ಕುಶಾಲನಗರ: ವಿಶ್ವದಲ್ಲಿ ಅತ್ಯಂತ ಹಳೆಯ ಸನಾತನ ಧರ್ಮದ ಧಾರ್ಮಿಕ ಆಚರಣೆಗಳ ಪ್ರಕಾರ ಶಾಸ್ತ್ರ, ಸಂಪ್ರದಾಯವನ್ನು ಪಾಲಿಸುವಂತೆ ಆಗಬೇಕು ಎಂದು ವಾಸವಿ ದೀಕ್ಷಾ ಸಮಿತಿ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ ಹೇಳಿದರು.
ಪಟ್ಟಣದ ವಾಸವಿ ದೀಕ್ಷಾ ಸಮಿತಿಯ ನೇತೃತ್ವದಲ್ಲಿ ಆರ್ಯವೈಶ್ಯ ಮಂಡಳಿಯ ಸಹಯೋಗದಲ್ಲಿ ಬೈಪಾಸ್ ರಸ್ತೆಯ ವಾಸವಿ ಮಹಲ್ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪಂಚಾಂಗ ಕಲಿಕಾ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಆರ್ಯವೈಶ್ಯರು ಪಂಚಾಂಗ ಮತ್ತು ಕುಂಡಲಿಯ ಮೇಲೆ ಅಪಾರ ಭಕ್ತಿ ಮತ್ತು ನಂಬಿಕೆ ಹೊಂದಿದ್ದೇವೆ. ಅದನ್ನು ಕಲಿಸಲು ಆರ್ಯವೈಶ್ಯ ಮಹಾಸಭಾ ಶಂಕರ್ ಬಾಂಡ್ ನೇತೃತ್ವದಲ್ಲಿ ಒಂದು ತಂಡವನ್ನು ರಚಿಸಿ ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ತರಬೇತಿ ಕೊಡುತ್ತಿರುವುದನ್ನು ಅರಿತು ನಮ್ಮ ಊರಿನ ಜನರಿಗೂ ಅದರ ಪ್ರಯೋಜನ ದೊರಕಿಸುವ ಸದ್ದುದೇಶದಿಂದ ಈ ತರಬೇತಿ ಕಾರ್ಯಾಗಾರ ಆಯೋಜಿಸಿದ್ದೇವೆ’ ಎಂದು ಹೇಳಿದರು.
ಕನ್ನಿಕಾ ವಿಎಸ್ಎಸ್ಎನ್ ಅಧ್ಯಕ್ಷ ಬಿ.ಅಮೃತ್ ರಾಜ್ ಮಾತನಾಡಿ, ಇಂತಹ ಕಾರ್ಯಾಗಾರಗಳು ಧಾರ್ಮಿಕ ಆಚರಣೆಗಳ ಬಗ್ಗೆ ಇರುವ ಅನುಮಾನಗಳನ್ನು ನಿವಾರಿಸಿಕೊಳ್ಳಲು ಅವಕಾಶ ದೊರೆಯುತ್ತದೆ ಎಂದು ಹೇಳಿದರು.
ಕೊಡಗು ಜಿಲ್ಲಾ ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್.ಸತ್ಯನಾರಾಯಣ, ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷ ಬಿ.ಎಲ್.ಅಶೋಕ್ ಕುಮಾರ್, ಮಹಿಳಾ ಮಂಡಳಿಯ ಅಧ್ಯಕ್ಷೆ ಲಕ್ಷ್ಮೀ ಶ್ರೀನಿವಾಸ್, ಯುವತಿಯರ ಮಂಡಳಿಯ ಅಧ್ಯಕ್ಷೆ ಅನುಷಾ ಅರ್ಜುನ್, ವಾಸವಿ ದೀಕ್ಷಾ ಸಮಿತಿಯ ಕಾರ್ಯದರ್ಶಿ ವಾಣಿಶ್ರೀ, ಖಜಾಂಚಿ ಬಿ.ಎಲ್.ಸತೀಶ್, ನಿರ್ದೇಶಕರಾದ ಕೃಷ್ಣಮೂರ್ತಿ, ಕೆ.ಎಸ್.ನಾಗೇಶ್, ನಾಗಮಣಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.