ಬೆಂಗಳೂರು ಭಾಗಕ್ಕಾದರೂ ಇಷ್ಟಾದರೂ ಬಸ್‌ ವ್ಯವಸ್ಥೆ ಇದೆ. ಆದರೆ, ಮಂಗಳೂರು ಭಾಗಕ್ಕಂತೂ ಬಸ್‌ ವ್ಯವಸ್ಥೆ ಇಲ್ಲವೇ ಇಲ್ಲ ಎನ್ನುವಂತಿದೆ. ಬೆಳಿಗ್ಗೆ 7 ಗಂಟೆಯ ನಂತರ ಒಂದೇ ಒಂದು ಬಸ್‌ ಇಲ್ಲ. ಮಂಗಳೂರು, ಉಡುಪಿ, ಪುತ್ತೂರು ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ಈ ಭಾಗದ ಹೆಚ್ಚಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಹಾಗೂ ಇವರ ಪೋಷಕರಿಗೆ ಅನುಕೂಲವಾಗುವಂತೆ ಸೂಕ್ತ ಬಸ್‌ ವ್ಯವಸ್ಥೆ ಕಲ್ಪಿಸಬೇಕಿದೆ.

ಸಕಲೇಶಪುರಕ್ಕೆ ಸಂಜೆ 5 ಗಂಟೆಗೆ ಕೊನೆ ಬಸ್‌, ಹಾಸನಕ್ಕೆ ಸಂಜೆ 6.30ಕ್ಕೆ ಕೊನೆ ಬಸ್‌, ಧರ್ಮಸ್ಥಳಕ್ಕೆ ಮಧ್ಯಾಹ್ನ ಮಾತ್ರ ಬಸ್‌ ಇದೆ. ಹೀಗೆ ಹೇಳುತ್ತಾ ಹೋದರೆ ಬಸ್‌ಗಳ ಕೊರತೆ ಒಂದರ ಹಿಂದೊಂದರಂತೆ ಬೆಳೆಯುತ್ತದೆ. ಇಷ್ಟೆಲ್ಲ ಕೊರತೆಗಳಲ್ಲಿ ಕೆಲವಾದರೂ ಕೊರತೆಗಳನ್ನು ಬಸ್‌ ನಿಲ್ದಾಣ ಉದ್ಘಾಟನೆಗೂ ಮುನ್ನ ನೀಗಿಸಿದರೆ ಬಸ್‌ನಿಲ್ದಾಣ ಉದ್ಘಾಟನೆಗೊಂಡಿದ್ದು ಸಾರ್ಥಕವಾಗುತ್ತದೆ.

ಕೋವಿಡ್ ನಂತರ ನಿಂತಿರುವ ಖಾಸಗಿ ಬಸ್‌ಗಳಿಗೆ ಬದಲಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಸಂಚಾರಕ್ಕೆ ನಿಯೋಜಿಸಬೇಕು ಎಂದು ಗ್ರಾಮೀಣ ಭಾಗದ ಜನರು ಮನವಿ ಮಾಡುತ್ತಾರೆ.

ಕೊಡ್ಲಿಪೇಟೆಯಿಂದ ಕುಶಾಲನಗರ ಹಾಗೂ ಕೊಡ್ಲಿಪೇಟೆಯಿಂದ ಮಡಿಕೇರಿಗೆ ತುರ್ತಾಗಿ ಕನಿಷ್ಠ 2 ಬಸ್‌ಗಳನ್ನಾದರೂ ನಿಯೋಜಿಸಬೇಕಿದೆ. ಈಗ ಕೆಎಸ್‌ಆರ್‌ಟಿಸಿ ಬಸ್‌ ಇಲ್ಲದೇ ಜನರು ಖಾಸಗಿ ಬಸ್‌ಗಳನ್ನೇ ನೆಚ್ಚಿಕೊಳ್ಳಬೇಕಿದೆ. ಕೊಡ್ಲಿಪೇಟೆ, ಶನಿವಾರಸಂತೆ ಭಾಗದಿಂದ ಕುಶಾಲನಗರ ಹಾಗೂ ಮಡಿಕೇರಿಗೆ ಸಾಕಷ್ಟು ಮಂದಿ ವಿದ್ಯಾರ್ಥಿಗಳು, ಸರ್ಕಾರಿ ನೌಕರರು, ಖಾಸಗಿ ನೌಕರರು, ವಿವಿಧ ಬಗೆಯ ನಿತ್ಯದ ವ್ಯಾಪಾರ ಮಾಡುವ ಜನರು ಪ್ರಯಾಣ ಮಾಡುತ್ತಾರೆ. ಇವರಿಗೆಲ್ಲ ಕೆಎಸ್ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಬೇಕಿದೆ.

