ಸೋಮವಾರಪೇಟೆ: ತಾಲ್ಲೂಕಿನ ಕುಂದಳ್ಳಿ, ಕುಮಾರಳ್ಳಿ ಗ್ರಾಮಕ್ಕೆ ಸಮರ್ಪಕವಾಗಿ ವಿದ್ಯುತ್ ನೀಡಬೇಕು ಮತ್ತು 11 ಕೆವಿ ವಿದ್ಯುತ್ ಮಾರ್ಗ ಬದಲಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಇಲ್ಲಿನ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕಳೆದ 20 ದಿನಗಳಿಂದ ಗ್ರಾಮಗಳಿಗೆ ವಿದ್ಯುತ್ ಸ್ಥಗಿತಗೊಂಡಿದೆ. ಸೆಸ್ಕ್ ಎಂಜಿನಿಯರ್‌ಗೆ ಈ ಬಗ್ಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುರಿದು ಬಿದ್ದಿರುವ ಕಂಬಗಳನ್ನು ಬದಲಾಯಿಸುವಲ್ಲಿ ಎಂಜಿನಿಯರ್ ವಿಫಲರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದಲೇ 11 ಕೆವಿ ವಿದ್ಯುತ್ ಮಾರ್ಗವನ್ನು ರಸ್ತೆ ಬದಿಗೆ ಅಥವಾ ಬದಲಾಯಿಸಿ ನೀಡುವಂತೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಯಡೂರು, ಕಂಬಳ್ಳಿ, ಮಾರ್ಗವು ಅರಣ್ಯ ಪ್ರದೇಶದೊಳಗೆ ಹಾದು ಹೋಗಿರುವುದರಿಂದ ಆಗಾಗ್ಗೆ ಮರಗಳು ಬಿದ್ದು, ಮಳೆಗಾಲದಲ್ಲಿ ತಿಂಗಳುಗಟ್ಟಲೆ ವಿದ್ಯುತ್ ಸ್ಥಗಿತವಾಗುತ್ತಿದೆ. ಈ ಹಿನ್ನೆಲೆ ಮಾರ್ಗವನ್ನು ಬದಲಿಸಬೇಕೆಂದು ಒತ್ತಾಯಿಸಿದರು.
ಶಾಂತಳ್ಳಿಯಿಂದ ಬೆಟ್ಟದಳ್ಳಿ, ಬೇಕನಳ್ಳಿ, ಕುಂದಳ್ಳಿ ಮುಖ್ಯರಸ್ತೆಯ ಬದಿಯಲ್ಲಿ ಕಂಬಗಳನ್ನು ಅಳವಡಿಸಿ ಹೊಸ ಮಾರ್ಗ ರಚಿಸಬೇಕು. ಅಥವಾ ಬಸವನಕಟ್ಟೆ, ನಗರಳ್ಳಿಯಿಂದ ರಸ್ತೆ ಬದಿಯಲ್ಲಿ ಕಂಬಗಳನ್ನು ಅಳವಡಿಸಿ ಕುಂದಳ್ಳಿ, ಕುಮಾರಳ್ಳಿಗೆ ವಿದ್ಯುತ್ ಒದಗಿಸಬೇಕು. ಆಗಸ್ಟ್ ಅಂತ್ಯದೊಳಗೆ ಈ ಕೆಲಸ ಆರಂಭವಾಗದಿದ್ದರೆ ಸೆಸ್ಕ್ ಕಚೇರಿ ಎದುರು ಗ್ರಾಮಸ್ಥರು ಆಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗ್ರಾಮಸ್ಥರ ಮನವಿ ಅಲಿಸಿದ ಎಂಜಿನಿಯರ್, ಮುಂದಿನ ಎರಡು ದಿನದೊಳಗೆ ವಿದ್ಯುತ್ ಮಾರ್ಗಗಳನ್ನು ಸರಿಪಡಿಸಿ ಗ್ರಾಮಗಳಿಗೆ ವಿದ್ಯುತ್ ಒದಗಿಸಲಾಗುವುದು. ನೂತನ ಮಾರ್ಗ ಅಳವಡಿಕೆ ಸಂಬಂಧ ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಜೆ. ತಮ್ಮಯ್ಯ, ಕುಮಾರಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯು.ಕೆ. ದೇಶ್ ರಾಜ್, ಕುಂದಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಕುಂದಳ್ಳಿ, ಕುಮಾರಳ್ಳಿ ಗ್ರಾಮ ಸಮಿತಿ ಕಾರ್ಯದರ್ಶಿ ಕೆ.ಡಿ. ಕಿರಣ್, ಪ್ರಮುಖರಾದ ಯು.ಬಿ. ಗಿರೀಶ್, ಕೆ.ಈ. ಪ್ರದೀಪ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.