ಕೊಡ್ಲಿಪೇಟೆಗೂ ಬಸ್‌ನಿಲ್ದಾಣ ಬೇಕಿದೆ

ಬಹು ವರ್ಷಗಳ ನಂತರ ಶನಿವಾರಸಂತೆಗೆ ಬಸ್‌ನಿಲ್ದಾಣ ನಿರ್ಮಿಸಲಾಯಿತು. ಇನ್ನು ಕೊಡ್ಲಿಪೇಟೆಯಲ್ಲಿ ಬಸ್‌ನಿಲ್ದಾಣ ನಿರ್ಮಿಸುವುದು ಯಾವಾಗ ಎಂಬ ಪ್ರಶ್ನೆಯೂ ಮೂಡಿದೆ. ಹೋಬಳಿ ಕೇಂದ್ರ ಮಾತ್ರವಲ್ಲ, ಗಡಿಭಾಗವೂ ಆಗಿರುವ ಕೊಡ್ಲಿಪೇಟೆಗೆ ಬಸ್‌ನಿಲ್ದಾಣವನ್ನು ತುರ್ತಾಗಿ ನಿರ್ಮಿಸಬೇಕು ಹಾಗೂ ಆಲೂರು ಸಿದ್ದಾಪುರಕ್ಕೂ ಬಸ್‌ ನಿಲ್ದಾಣ ಬೇಕು ಎಂಬುದು ಕೊಡ್ಲಿಪೇಟೆ ಜನರ ಒತ್ತಾಯವಾಗಿದೆ.

ಶನಿವಾರಸಂತೆಯಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಬಸ್‌ನಿಲ್ದಾಣ
ಶನಿವಾರಸಂತೆಯಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಬಸ್‌ನಿಲ್ದಾಣ

ಸೋಮವಾರಪೇಟೆಯಲ್ಲೂ ಬಸ್‌ಗಳಿಗೆ ಬರ!

ಸೋಮವಾರಪೇಟೆ: ತಾಲ್ಲೂಕು ಕೇಂದ್ರವಾಗಿರುವ ಸೋಮವಾರಪೇಟೆಯಲ್ಲೂ ಬಸ್‌ಗಳ ಕೊರತೆ ಇದೆ. ಸೋಮವಾರಪೇಟೆಯಿಂದ–ಮಂಗಳೂರು ಧರ್ಮಸ್ಥಳ ಸುಬ್ರಹ್ಮಣ್ಯ ಬೆಂಗಳೂರಿಗೆ ಸಾಕಾಗುಷ್ಟು ಬಸ್‌ಗಳು ಇಲ್ಲ. ಹುಬ್ಬಳ್ಳಿ ಧಾರವಾಡ ಶಿವಮೊಗ್ಗ ಸೇರಿದಂತೆ ಇತರ ಜಿಲ್ಲೆಗಳಿಗೆ ಬಸ್‌ ಇಲ್ಲವೇ ಇಲ್ಲ. ಸರ್ಕಾರಿ ನೌಕರರು ಮಾತ್ರವಲ್ಲ ಕಾರ್ಮಿಕರೂ ಬೇರೆ ಬೇರೆ ಜಿಲ್ಲೆಗಳಿಂದ ಬಂದು ಸೋಮವಾರಪೇಟೆಯಲ್ಲಿ ನೆಲೆಸಿದ್ದಾರೆ. ಇವರಿಗೆಲ್ಲ ತಮ್ಮ ತಮ್ಮ ಊರಿಗೆ ಹೋಗಲು ನೇರ ಬಸ್‌ ವ್ಯವಸ್ಥೆ ಬೇಕಿದೆ. ಗ್ರಾಮೀಣ ಸಾರಿಗೆಗಳ ಕೊರತೆಯೂ ಸೋಮವಾರಪೇಟೆ ತಾಲ್ಲೂಕಿನಲ್ಲಿ ಢಾಳಾಗಿದೆ. ಹಲವು ಗ್ರಾಮಗಳು ಸರ್ಕಾರಿ ಬಸ್‌ಗಳ ಮುಖವನ್ನೇ ನೋಡಿಲ್ಲ. ಎಲ್ಲ ಗ್ರಾಮಗಳಿಗೂ ನಿತ್ಯ ಬೆಳಿಗ್ಗೆ ಮಧ್ಯಾಹ್ನ ಮತ್ತು ಸಂಜೆ ಬಸ್‌ಗಳು ಬರುವಂತಹ ವ್ಯವಸ್ಥೆ ಕಲ್ಪಿಸಬೇಕಿದೆ. ಪ್ರವಾಸಿ ತಾಣಗಳಾದ ಮಲ್ಲಹಳ್ಳಿ ಜಲಪಾತ ಪುಷ್ಪಗಿರಿ ಮಕ್ಕಳಗುಡಿ ಬೆಟ್ಟ ಕೋಟೆ ಬೆಟ್ಟ ಸೇರಿದಂತೆ ಅನೇಕ ಭಾಗಗಳಿಗೂ ಕೆಎಸ್‌ಆರ್‌ಟಿಸ ಬಸ್‌ಗಳಿಲ್ಲ. ಬಸ್‌ನಲ್ಲಿ ಬೇರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರು ಖಾಸಗಿ ಟ್ಯಾಕ್ಸಿಗಳಲ್ಲೇ ಪ್ರವಾಸಿತಾಣಗಳಿಗೆ ಭೇಟಿ ನೀಡಬೇಕಿದೆ. ಹಣ ಇಲ್ಲದ ಮಧ್ಯಮವರ್ಗದವರಿಗೆ ಇದು ಹೊರೆಯಾಗಿ ಪರಿಣಮಿಸಿದೆ. ಹಾಗಾಗಿ ಎಲ್ಲ ಪ್ರವಾಸಿತಾಣಗಳಿಗೂ ನಿತ್ಯ ಒಂದೆರಡು ಬಾರಿಯಾದರೂ ಬಂದು ಹೋಗುವಂತಹ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಬೇಕಿದೆ.

ಪ್ರತಿಕ್ರಿಯೆಗಳು ಮಂಗಳೂರಿಗೆ ರಾತ್ರಿ ಬಸ್ ಆರಂಭಿಸಲಿ ಸೋಮವಾರಪೇಟೆ ತಾಲ್ಲೂಕು ಕೇಂದ್ರದಿಂದ ಇಲ್ಲಿಯವರೆಗೆ ಗ್ರಾಮೀಣ ಸಾರಿಗೆ ಮತ್ತು ದೂರದ ಊರುಗಳಿಗೆ ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗ ಮಾಡುತ್ತಿರುವುದರಿಂದ ಮಂಗಳೂರಿಗೆ ರಾತ್ರಿ ಬಸ್‌ಸಂಚಾರ ಪ್ರಾರಂಭಿಸಿದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.
ನಂಗಾರು ಕೀರ್ತಿಪ್ರಸಾದ್ ಕಾಫಿ ಬೆಳೆಗಾರರು ಐಗೂರು ಗ್ರಾಮ
ಸರ್ಮಪಕವಾದ ಬಸ್‌ ವ್ಯವಸ್ಥೆ ಕಲ್ಪಿಸಿ ಸೋಮವಾರಪೇಟೆ ತಾಲ್ಲೂಕು ಕೇಂದ್ರವಾದರೂ ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಹಲವಾರು ಗ್ರಾಮಗಳು ಇಂದಿಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನೋಡಿಲ್ಲ. ಇನ್ನಾದರೂ ಸಾರಿಗೆ ಸಂಸ್ಥೆ ಸರಿಯಾದ ಬಸ್ ವ್ಯವಸ್ಥೆ ಕಲ್ಪಿಸಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು.
ಎ.ಪಿ.ವೀರರಾಜು ಉದ್ಯಮಿ ಸೋಮವಾರಪೇಟೆ.
ಶೀಘ್ರದಲ್ಲಿ ಬಸ್‌ಸೌಕರ್ಯ ಕಲ್ಪಿಸಿ ಶನಿವಾರಸಂತೆಯಲ್ಲಿ ಬಸ್‌ನಿಲ್ದಾಣ ನಿರ್ಮಿಸಿರುವುದು ಸ್ವಾಗತಾರ್ಹ. ಇದಕ್ಕೆ ತಕ್ಕಂತೆ ಬಸ್‌ಸೌಕರ್ಯವನ್ನು ಮುಂದಿನ ದಿನಗಳಲ್ಲಿ ಕಲ್ಪಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ
ಕೆ.ಬಿ.ದಿನೇಶ್ ಕೋಟೆಯೂರು ಗ್ರಾಮ.
ಬೆಂಗಳೂರಿಗೆ ತೆರಳಲು ಇನ್ನಷ್ಟು ಬಸ್‌ ಬೇಕು ಶನಿವಾರಸಂತೆಯಿಂದ ಬೆಂಗಳೂರಿಗೆ ತೆರಳಲು ಬಸ್‌ ಸೌಕರ್ಯ ಬೇಕಿದೆ. ಈಗ ಬಸ್‌ ಸೌಕರ್ಯ ಇದೆ. ಆದರೆ ಇದು ಸಾಕಾಗುತ್ತಿಲ್ಲ. ಹಾಗಾಗಿ ಇನ್ನಷ್ಟು ಹೆಚ್ಚಿನ ಬಸ್‌ಗಳನ್ನು ನಿಯೋಜಿಸಬೇಕು. ಇದರಿಂದ ಬೆಂಗಳೂರಿಗೆ ತೆರಳುವವರಿಗೆ ಅನುಕೂಲವಾಗಲಿದೆ.
ಎಸ್.ಬಿ.ಭಾರತ್ ಕುಮಾರ್ ಅಧ್ಯಕ್ಷರು ಕೃಷಿ ಪತ್ತಿನ ಸಹಕಾರಿ ಸಂಘ ಗೌಡಳ್ಳಿ.
ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗಲಿ ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾಗುವ ರೀತಿಯಲ್ಲಿ ಬಸ್ ಸೌಕರ್ಯ ಕಲ್ಪಿಸಬೇಕು. ಈ ಕೆಲಸ ಆದಷ್ಟು ಶೀಘ್ರದಲ್ಲಿ ಆಗಬೇಕು. ಸಂಬಂಧಪಟ್ಟವರು ಆದಷ್ಟು ಬೇಗ ಗಮನ ಹರಿಸಬೇಕು.
ಅರ್ಜುನ್ ಶನಿವಾರಸಂತೆ.
ಡಿಪೊ ಆರಂಭವಾದ ನಂತರ ಹೊಸ್ ಬಸ್‌ ಶನಿವಾರಸಂತೆ ಸೇರಿದಂತೆ ಅನೇಕ ಭಾಗಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಬೇಕು ಎಂಬ ಬೇಡಿಕೆ ಇದೆ. ಫೆಬ್ರುವರಿ ಮೊದಲ ವಾರದಲ್ಲಿ ಶನಿವಾರಸಂತೆಯಲ್ಲಿ ಹೊಸ ಬಸ್‌ನಿಲ್ದಾಣ ಉದ್ಘಾಟನೆಯಾಗಲಿದೆ. ಕುಶಾಲನಗರದಲ್ಲಿ ಡಿಪೊ ಆರಂಭವಾದ ನಂತರ ಹೊಸ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗುವುದು
ಈರಸಪ್ಪ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್‌ ಡಿಪೊ ಮ್ಯಾನೇಜರ್ ಪುತ್ತೂರು ವಿಭಾಗ.
ಮಾಹಿತಿ: ಎಚ್.ಎಸ್.ಶರಣ್, ಡಿ.ಪಿ.ಲೋಕೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.